ಸಿದ್ಧಾಪುರದ ಮನೆಮಗಳಾಗಿ ಶಿರಸಿಯಲ್ಲಿ ನೆಲೆಸಿ,ಕಾವ್ಯದ ಮೂಲಕ ಹಿರೇಕೈ, ಕಂಡ್ರಾಜಿ ಮತ್ತು ಉತ್ತರಕನ್ನಡವನ್ನು ಪರಿಚಯಿಸಿರುವ ಉದಯೋನ್ಮುಖ ಕವಿಯತ್ರಿ ಶೋಭಾ ಹಿರೇಕೈ ಯವರ ಕವನ ಸಂಕಲ ಅವ್ವ ಮತ್ತು ಅಬ್ಬಲಿಗೆ ರವಿವಾರ ಶಿರಸಿ ಟಿ.ಎಸ್.ಎಸ್. ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.
ನಾಡಿನ ಗಣ್ಯರು, ಬರಹಗಾರರು ಸೇರುವ ವೇದಿಕೆಯಲ್ಲಿ ಬಿಡುಗಡೆಯಾಗಲಿರುವ ಈ ಕವನ ಸಂಕಲನ ತನ್ನ ವಿಶಿಷ್ಟತೆ,ನಾವಿನ್ಯತೆಯಿಂದ ಹೆಸರು ಮಾಡಿದೆ. ಕಳೆದ ಒಂದು ದಶಕದ ಅವಧಿಗಿಂತಲೂ ಹಿಂದಿನಿಂದ ಕವನ ರಚನೆ ಮೂಲಕ ಹೆಸರು ಮಾಡಿರುವ ಶೋಭಾ ಕವನಗಳಲ್ಲಿ ನಮ್ಮತನ, ದೇಶಿಯತೆ, ಬಂಡಾಯ, ಕೊಡಚಿಕೊಳ್ಳುವಿಕೆ ಎಲ್ಲವೂ ಮೇಳೈಸಿವೆ.
ವಿಭಿನ್ನತೆ, ವೈಶಿಷ್ಟತೆ,ನೆಲಮೂಲದ ಸೊಬಗು-ಸೊಗಡುಗಳನ್ನು ಪ್ರತಿಬಿಂಬಿಸುತ್ತಾ ಪ್ರೇಮಧರ್ಮಕ್ಕಾಗಿ ಕಾತರಿಸುವ ಈ ಕವಿತೆಗಳ ಗುಚ್ಛ ಒಂಥರಾ ಚೇತೋಹಾರಿಯಾದ ಅನುಭವ ನೀಡಿ ಚಿತ್ತಾಕರ್ಷಣೆಮಾಡುವಂತಿದೆ.
ಮರ,ಸಸ್ಯ,ನದಿ ಸಂಹಿತೆ ಅಮೃತವರ್ಷಗರೆದಿರುವ ಈ ಸಂಕಲನದಿಂದ ಶೋಭಾ ಕಾವ್ಯಲೋಕದಲ್ಲಿ ಶೋಭಾಯಮಾನಳಾಗುವ ಎಲ್ಲಾ ಭರವಸೆ ಮೂಡಿಸಿದ್ದಾಳೆ. ಕವನಗಳೊಂದಿಗೆ ಚಂದದ ಮುನ್ನುಡಿ, ಬೆನ್ನುಡಿಗಳು ಸಂಕಲನದ ಸೊಬಗು ಹೆಚ್ಚಿಸಿವೆ.