

ತಡವಾಗಿ ಬೆಳಕಿಗೆ ಬಂದ ಘಟನೆ-
ಬಾಳೆಕೈ ಬಿಳೇಗೋಡು ಗುಡ್ಡ ಕುಸಿತ
ಆಗಸ್ಟ್ ತಿಂಗಳ ಮಹಾಮಳೆಗೆ ಸಿದ್ಧಾಪುರ ಕಾನಸೂರು ಗ್ರಾಮ ಪಂಚಾಯತ್‍ಬಿಳೇಗೋಡಿನ ಗುಡ್ಡವೊಂದು ಕುಸಿದು ಬಾಯ್ಬಿಟ್ಟು ನಿಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಾಜಿ ಸಂಸದ ದಿ. ದೇವರಾಯ ನಾಯ್ಕರ ಹುಟ್ಟೂರು ಗವಿನಗುಡ್ಡದ ಬಳಿಯ ಬಾಳೆಕೈ ಗ್ರಾಮದ ಬಿಳೇಗೋಡಿನ ಈ ಗುಡ್ಡ ಕುಸಿದ ವರ್ತಮಾನ ಒಂದೆರಡು ದಿವಸಗಳಲ್ಲಿ ಸ್ಥಳಿಯರ ಗಮನಕ್ಕೆ ಬಂದಿತ್ತಾದರೂ ಅದು ಸುದ್ದಿಯಾಗಿರಲಿಲ್ಲ.
ಬಾಳೇಕೈ ಬಿಳೇಗೋಡಿನ ಗ್ರಾಮ, ಮನೆಗಳು ಹೆಚ್ಚಿನ ಕೃಷಿ ಭೂಮಿಯೆಲ್ಲಾ ಈ ಗುಡ್ಡದ ಕೆಳಗೇ ಇವೆ. ಜನ, ಜಾನುವಾರುಗಳು ಮನೆಯಿಂದ ಹೊರಬರದ ಮಳೆಯ ರಭಸದಲ್ಲಿ ಈ ಗುಡ್ಡ ಕುಸಿದಿದೆ. ಇನ್ನೂ ಒಂದೆರಡು ದಿವಸಗಳ ವರೆಗೆ ಮಳೆ ಮುಂದುವರಿದಿದ್ದರೆ ಈ ಗುಡ್ಡದ ಅಡಿಯ ಕೃಷಿ ಭೂಮಿ ಮನೆಗಳೆಲ್ಲಾ ಮಣ್ಣುತುಂಬಿಕೊಳ್ಳುವ ಅಪಾಯವಿತ್ತು. ಈಗಲೂ ಸುಮಾರು 200 ಮೀಟರ್ ಅಷ್ಟು ಉದ್ದದ ಬಿರುಕು ಹಾಗೇ ಉಳಿದಿದ್ದು ನಿರಂತರ ರಭಸದ ಮಳೆಯಲ್ಲಿ ಇದು ಕೊಚ್ಚಿಹೋಗುವ ಅಪಾಯದ ಸಾಧ್ಯತೆಗಳಿವೆ.
ಅರಣ್ಯ ಇಲಾಖೆಯ ಈ ಪ್ರದೇಶದಲ್ಲಿ ಇಲಾಖೆ ಗಿಡಗಳನ್ನು ಬೆಳೆಸಿದೆ. ಗಿಡಗಳು ಮರಗಳಾಗಿ ಬೇರಿನಿಂದ ಮಣ್ಣು ಹಿಡಿಯುವ ವರೆಗೆ ಮಳೆಗಾಲ ಈ ಪ್ರದೇಶಕ್ಕೆ ಅಪಾಯವೇ ಹಾಗಾಗಿ ಅರಣ್ಯ ಮತ್ತು ಕಂದಾಯ ಇಲಾಖೆಗಳು ಈ ಸ್ಥಳ ಪರಿಶೀಲನೆ ಮಾಡಿ ಅಗತ್ಯ ಮುಂಜಾಗ್ರತೆ ವಹಿಸುವ ಅಗತ್ಯವಿದೆ.
ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಬಂದ ಪತ್ರಕರ್ತರನ್ನು ಭೇಟಿ ಮಾಡಿ ಸ್ಥಳ ತೋರಿಸಿದ ಈ ಭಾಗದ ಮುಖಂಡ ರಾಜೀವನಾಯ್ಕ ಗವಿನಗುಡ್ಡ ಆಗಸ್ಷ್ ತಿಂಗಳ ಮಳೆ ಅವಧಿಯಲ್ಲಿ ಬಿರುಕು ಬಿಟ್ಟ ಈ ಸೀಳಿದ ಗುಡ್ಡದ ಒಳಗೆ ನೀರು ಜಾರುತಿತ್ತು, ಒಳಗೆ ನೀರು ಉಕ್ಕಿ ಹೊರಗೆ ಹೋಗುವಂತಿದ್ದ ದೃಶ್ಯವನ್ನು ನಾವೇ ನೋಡಿದ್ದೇವೆ. ಒಂದೆರಡು ದಿವಸ ಮಳೆ ಮುಂದುವರಿದಿದ್ದರೆ ಈ ಗುಡ್ಡ ಕುಸಿದು ಬಾಳೇಕೈ ರಸ್ತೆ ಮತ್ತು ಕೃಷಿಭೂಮಿ ಮುಚ್ಚಿಹೋಗುತಿತ್ತು ಎಂದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದರೂ ಸ್ಥಳಕ್ಕೆ ಭೇಟಿ ನೀಡಿದ ಬಗ್ಗೆ ನಮಗೆ ಮಾಹಿತಿ ಇಲ್ಲ ಎನ್ನುತ್ತಾರೆ ಸ್ಥಳಿಯ ರವಿ ಗವಿನಗುಡ್ಡ ಸಿದ್ಧಾಪುರದಲ್ಲಿ ಭಾನ್ಕುಳಿ, ಹೆಗಡೆಮನೆ,ಬಿಳೇಗೋಡು ಸೇರಿದಂತೆ ಕೆಲವು ಕಡೆ ಈ ವರ್ಷದ ಮಹಾಮಳೆ ಅಪಾಯದ ಮುನ್ಸೂಚನೆ ನೀಡಿದೆ. ಸ್ಥಳಿಯರು, ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಜರುಗಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಬಹುದು. ಈ ಕ್ಷೇತ್ರ ಮತ್ತು ಜಿಲ್ಲೆಯ ಶಾಸಕ, ಸಂಸದರು, ಮಾಜಿ ಸಚಿವರು, ಹಿರಿಯ ಜನಪ್ರತಿನಿಧಿಗಳು ವಾರಕ್ಕೊಮ್ಮೆ ಈ ಪ್ರದೇಶದ ಸಮೀಪದ ಶಿರಸಿ ರಸ್ತೆಯಲ್ಲಿ ಸಂಚರಿಸಿದರೂ ಈ ಘಟನೆ ಬಗ್ಗೆ ಗಮನಹರಿಸದಿರುವುದು ಸ್ಥಳಿಯರ ಬೇಸರಕ್ಕೆ ಕಾರಣವಾಗಿದೆ. ಕಾಡುಪ್ರಾಣಿಗಳ ಹಾವಳಿ, ಪ್ರಕೃತಿ ವೈಚಿತ್ರಗಳು ನಡೆದರೂ ಈ ಪ್ರದೇಶದತ್ತ ಸುಳಿಯದ ಆಡಳಿತಯಂತ್ರ ಈ ಭಾಗದ ಜನರ ತೊಂದರೆ, ಆತಂಕಗಳಿಗೆ ಸ್ಫಂದಿಸಬೇಕಿದೆ.
ಅವ್ವ&ಅಬ್ಬಲಿಗೆ ಬಿಡುಗಡೆ-
ಕರುಣೆ ಇರುವ ಮನುಷ್ಯನನ್ನು ಸೃಷ್ಟಿಸುವುದು ಕಾವ್ಯದ ಕೆಲಸ
ಕಾವ್ಯ ಬರೆಯುವುದೆಂದರೆ ಮನುಷ್ಯನಾಗುವುದು ಎಂದು ಪ್ರತಿಪಾದಿಸಿರುವ ವಿಮರ್ಶಕ ಸುಬ್ರಾಯ ಮತ್ತೀಹಳ್ಳಿ ಕರುಣೆ ಇರುವ ಮನುಷ್ಯನನ್ನು ಸೃಷ್ಟಿಸುವುದು ಕಾವ್ಯದ ಕೆಲಸ ಎಂದಿದ್ದಾರೆ.
ಶಿರಸಿಯ ಟಿ.ಎಸ್.ಎಸ್.ಸಭಾಭವನದಲ್ಲಿ ನಡೆದ ಅವ್ವ ಮತ್ತು ಅಬ್ಬಲಿಗೆ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಾವ್ಯ ಸಾಹಿತ್ಯದ ಉದ್ದೇಶದಂತೆ ನೆಲಮೂಲದ ಸೊಗಡನ್ನು ಹೇಳುತ್ತಾ ನಮ್ಮತನ ಉಳಿಸುವ ಕವಿಯಾಗಿ ಶೋಭಾ ಅವತರಿಸಿದ್ದಾರೆ ಎಂದರು.
ಹಿರಿಯ ಸಾಹಿತಿ ವಿಷ್ಣುನಾಯ್ಕ ಕೃತಿ ಬಿಡುಗಡೆ ಮಾಡಿದರು. ನಾಗರೇಖಾ ಗಾಂವಕರ ಕೃತಿ ಪರಿಚಯ ಮಾಡಿದರು. ಮುಖ್ಯ ಅತಿಥಿಯಾಗಿದ್ದ ಪ್ರಾಂಶುಪಾಲ ಎಂ.ಕೆ.ನಾಯ್ಕ ಹೊಸಳ್ಳಿ ಮಾತನಾಡಿ ಪ್ರಾದೇಶಿಕ ಭಾಷೆ,ಅನುಭವಗಳ ದಟ್ಟ ಸಂವೇದನೆಯ ಅವ್ವ ಮತ್ತು ಅಬ್ಬಲಿಗೆ ಓದಿಸಿಕೊಂಡು ಹೋಗುವ ಸರಳತೆ,ನಾವಿನ್ಯತೆಯಿಂದ ವಿಶಿಷ್ಟವಾಗಿದೆ ಎಂದು ಪ್ರಶಂಸಿಸಿದರು. ಪ್ರಾಸ್ಥಾವಿಕವಾಗಿ ಮಾತನಾಡಿದ ಶೋಭಾ ಹಿರೇಕೈ ತಮ್ಮ ಕವನಗಳು ದಟ್ಟ ಕಾಡು, ಗುಡ್ಡ-ಬೆಟ್ಟಗಳ ಮೇಲಿಂದ ನದಿಯಂತೆ ಸರಳವಾಗಿ ಒಡಮೂಡಿದ ಅನುಭವ ಹಂಚಿಕೊಂಡರು.
ಪತ್ರಕರ್ತ ಕೋಲಶಿರ್ಸಿ ಕನ್ನೇಶ್ ಸ್ವಾಗತಿಸಿದರು,ಕೆ.ಬಿ.ವೀರಲಿಂಗನಗೌಡ ವಂದಿಸಿದರು. ದೊಡ್ಡ ಪ್ರಮಾಣದ ಶ್ರೋತ್ರುಗಳ ನಡುವೆ ಕವಿಯತ್ರಿ ಶೋಭಾ ಹಿರೇಕೈರನ್ನು ನೇಕಾರ ಪ್ರಕಾಶನ ಮತ್ತು ಪೌರ್ಣಿಮಾ ವೇದಿಕೆಗಳಿಂದ ಸನ್ಮಾನಿಸಿ, ಅಭಿನಂದಿಸಲಾಯಿತು.
ಕಳಪೆ ಕೆಲಸ,ನಿರ್ಲಕ್ಷ ಹೊನ್ನೆಗುಂಡಿಗೆ ಶಾಪವಾದ ರಾಜಕಾಲುವೆ
ಸಿದ್ದಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯ ಹೊನ್ನೇಗುಂಡಿ ನಿವಾಸಿಗಳಿಗೆ ಕಳೆದ ಹತ್ತಾರು ವರ್ಷಗಳಿಂದ ಗಟಾರದಲ್ಲಿ ಹರಿಯುವ ಕೊಳಚೆ ನೀರು ಪಿಶಾಚಿಯಾಗಿ ಕಾಡತೊಡಗಿದೆ.
ಈ ಹಿಂದೆ ಕೊಳಚೆ ನೀರು ಹರಿದುಹೋಗಲು ಗಟಾರವನ್ನು ಪ.ಪಂ.ನಿಂದ ನಿರ್ಮಿಸಲಾಗಿದ್ದರೂ ನೆಲಕ್ಕೆ ಸರಿಯಾಗಿ ಬೆಡ್ ಹಾಕದೇ ಇದ್ದುದರಿಂದ ಈ ಭಾಗದ ನಿವಾಸಿಗಳ ಮನೆಯ ಕುಡಿಯುವ ನೀರಿನ ಬಾವಿಗಳಿಗೆ ಕೊಳಚೆ ನೀರು ನುಗ್ಗಿ ಬವಣೆ ಪಡುವಂತಾಗಿತ್ತು. ಕಳೆದ ವರ್ಷ ಅಲ್ಲಲ್ಲಿ ತೇಪೆ ಹಚ್ಚಿ, ಪೈಪ್‍ಗಳನ್ನು ಅಳವಡಿಸಿ ತಾತ್ಪೂರ್ತಿಕ ದುರಸ್ತಿಮಾಡಲಾಗಿದ್ದರೂ ಗಟಾರದ ಮುಂದಿನ ಭಾಗವನ್ನು ಹಾಗೇ ಬಿಟ್ಟಿದ್ದರಿಂದ ಅಲ್ಲಿ ಈಗ ಕೊಳಚೆ ನೀರು ಸರಾಗವಾಗಿ ಹರಿದು ಹೋಗದೇ ಹೊಂಡಗಳಲ್ಲಿ ತುಂಬಿಕೊಂಡು ಗಬ್ಬುವಾಸನೆ ಹೊಡೆಯತೊಡಗಿದೆ.
ಹೊಂಡಗಳಲ್ಲಿ ಕ್ರಿಮಿಗಳು, ಸೊಳ್ಳೆಗಳು ಜನ್ಮತಾಳಲು, ರೋಗರುಜಿನು ಹರಡಲು ಅವಕಾಶವಾಗುವಂತಾಗಿದೆ. ಅಲ್ಲದೆ ಹತ್ತಿರದ ನಿವಾಸಿಗಳ ಕುಡಿಯುವ ನೀರಿನ ಬಾವಿಯ ವರತೆಗೂ ಈ ಕೊಳಚೆ ನೀರು ಸೇರಿ ಬಾವಿಗೆ ವಕ್ಕರಿಸುವ ಸಾಧ್ಯತೆಯಿದ್ದು ಸ್ಥಳೀಯ ನಿವಾಸಿಗಳ ನಿದ್ದೆಗೆಡುವಂತೆ ಮಾಡಿದೆ.
ಈ ಹಿಂದೆ ಸಾಕಷ್ಟುಸಲ ನಮ್ಮ ಬಾವಿಗಳಿಗೆ ಕೊಳಚೆ ನೀರು ಸೇರಿಕೊಂಡು ಬವಣೆ ಅನುಭವಿಸಿದ್ದೇವೆ. ಮಳೆಗಾಲದಲ್ಲಿ ರಭಸವಾಗಿ ನೀರು ಹರಿದು ಹೋಗಿದ್ದರಿಂದ ಸಮಸ್ಯೆಯಾಗಿರಲಿಲ್ಲ. ಇದೀಗ ನೀರಿನ ಹರಿವು ಕಡಿಮೆಯಿದ್ದು ಗಟಾರಕ್ಕೆ ನೆಲಹಾಸು ಮಾಡದೇ ಇದ್ದುದರಿಂದ ಬಾವಿಯಂತೆ ಹೊಂಡ ಬಿದ್ದು ಅಲ್ಲಲ್ಲಿ ಕೊಳಚೆ ನೀರು ಮಡುಗಟ್ಟಿದೆ. ಈ ಕೊಳಚೆ ನೀರು ಯಾವಾಗ ಬಾವಿಗೆ ನುಗ್ಗುವುದೋ ಎಂಬ ಆತಂಕದಲ್ಲಿದ್ದೇವೆ. ಅಲ್ಲದೆ ಕೊಳಚೆ ನೀರಿನಿಂದಾಗಿ ಡೆಂಗ್ಯೂ ಸೇರಿದಂತೆ ವಿವಿಧ ಕಾಯಿಲೆಗಳು ಹರಡುವ ಸಾಧ್ಯತೆಯಿದೆ.
ಪಟ್ಟಣ ಪಂಚಾಯತ ಆಡಳಿತ ಈ ಕುರಿತು ಶೀಘ್ರ ಕ್ರಮ ವಹಿಸಿ ಗಟಾರವನ್ನು ಸರಿಪಡಿಸಿ ನಮಗಾಗುತ್ತಿರುವ, ಆಗಲಿರುವ ತೊಂದರೆ ನೀಗಬೇಕು ಎಂದು ಈ ಭಾಗದ ನಾಗರಿಕರು ಆಗ್ರಹಿಸಿದ್ದಾರೆ. ಎಲ್ಲಿ ಹೋಯ್ತು ಅಭಿವೃದ್ಧಿ-
ಇದೇ ವರ್ಷದ ಪಟ್ಟಣ ಪಂಚಾಯತ್ ಸೇರಿದಂತೆ ನಡೆದ ಅನೇಕ ಚುನಾವಣೆಗಳಲ್ಲಿ ಮತಕೇಳಲು ಬರುವ ಬಿ.ಜೆ.ಪಿ. ಕಾರ್ಯಕರ್ತರು ಹೊನ್ನೆಗುಂಡಿ ಸೇರಿದಂತೆ ನಗರ,ತಾಲೂಕು, ಜಿಲ್ಲೆಯಲ್ಲಿ ಬಿ.ಜೆ.ಪಿ.ಗೇ ಮತಹಾಕಿ ಮೇಲಿನಿಂದ ಕೆಳಗಿನವರೆಗೆ ನಾವೇ ಅಧಿಕಾರಕ್ಕೆ ಬರುತ್ತೇವೆ ನಿಮ್ಮ ಸಮಸ್ಯೆಗಳಿಗೆ ಸ್ಫಂದಿಸಿ ಅಭಿವೃದ್ಧಿ ಮಾಡುತ್ತೇವೆ ಎಂದು ಪ್ರಚಾರಮಾಡುತ್ತಾರೆ. ಆದರೆ ಈಗ ನಗರ,ತಾಲೂಕು, ಕ್ಷೇತ್ರ,ಜಿಲ್ಲೆ,ರಾಜ್ಯ,ರಾಷ್ಟ್ರದಲ್ಲಿ ಅವರದೇ ಅಧಿಕಾರ ಆದರೆ ಯಾಕೆ ಯಾವುದೇ ಕೆಲಸ, ಏನೂ ಅಭಿವೃದ್ಧಿ ಆಗುತ್ತಿಲ್ಲ?
-ನೊಂದ ಬಿ.ಜೆ.ಪಿ. ಕಾರ್ಯಕರ್ತ





ಪ್ರಕ್ರತಿಯು ಸೇಡು ತೀರಿಸಲು ಹಠ ತೊಟ್ಟು ನಿಂತರೆ ಅದರ ಕೋಪದೆದುರು ಮನುಷ್ಯ ಬಹು ಕುಬ್ಜ …. ಎಲ್ಲರೂ ಹೇಳುವುದು… ಪ್ರಕ್ರತಿಯನ್ನು ಉಳಿಸೋಣವೆಂದು. ಎಂತ ಮೂರ್ಖ ಮಾತು. ನಾವು ನಮ್ಮನ್ನು ಅಂದರೆ ಮಾನವ ಕುಲವನ್ನು ಉಳಿಸಿಕೊಂಡರೆ ಸಾಕೇ ಹೊರತು ಪ್ರಕ್ರತಿಯನ್ನಲ್ಲ. ಪ್ರಕ್ರತಿಗೆ ತನ್ನ ಮೇಲೆ ಅತ್ಯಾಚಾರ ಮಾಡುವವರನ್ನು ನಾಶ ಮಾಡಿ ತನ್ನನ್ನು ತಾನು ಉಳಿಸಿಕೊಳ್ಳುವ ಶಕ್ತಿ ಇದೆ. ಅದಕ್ಕೆ ನಾವು ಇಲಿ, ಜಿರಳೆ ಕ್ರಿಮಿ ಕೀಟಗಳಂತೆ ಒಂದು ಪ್ರಾಣಿ ಅಥವಾ ಕೀಟಗಳಷ್ಟೆ. ಮಾನವನಿಗೆ ಅದು ಪ್ರಾಣಿಗಳಿಗಿಂತ ಹೆಚ್ಚಿನ ಗೌರವ ಕೊಟ್ಟಿಲ್ಲ. ಇದನ್ನು ಆದಷ್ಟು ಬೇಗ ಅರಿತುಕೊಂಡರೆ ನಮಗೆ ಒಳಿತಲ್ಲವೆ?