

ಯಾಕ ಏರಬೇಕು ಗೆಲುವಿನ ಅಮಲು
ಸೋಲಿಲ್ಲದವರೆ ಇಲ್ಲವಾ?
ನಿಂತ ನೀರೂ ಸೋಲುವದು
ರವಿಯ ಕಿರಣಕೆ ಸುಟ್ಟು, ಬತ್ತಿ
ಬಳಲಿ ಬೆಂಡಾಗಿ, ಇದು ಸಹಜ ನಿಯಮ
ಅನುಭವವಿಲ್ಲದವನು ಎಂದೂ ಭಾವುಕನಾಗಲಾರ
ಗರ ಬಡಿದ, ಜಡ ಹಿಡಿದ ಪ್ರಾಣಿಯೂ ಅಲ್ಲ
ಮನುಷ್ಯನಂತೂ ಮೊದಲಲ್ಲ
ಕಲಿಯುವ ಕೌತುಕವಿಲ್ಲ, ಸೋಲಿಲ್ಲದ ಅನುಭವ
ಸುರೊಳು ನೀರಿಲ್ಲದ ಬರಡುತನ
ಗಂಜಿಯ ಉಂಡವಮಾತ್ರ ಅನ್ನ ರುಚಿಸಬಲ್ಲ
ದಕ್ಕಿಸಬಲ್ಲ, ಜೀರ್ಣಿಸಬಲ್ಲ
ಬೇಡ ಇವಗೆ ತಾಲೀಮು ಎಲ್ಲಾ ಮಾಮೂಲು
ಹೋದ ಹಾಗೇ ಚಕ್ಕುಡಿ
ಎತ್ತ ಕೊರಳಿನ ಜೊತೆ ಚುಂಬಿಸಿ
ನಗುವಾಗ ನಕ್ಕ ಸಿಹಿ ಸಕ್ಕರೆ ದೊಡ್ಡದಲ್ಲ
ಇದ್ದೆ ಇದೆ ಚಿಕ್ಕ ಇರುವೆಗಳ ಸಾಲು
ಅಟ್ಟಿ, ಕಾಡದೆ, ಕಾಣದೆ, ಕೇಳದೆ,
ಯಮನಾಗಿ ಹೊರುವವು
ಸಾವಿನ ದವಡೆಗೆ ತಳ್ಳುವವು
ಹಸಿರು ಕಾನನ ಒಪ್ಪಿಕೊಂಡಿದೆ ಇಲ್ಲಿ
ಹಣ್ಣು, ವಾಸನೆ, ಮುಳ್ಳು ಮುಪ್ಪುಗಳು
ನಾವು ಯಾವ ಲೆಕ್ಕ?
ಬೇವಿನ ಗಾಳಿ ಕಹಿಯಲ್ಲ, ಹಲಸಿನ ಗಾಳಿ ಸಿಹಿಯೂ ಅಲ್ಲ, ಅದು ಒಂದೇ ಚೆಲುವು
ಬದುಕ ಬದುಕಿಸುವ ಒಲವು
ಅರುಣ್ ಕೊಪ್ಪ
