ಸಿದ್ಧಾಪುರ ತಾಲೂಕಿನ ಬಾಳೂರಿನ ತೂಗುಸೇತುವೆ ಪುನರ್ ನಿರ್ಮಾಣ ಮಾಡುವಲ್ಲಿ ಸ್ಥಳಿಯರು ಯಶಸ್ವಿಯಾಗಿದ್ದಾರೆ.
ಆಗಸ್ಟ್ ನಲ್ಲಿ ಸುರಿದ ಮಹಾಮಳೆಯಲ್ಲಿ ಈ ತೂಗುಸೇತುವೆ ಶಿಥಿಲಗೊಂಡು 8 ರ ಆಕಾರಕ್ಕೆ ತಿರುವಿತ್ತು ನಂತರ ಸ್ಥಳಿಯ ಪಂಚಾಯತ್ ಶಾಸಕರು, ಸಂಸದರಿಗೆ ಮನವಿ ನೀಡಿದ ಮೇಲೂ ಕೆಲಸ ಆಗದ ಹಿನ್ನೆಲೆಯಲ್ಲಿ ಸ್ಥಳಿಯರೇ ಈ ತೂಗುಸೇತುವೆ ಪುನರ್ ನಿರ್ಮಾಣ ಮಾಡಿದ್ದಾರೆ. ಕಾನಸೂರಿಗೆ ಸಮೀಪದ ಬಾಳೂರಿನಿಂದ ಕೆಂದಿಗೆತೋಟ, ಹಂದಿಮನೆ,ಹಂಚಳ್ಳಿ ಬರಗದ್ದೆ ಸೇರಿದ ಕೆಲವು ಗ್ರಾಮಗಳ 50 ಕ್ಕೂ ಹೆಚ್ಚು ಮನೆಗಳು ಈ ಭಾಗದಲ್ಲಿವೆ. ಆದರೂ ಈ ಗ್ರಾಮಗಳಿಗೆ ಸೇತುವೆ, ರಸ್ತೆಗಳಿಲ್ಲ. ಕಳೆದ ಕೆಲವು ವರ್ಷಗಳ ಹಿಂದೆ ಸ್ಥಳಿಯ ದಾನಿಗಳು, ಸಾರ್ವಜನಿಕರಿಂದಲೇ ತೂಗು ಸೇತುವೆ ನಿರ್ಮಿಸಿಕೊಂಡಿದ್ದ ಇಲ್ಲಿಯ ಜನರು ಈ ವರ್ಷ ತೂಗು ಸೇತುವೆ ಶಿಥಿಲಗೊಂಡಾಗ ಕಂಗಾಲಾಗಿದ್ದರು.
ಯಾಕೆಂದರೆ ಈ ಸೇತುವೆಯ ಮೂಲಕವೇ ಈ ಗ್ರಾಮಗಳ ಜನರು, ಗರ್ಭಿಣಿಯರು, ಬಾಣಂತಿಯರು, ಅಂಗವಿಕಲರು, ವಿದ್ಯಾರ್ಥಿಗಳು ಪ್ರತಿದಿನ ಸಾಗಬೇಕು. ಈ ಜನರ ಬೇಡಿಕೆಯ ಕೂಗು ಇಲ್ಲಿಯ ಶಾಸಕರು, ಸಂಸದರಿಗೆ ಕೇಳಲಿಲ್ಲ. ಆದರೆ ಈ ಭಾಗದ ಗ್ರಾಮಪಂಚಾಯತ್ ಸದಸ್ಯ ಆನಂದ ಪೈ ಈ ಜನರ ಬೇಡಿಕೆಗೆ ಸ್ಫಂದಿಸಿದರು.
ಸಹೋದರ ಉಪೇಂದ್ರ ಪೈ ಸಹಕಾರ ಪಡೆದ ಆನಂದ ಪೈ ತಾನೇ ಖುದ್ದು ನಿಂತು ಗ್ರಾಮಪಂಚಾಯತ್ ನ ಬಿಡಿಗಾಸು 5 ಸಾವಿರ ಅನುದಾನದೊಂದಿಗೆ ಮತ್ತಷ್ಟು ಸಾವಿರಗಳನ್ನು ಸೇರಿಸಿ ಈ ತೂಗು ಸೇತುವೆ ದುರಸ್ಥಿ ಮಾಡಿಸಿದರು.
ಈಗ ತಾತ್ಕಾಲಿಕವಾಗಿ ಸಿದ್ಧವಾಗಿರುವ ತೂಗುಸೇತುವೆ ಹೆಚ್ಚೆಂದರೆ ಮತ್ತೊಂದು ಮಳೆಗಾಲದ ವರೆಗೆ ತಾಳಬಹುದು, ನಂತರ ಈ ತೂಗುಸೇತುವೆ ಬಳಸುವವರು ಎಚ್ಚರಿಕೆಯಿಂದಿರದಿದ್ದರೆ ಅಪಾಯವಾಗುವ ಸಾಧ್ಯತೆಗಳಿವೆ. ಈ ಅಪಾಯದ ಸಾಧ್ಯತೆ ಗೃಹಿಸಿರುವ ಆನಂದ ಪೈ ಶಾಸಕರ ಬೇಡಿಕೆಯಂತೆ ಒಂದು ಕೋಟಿ ವೆಚ್ಚದ ಕಿರು ಸೇತುವೆಗೆ ಅಂದಾಜುಪತ್ರ ತಯಾರಿಸಿ ಶಾಸಕರಿಗೆ ಕಳುಹಿಸಿದ್ದಾರೆ. ಈ ವರೆಗೆ ಈ ತೊಂದರೆ,ರಗಳೆಗಳಿಗೆ ಸ್ಫಂದಿಸದ ಸ್ಥಳಿಯ ಶಾಸಕ, ಸಂಸದರು ಈ ಭಾಗಕ್ಕೆ ಬರುವುದೇ ಕಡಿಮೆ. ಇಲ್ಲಿಯ ಜನಪ್ರತಿನಿಧಿಗಳು ಪಕ್ಷಪಾತ ಮಾಡುತ್ತಾರೆ. ಈ ಭಾಗದಲ್ಲಿ ತಮಗೆ ಬೇಕಾದವರು,ಹೆಚ್ಚಿನ ಮತಗಳು ಇಲ್ಲದಿರುವುದರಿಂದ ಈ ದುರ್‍ವ್ಯವಸ್ಥೆ ಎನ್ನುವ ಅಸಮಧಾನ ಸ್ಥಳಿಯರದ್ದು.
ಹಿಂದೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಈ ತೂಗು ಸೇತುವೆಗೆ ಬೇಡಿಕೆ ಸಲ್ಲಿಕೆಯಾಗಿದ್ದರೂ ಅಧ್ಯಕ್ಷರ ಬದಲಾವಣೆಯಿಂದ ಈ ಬೇಡಿಕೆ ಅನುಷ್ಠಾನ ವಾಗಲೇ ಇಲ್ಲ. ಸ್ಥಳಿಯ ಸಂಸದರಂತೂ ಈ ಭಾಗಕ್ಕೆ ಗಗನ ಕುಸುಮ,ಶಾಸಕರು ಬಂದು ಭರವಸೆ ಕೊಡುತ್ತಾರೆ, ಸ್ವಸಮೂದಾಯದ ದೇವಾಲಯಗಳಿಗೆ ಸರ್ಕಾರದ ಅನುದಾನ ಕೊಟ್ಟು ಸರ್ಕಾರಿ ಸ್ವತ್ತನ್ನೂ ಜಾತಿಗೆ ಧಾರೆಎರೆಯುತ್ತಾರೆ ಎನ್ನುವ ಸ್ಥಳೀಯರು ಜನಪ್ರತಿನಿಧಿಗಳು ಕುರುಡರಂತಿದ್ದರೆ ಸರ್ಕಾರ ಹೇಗೆ ನಮ್ಮ ಕಡೆ ದೃಷ್ಟಿಬೀರೀತು ಎನ್ನುವ ನೋವಿನ ಪ್ರಶ್ನೆ ಎತ್ತುತ್ತಾರೆ.
ಹೀಗೆ ಆಳುವವರು, ಅಧಿಕಾರಿಗಳು, ಜನಪ್ರತಿನಿಧಿಗಳ ಉಪೇಕ್ಷೆಗೆ ಒಳಗಾಗಿರುವ ಈ ಪ್ರದೇಶ, ಈ ಭಾಗದ ಅನುಕೂಲಕ್ಕೆ ತೂಗು ಸೇತುವೆ ಅಥವಾ ಸೇತುವೆ ಅನಿವಾರ್ಯ ಈ ಬಗ್ಗೆ ಸ್ಫಂದಿಸುವ ದಿನಗಳಿಗಾಗಿ ,ಜನಗಳಿಗಾಗಿ ಸ್ಥಳಿಯರು ಎದುರು ನೋಡುತಿದ್ದಾರೆ.
ನಮ್ಮ ಭಾಗದವರೆ ಹಿಂದೆ ಸಂಸದರಾಗಿದ್ದರು. ಈಗಿನ ಸಂಸದರಂತೂ ಈ ಭಾಗಕ್ಕೆ ಬಂದಿದ್ದೇ ಇಲ್ಲ. ಚುನಾವಣೆ ಸಮಯದಲ್ಲಿ ಅವರ ಪಕ್ಷ, ಪ್ರೀತಿಯ ಜನರು ಬರುತ್ತಾರೆ.ಶಾಸಕರೂ ಇಲ್ಲೇ ದೇವಸ್ಥಾನ, ಸಂಬಂಧಿಗಳ ಮನೆಗೆ ಬರುತ್ತಾರೆ. ಆದರೆ ಯಾರಿಂದಲೂ ತೂಗು ಸೇತುವೆ ಮಾಡುವ ಕೆಲಸ ಆಗಿಲ್ಲ.
-ಸದಾನಂದ ಮಡಿವಾಳ, ಸ್ಥಳಿಯ.
ಇಲ್ಲಿಯ ಶಾಸಕರು, ಸಂಸದರಿಗೆ ತಾವು ಕೆಲಸಮಾಡದಿದ್ದರೂ ಬಹುಮತದಿಂದ ಗೆಲ್ಲುತ್ತೇವೆಂಬ ಉಡಾಫೆ. ಹಾಗಾಗಿ ಹಲವು ವರ್ಷಗಳಿಂದ ಜನಪ್ರತಿನಿಧಿಗಳಾಗಿದ್ದರೂ ಅನಂತಕುಮಾರ ಹೆಗಡೆ ಮತ್ತು ವಿಶ್ವೇಶ್ವರ ಹೆಗಡೆ ಈ ಕ್ಷೇತ್ರದ ಜನತೆ, ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಕೇಳುವುದೂ ಇಲ್ಲ, ನಮ್ಮಿಂದ ಏನನ್ನೂ ಕೇಳುವುದೂ ಇಲ್ಲ ನಮಗೆ ಏನನ್ನೂ ಹೇಳುವುದೂ ಇಲ್ಲ ಹಾಗಾಗಿ ಇಲ್ಲಿಯ ತೊಂದರೆಗಳು ಸಮಸ್ಯೆಯಾಗೇ ಮುಂದುವರಿದಿವೆ.
-ಗುರುಪ್ರಸಾದ ಹೆಗಡೆ, ಸ್ಥಳಿಯ