

ನಾಳೆ ಗಾಂಧಿ ಜಯಂತಿ-
ಶಿರಸಿ-ಸಿದ್ಧಾಪುರದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದ್ದ ಮಹಾತ್ಮಾ ಗಾಂಧಿ!
ರಾಷ್ಟ್ರಪಿತ ಮಹಾತ್ಮಾ ಗಾಂಧಿ ಸಿದ್ಧಾಪುರಕ್ಕೆ ಬಂದಿದ್ದರು ಮತ್ತು ಮಹಾತ್ಮಾ ಗಾಂಧಿಯವರಿಂದಾಗಿ ಉತ್ತರಕನ್ನಡದ ಮಾರಿ ಹಬ್ಬದ ಕೋಣನ ಬಲಿ,ಅಸ್ಪೃಶ್ಯತೆ ಆಚರಣೆ ಮುಕ್ತಿ ಹಾಗೂ ವಿಧವಾ ವಿವಾಹ ಪ್ರಾರಂಭವಾದವು ಎನ್ನುವ ಐತಿಹಾಸಿಕ ದಾಖಲೆಗಳಿವೆ.
ಮಹಾತ್ಮಾಗಾಂಧಿ ಶಿರಸಿ-ಸಿದ್ಧಾಪುರಕ್ಕೆ 1936 ರಲ್ಲಿ ಭೇಟಿ ನೀಡಿದ್ದರು. ಅಂದು ಅವರು ಶಿರಸಿಯ ಮಾರಿಕಾಂಬಾ ಜಾತ್ರೆಯಲ್ಲಿ ಮಾಡುತಿದ್ದ ಕೋಣನ ಬಲಿ ಆಚರಣೆ ನಿಲ್ಲಿಸುವಂತೆ ವಿನಂತಿಸಿದ್ದರು. ಶಿರಸಿಯ ರೂಢಿ-ಸಂಪ್ರದಾಯಗಳ ಜನರು ಗಾಂಧೀಜಿಯವರ ವಿನಂತಿಯನ್ನು ಮನ್ನಿಸಿರಲಿಲ್ಲ. ಆದರೆ ಮಾರಿಕಾಂಬಾ ಜಾತ್ರೆಯಲ್ಲಿ ಕೋಣನಬಲಿ ತಡೆಯುವ ವಾಗ್ದಾನ ಮಾಡದಿದ್ದರೆ ತಾನು ದೇವಸ್ಥಾನ ಪ್ರವೇಶಿಸುವುದಿಲ್ಲ, ಮತ್ತು ಅನ್ನ-ಆಹಾರ ಮುಟ್ಟುವುದಿಲ್ಲ ಎಂದು ಹಠ ಹಿಡಿದಿದ್ದರಿಂದ ಸ್ಥಳಿಯರು ಗಾಂಧೀಜಿಯವರಿಗೆ ಕೋಣನ ಬಲಿ ನಿಲ್ಲಿಸಲು ಸಮ್ಮತಿಸಿದರು.
ಇದೇ ಸಮಯದಲ್ಲಿ ಸಿದ್ಧಾಪುರಕ್ಕೆ ಬಂದಿದ್ದ ಗಾಂಧೀಜಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ವಿಧವಾ ವಿವಾಹಕ್ಕೆ ಒಪ್ಪದ ಸಂದರ್ಭವನ್ನು ಎತ್ತಿಕೊಂಡು ಆ ಕುಟುಂಬಕ್ಕೆ ವಿಧವಾ ವಿವಾಹ ಮಾಡಿಸುವ ಸಂಕಲ್ಫ ತೊಡುತ್ತಾರೆ.
ಸಿದ್ಧಾಪುರದ ದೊಡ್ಮನೆ ಕುಟುಂಬ ವಿಧವಾ ವಿವಾಹಕ್ಕೆ ಒಪ್ಪದೆ ಅಸಹಕಾರ ವ್ಯಕ್ತಪಡಿಸಿದಾಗ ಕೆಲವು ನಿಬಂಧನೆಗೆ ಒಳಪಟ್ಟು ವಿಧವಾ ವಿವಾಹವನ್ನೂ ಮಾಡಿಸುವಲ್ಲಿ ಯಶಸ್ವಿಯಾಗುತ್ತಾರೆ.
ಇಂಥದ್ದೇ ಇನ್ನೊಂದು ಪ್ರಸಂಗವೆಂದರೆ….
ಸ್ವಾತಂತ್ರ್ಯ ಹೋರಾಟಗಾರ್ತಿ ದೇವಿ ಹಸ್ಲರ್ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರೂ ಸಮಾರಂಭ, ಸಮಾವೇಶಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅಂದಿನ ಆಚರಣೆಯ ಪ್ರಕಾರ ದೇವಿ ಹಸ್ಲರ್ ಪರಿಶಿಷ್ಟಳೆಂಬ ಕಾರಣಕ್ಕೆ ಅವರನ್ನು ಹೊರಗೆ ಬರುವುದಕ್ಕೆ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯ ಗುಂಪಿನೊಂದಿಗೆ ಸೇರುವುದಕ್ಕೆ ಅವಕಾಶಮಾಡುತ್ತಿರಲಿಲ್ಲ. ಈ ಸೂಕ್ಷ್ಮ ವಿಚಾರ ಗಮನಿಸಿದ ಗಾಂಧೀಜಿ ಸಮಾಜದಲ್ಲಿ ಅಸ್ಪೃಶ್ಯ ತೆ,ಅಸಮಾನತೆ, ರೂಢಿ ಸಂಪ್ರದಾಯಗಳ ಸಂಕುಚಿತತೆ ತೊಲಗದೆ ಸಮಾಜಸುಧಾರಣೆ,ಸ್ವಾತಂತ್ರ್ಯ ಹೋರಾಟ ಸಾಧ್ಯವಿಲ್ಲ ಎಂದು ಅಸ್ಪೃ ಶ್ಯತೆ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದರು.
ಹೀಗೆ ಮಹಾತ್ಮಾ ಗಾಂಧಿ ಆಕಾಲದ ಮೌಢ್ಯ, ಅಂಧಾಚರಣೆ,ಸಾಮಾಜಿಕ ಅನಿಷ್ಟಗಳಾದ ಕೋಣನಬಲಿ, ಅಸ್ಪೃ ಶ್ಯತೆ, ವಿರೋಧಿಸಿ ವಿಧವಾ ವಿವಾಹಕ್ಕೆ ಉತ್ತೇಜನ, ಬೆಂಬಲ ನೀಡಿದ್ದರು.
ಶಿರಸಿ-ಸಿದ್ದಾಪುರದ ಈ ಘಟನೆಗಳು ಸಿದ್ಧಾಪುರ,ಶಿರಸಿಗಳ ಇತಿಹಾಸ, ಚರಿತ್ರೆಯಲ್ಲಿ ಮಹಾತ್ಮಾಗಾಂಧಿಯವರ ಮಹತ್ವವನ್ನು ಸಾರಿವೆ.

