
ಪ್ರಕೃತಿ ವಿಕೋಪ ಹಾಗೂ ಮತ್ತಿತರ ಕಾರಣಗಳಿಂದ ಹೈನುಗಾರಿಕೆ ನಡೆಸುವುದು ಅಸಾಧ್ಯವಾಗಿದೆ. ದಿನದಿಂದ ದಿನಕ್ಕೆ ಪಶು ಆಹಾರದ ಬೆಲೆ ಏರಿಕೆಯಾಗುತ್ತಿದ್ದು ಹಾಲಿನ ದರ ಮಾತ್ರ ಹಾಗೆ ಇದೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ದೃಷ್ಠಿಯಿಂದ ರೈತರಿಂದ ಖರೀದಿಸುವ ಹಾಲಿನ ದರವನ್ನು ಧಾರವಾಡ ಹಾಲು ಒಕ್ಕೂಟ ಹೆಚ್ಚಿಸಬೇಕೆಂದು ಹಾರ್ಸಿಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರು ಆಗ್ರಹಿಸಿದ್ದಾರೆ.
ಸಂಘದ ಅಧ್ಯಕ್ಷ ಶ್ರೀಧರ ಎಂ.ಭಟ್ಟ ಅಧ್ಯಕ್ಷತೆಯಲ್ಲಿ ನಡೆದ ಸಂಘದ 2018-19ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಸದಸ್ಯರು ಮಾತನಾಡಿ ಈ ವರ್ಷದ ತೀವೃ ಮಳೆಯಿಂದ ಎಲ್ಲ ಬೆಳೆಗಳು ನಾಶವಾಗಿರುವುದರಿಂದ ಹೈನುಗಾರಿಕೆ ಮಾಡುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಹಾಗೂ ಸಂಬಂಧ ಪಟ್ಟ ಒಕ್ಕೂಟಗಳು ಹಾಲಿನ ದರವನ್ನು ಏರಿಸಿ ರೈತರ ಹಿತ ಕಾಪಾಡುವುದಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.
ಸಂಘ ಈ ವರ್ಷದಲ್ಲಿ 2ಲಕ್ಷದ 96ಸಾವಿರದಷ್ಟು ವ್ಯಾಪಾರಿ ಲಾಭ ಹೊಂದಿದೆ ಎಂದು ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ತಿಳಿಸಿದರು. ಇದೇ ವೇಳೆಯಲ್ಲಿ ಸಂಘದ ಅಭಿವೃದ್ಧಿ ಕುರಿತು ಚರ್ಚೆ ನಡೆಯಿತು.


