ಸಿದ್ಧಾಪುರ ತಾಲೂಕಿನ ಪಿ.ಆಯ್. ಆಗಿ ಪ್ರಕಾಶ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಗೆ ಹೊಸಬರಲ್ಲದ ಪ್ರಕಾಶ ಸಿದ್ಧಾಪುರಕ್ಕೆ ಹೊಸಬರು.
ಈ ಹಿಂದೆ ಇಲ್ಲಿದ್ದ ವೀರೇಂದ್ರಕುಮಾರ,ಜಯರಾಮಗೌಡರ ನಂತರ ಸಿದ್ಧಾಪುರದ ಶಾಂತಿ-ಸುವ್ಯವಸ್ಥೆ ಹದಗೆಡದಿದ್ದರೂ ಇಸ್ಪೀಟ್,ಓ.ಸಿ.,ಮಟಕಾ,ಮಂಡ್ಲದಂಥಹ ವ್ಯವಹಾರಗಳು ಮಿತಿಮೀರಿದ್ದವು.
ಗ್ರಾಮೀಣ ಪ್ರದೇಶದಲ್ಲಿ ಸಾರಾಯಿ ವಿರೋಧಿ ಚಳವಳಿ ನಡೆಸಿದ ಕೆಲವು ಜನಪ್ರತಿನಿಧಿಗಳು,ಸಂಘ,ಪಕ್ಷಗಳು ನಗರದಲ್ಲಿ ಬೇನಾಮಿ,ಹರಾಮಿ ನಕಲಿ ಹೆಸರಿನ ಕ್ಲಬ್‍ಗಳ ಮೂಲಕ ಇಸ್ಫೀಟ್ ವ್ಯವಹಾರ ನಡೆಸುತಿದ್ದರು. ಇದರಿಂದಾಗಿ ನಗರದ ಏಕೈಕ ಖಾಸಗಿ ವಸತಿಗೃಹ ಇಸ್ಫೀಟ್ ಪಂಟರುಗಳಿಂದ ತುಂಬಿ ತುಳುಕುತಿತ್ತು ಎನ್ನುವ ಮಾಹಿತಿಗಳಿವೆ.
ಹಿಂದಿನ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜಾತ್ರೆ,ಸಮಾರಾಧನೆಯ ಕಾರ್ಯಕ್ರಮಗಳಲ್ಲಿ ಖಾಕಿ ನೆರವಿನಿಂದಲೇ ಮಂಡ್ಲಗಳ ಆಟ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರ ವಿರೋಧ ವ್ಯಕ್ತವಾಗಿತ್ತು. ಇದೇ ಅವಧಿಯಲ್ಲಿ ಓ.ಸಿ.ವ್ಯವಹಾರ ಹೆಚ್ಚಿತ್ತು ಎನ್ನಲಾಗುತ್ತಿದೆ.
ಸಿದ್ಧಾಪುರದಲ್ಲಿ ಓ.ಸಿ.ವ್ಯವಹಾರದಲ್ಲಿ ಆನಂದ ಕಾಣುವ ಕೆಲವು ವ್ಯಕ್ತಿಗಳಿದ್ದು ಈಗ ಅವರ ವ್ಯವಹಾರ ಗ್ರಾಮೀಣ ಪ್ರದೇಶದಲ್ಲಿ ಆನಂದದಿಂದಲೇ ಸಾಗಿರುವ ಮಾಹಿತಿ ಇದೆ. ಹೀಗೆ ಹಿಂದಿದ್ದ ಅಕ್ರಮವ್ಯವಹಾರಗಳು ಈಗಿನ ಗುಲಾಮಿ ಸರ್ಕಾರದಲ್ಲಿ ಮಿತಿಮೀರಿದ್ದು ಪೊಲೀಸರು ವಾಹನ ಸವಾರರನ್ನು ಹೆದರಿಸುವುದು, ಅಕ್ರಮ ವ್ಯಹಾರಿಗಳನ್ನು ಬೆಂಬಲಿಸುವುದು ಮಾಡುತಿದ್ದಾರೆ ಎನ್ನುವ ಗುರುತರ ಆರೋಪಗಳಿದ್ದವು. ಜಿಲ್ಲೆಗೆ ಹೊಸ ಪೊಲೀಸ್ ವರಿಷ್ಠಾಧಿಕಾರಿಗಳ ಆಗಮನವಾಗುತ್ತಲೇ ಗರಿಗೆದರಿದ ಅಕ್ರಮ ವ್ಯವಹಾರಗಳನ್ನು ನಿಯಂತ್ರಿಸುವ ಕೆಲಸ ಹೊಸ ಪಿ.ಆಯ್.ಗಳಿಂದ ಆಗಬೇಕಾಗಿದೆ.
ರವಿವಾರ ಶಿರಸಿಯಲ್ಲಿ
ಅವ್ವ ಮತ್ತು ಅಬ್ಬಲಿಗೆ ಹೆರಿಗೆ
ಸಿದ್ಧಾಪುರದ ಮನೆಮಗಳಾಗಿ ಶಿರಸಿಯಲ್ಲಿ ನೆಲೆಸಿ,ಕಾವ್ಯದ ಮೂಲಕ ಹಿರೇಕೈ, ಕಂಡ್ರಾಜಿ ಮತ್ತು ಉತ್ತರಕನ್ನಡವನ್ನು ಪರಿಚಯಿಸಿರುವ ಉದಯೋನ್ಮುಖ ಕವಿಯತ್ರಿ ಶೋಭಾ ಹಿರೇಕೈ ಯವರ ಕವನ ಸಂಕಲ ಅವ್ವ ಮತ್ತು ಅಬ್ಬಲಿಗೆ ರವಿವಾರ ಶಿರಸಿ ಟಿ.ಎಸ್.ಎಸ್. ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.
ನಾಡಿನ ಗಣ್ಯರು, ಬರಹಗಾರರು ಸೇರುವ ವೇದಿಕೆಯಲ್ಲಿ ಬಿಡುಗಡೆಯಾಗಲಿರುವ ಈ ಕವನ ಸಂಕಲನ ತನ್ನ ವಿಶಿಷ್ಟತೆ,ನಾವಿನ್ಯತೆಯಿಂದ ಹೆಸರು ಮಾಡಿದೆ. ಕಳೆದ ಒಂದು ದಶಕದ ಅವಧಿಗಿಂತಲೂ ಹಿಂದಿನಿಂದ ಕವನ ರಚನೆ ಮೂಲಕ ಹೆಸರು ಮಾಡಿರುವ ಶೋಭಾ ಕವನಗಳಲ್ಲಿ ನಮ್ಮತನ, ದೇಶಿಯತೆ, ಬಂಡಾಯ, ಕೊಡಚಿಕೊಳ್ಳುವಿಕೆ ಎಲ್ಲವೂ ಮೇಳೈಸಿವೆ.
ವಿಭಿನ್ನತೆ, ವೈಶಿಷ್ಟತೆ,ನೆಲಮೂಲದ ಸೊಬಗು-ಸೊಗಡುಗಳನ್ನು ಪ್ರತಿಬಿಂಬಿಸುತ್ತಾ ಪ್ರೇಮಧರ್ಮಕ್ಕಾಗಿ ಕಾತರಿಸುವ ಈ ಕವಿತೆಗಳ ಗುಚ್ಛ ಒಂಥರಾ ಚೇತೋಹಾರಿಯಾದ ಅನುಭವ ನೀಡಿ ಚಿತ್ತಾಕರ್ಷಣೆಮಾಡುವಂತಿದೆ.
ಮರ,ಸಸ್ಯ,ನದಿ ಸಂಹಿತೆ ಅಮೃತವರ್ಷಗರೆದಿರುವ ಈ ಸಂಕಲನದಿಂದ ಶೋಭಾ ಕಾವ್ಯಲೋಕದಲ್ಲಿ ಶೋಭಾಯಮಾನಳಾಗುವ ಎಲ್ಲಾ ಭರವಸೆ ಮೂಡಿಸಿದ್ದಾಳೆ. ಕವನಗಳೊಂದಿಗೆ ಚಂದದ ಮುನ್ನುಡಿ, ಬೆನ್ನುಡಿಗಳು ಸಂಕಲನದ ಸೊಬಗು ಹೆಚ್ಚಿಸಿವೆ.