

ಸಿದ್ಧಾಪುರ ತಾಲೂಕಿನ ಕಾನಸೂರು ಬಳಿಯ ಬಾಳಗಾರಿನ ಯುವ ಕೃಷಿಕ ವಿಜಯೇಂದ್ರ ನಾಯ್ಕ ಸಮಗ್ರಕೃಷಿಯಲ್ಲಿ ಹೆಸರಿಗೆ ತಕ್ಕಂತೆ ವಿಜಯೇಂದ್ರ ಎನಿಸಿಕೊಂಡಿದ್ದಾರೆ.
ಸಿದ್ಧಾಪುರದ ನಿವೃತ್ತ ಶಿಕ್ಷಕ ಬಿ.ಬಿ.ನಾಯ್ಕ ಮೇಲಿನಮನೆಯವರ ಮಗ ವಿಜಯೇಂದ್ರ ಶಿಕ್ಷಕರ ಮಗನಾಗಿರುವುದರಿಂದ ತೀರಾ ಕೃಷಿಯ ಜೊತೆಗೆ ಸಂಬಂಧ-ಸಂಪರ್ಕ ಹೊಂದಿದವರಲ್ಲ, ಆದರೆ ಪದವಿ ನಂತರದ ಹತ್ತು ವರ್ಷಗಳ ಪ್ರತಿಷ್ಠಿತ ಬ್ಯಾಂಕ್ ಉದ್ಯೋಗದ ನಂತರ ಅವರನ್ನು ತಾಯ್ನೆಲ ಮರಳಿ ಮಣ್ಣಿಗೆ ಕರೆದಿದೆ.
ಹಸರಗೋಡು ಪಂಚಾಯತ್‍ನ ಬಾಳಗಾರಿನ ಐದು ಎಕರೆ ಕೃಷಿಭೂಮಿ ಖರೀದಿಸಿದ ವಿಜಯೇಂದ್ರ ಅದರಲ್ಲಿದ್ದ ಅಡಿಕೆ ತೋಟವನ್ನು ಅಭಿವೃದ್ಧಿ ಪಡಿಸಿದರು.
ನೀರಿಗಾಗಿ ಮೂರು ಪುಟ್ಟ ಕೆರೆಗಳನ್ನು ನಿರ್ಮಿಸಿದರು. ಜೊತೆಜೊತೆಗೇ 8-10 ಆಕಳು, ಕುರಿ,ನಾಟಿಕೋಳಿ ಎಲ್ಲವನ್ನೂ ಸಾಕುತ್ತಾ ಕಬ್ಬು,ಅಡಿಕೆ,ತೆಂಗು ನೈಸರ್ಗಿಕ ಕಾಡು ಮರಗಳನ್ನೇ ಬೆಳೆಯತೊಡಗಿದರು.
ತೋಟದ ಅರ್ಧ ಅಡಿಕೆ, ಬಾಳೆ, ಕಾಳುಮೆಣಸಿಗೆ ಮೀಸಲಾದರೆ, ಇನ್ನರ್ಧ ಈ ಬೆಳೆಗಳೊಂದಿಗೆ ಜಾನುವಾರುಗಳಿಗೆ ಹುಲ್ಲು ಬೆಳೆಸಿದರು. ಆಕಳಲ್ಲಿ ಭಿನ್ನ ತಳಿಗಳು ಕೋಳಿ-ಕುರಿಗಳಲ್ಲಿ ವಿಭಿನ್ನ ಪ್ರಭೇದ, ಕಬ್ಬು, ಬಾಳೆ-ಅಡಿಕೆ ಎಲ್ಲದರಲ್ಲೂ ವೈವಿಧ್ಯತೆಗೆ ಆದ್ಯತೆ ನೀಡಿದರು, ಮಲೆನಾಡುಗಿಡ್ಡ, ಗೀರ್ ಸೇರಿದಂತೆ ದೇಶಿ, ಜರ್ಸಿ ಆಕಳುಗಳನ್ನು ಸಾಕಿರುವ ಇವರು ಕಾನಸೂರಿನ ಹಾಲು ಉತ್ಫಾದಕರ ಸಂಘದ ದೊಡ್ಡ ಹಾಲು ಉತ್ಫಾದಕ.
ಕೃಷಿಮೂಲದ ನಮಗೆ ಕೃಷಿ ಮರೆತ ಮೇಲೆ ನಾವು ಕೃಷಿಯಲ್ಲಿ ತೊಡಗಿಸಿಕೊಂಡೆವು. ಹೊಸ ಆವಿಷ್ಕಾರಗಳಂತೆ ವಿಭಿನ್ನವಾಗಿ ಕೃಷಿ ಮಾಡಬೇಕೆಂದು ಕೊಂಡವನಿಗೆ 4-5 ವರ್ಷದಲ್ಲೇ ಕೃಷಿ ಸಂಸ್ಕøತಿಯ ತೃಪ್ತಿಯ ಗುಟ್ಟು ತಿಳಿಯಿತು. ಹಾಗಾಗಿ ಮುಂದೆ ನಮ್ಮ ಬದುಕಿನೊಂದಿಗೆ ಕೃಷಿಯೇ ಜೀವನಾಧಾರ ಎಂದು ತೀರ್ಮಾನಿಸಿ, ನಿಷ್ಠೆಯಿಂದ ತೊಡಗಿಸಿಕೊಂಡಿದ್ದೇನೆ ಎನ್ನುವ ವಿಜಯೇಂದ್ರ ಸ್ಥಳಿಯ ಕೋಣನಕಟ್ಟೆ ಕಬ್ಬಿನೊಂದಿಗೆ ಎತ್ತರಕ್ಕೆ ಬೆಳೆಯುವ ಸಂಜೀವಿನಿಯನ್ನು ಬೆಳೆದಿದ್ದಾರೆ.
ಕಬ್ಬು ಬಣ್ಣ-ತಳಿಯಲ್ಲಿ ಬೇರೆಯಾದರೂ ಸಿಹಿ ಮತ್ತು ರುಚಿಯಲ್ಲಿ ಒಂದೇ ಎನ್ನುವ ಇವರು ಎಲ್ಲದಕ್ಕೂ ಸಾವಯವ ಗೊಬ್ಬರವನ್ನು ಬಳಸುವುದರಿಂದ ನಮ್ಮ ಕೃಷಿ ಉತ್ಫಾದನೆಗಳೆಲ್ಲವೂ ಸಂಜೀವಿನಿಯೇ ಎನ್ನುತ್ತಾರೆ.
ಕಷ್ಟ ಯಾವುದರಲ್ಲಿಲ್ಲ ನಿಷ್ಠೆ-ಬದ್ಧತೆಗೆ ಕಷ್ಟವೇ ಹೆದರುತ್ತೆ ಎನ್ನುವ ಈ ಯುವ ಕೃಷಿಕ ಪ್ರತಿನಿತ್ಯ 3-4 ಜನರಿಗೆ ಕೆಲಸಕೊಡುವ ಜೊತೆಗೆ ಒಬ್ಬರೇ ಎರಡ್ಮೂರು ಜನರ ಕೆಲಸ ನಿಭಾಯಿಸುತ್ತಾರೆ. ಇವರ ಆಸಕ್ತಿ-ಅಭಿರುಚಿ,ಪ್ರಯೋಗಗಳಿಗೆ ಸವಾಲು ಹಾಕದ ಭೂಮಿ ಪ್ರತಿವರ್ಷದಿಂದ ವರ್ಷಕ್ಕೆ ತನ್ನ ಒಡಲಲ್ಲಿ ಹೆಚ್ಚೆಚ್ಚು ಬೆಳೆದು ನೀಡತೊಡಗಿದ್ದಾಳೆ. ಆರ್ಥಿಕ ಹಿಂಜರಿತ, ಪೇಟೆಯ ಸೋಗಿನ ಜೀವನ ಬೋರು ಎನ್ನುವವರಿಗೆ ಮಾದರಿಯಂತಿರುವ ಯುವ ಕೃಷಿಕ ವಿಜಯೇಂದ್ರ ಯುವ ಪ್ರಗತಿಪರ ಸಾವಯವ ಕೃಷಿಕನಾಗಿ ಹೆಸರು ಮಾಡುತಿದ್ದಾರೆ.
ಅಪಾಯಕಾರಿ ಮರ ತೆರವಿಗೆ
ಸ್ಥಳಿಯರ ಆಗ್ರಹ
ಸಿದ್ಧಾಪುರ ತಾಲೂಕಿನ ಗಡಿಪ್ರದೇಶ ಶಿರಸಿಬಾಳೂರು-ಕಾನಸೂರು-ಸಿದ್ಧಾಪುರ ರಸ್ತೆಯ ಗಿರಗಡ್ಡೆ ಬಳಿ ಬೃಹತ್ ಒಣಗಿದ ಮರವೊಂದು ರಸ್ತೆಪಕ್ಕದ ಮಾವಿನ ಮರಕ್ಕೆ ಒರಗಿದ್ದು ಈ ಒಣಮರ ರಸ್ತೆಗೆ ಬೀಳುವ ಸಮಯದಲ್ಲಿ ಅಪಾಯವಾಗುವ ಸಾಧ್ಯತೆ ಬಗ್ಗೆ ಸ್ಥಳಿಯರು ಎಚ್ಚರಿಸಿದ್ದಾರೆ.
ಇದೇ ವರ್ಷ ತಾಲೂಕಿನ ಮಾವಿನಗುಂಡಿ ಬಳಿ ಮರ ಒಂದು ರಸ್ತೆ ಮೇಲೆ ಬಿದ್ದು ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರನ್ನು ಬಲಿತೆಗೆದುಕೊಂಡಿತ್ತು. ಈ ಅಪಾಯದ ನಂತರ ತಾಲೂಕಿನಾದ್ಯಂತ ಅಪಾಯದ ಮರಗಳನ್ನು ತೆರವುಮಾಡುವ ಬಗ್ಗೆ ಸಮೀಕ್ಷೆ ನಡೆದಿತ್ತು.
ಈ ವರ್ಷದ ಮಳೆಗಾಲದ ಸಮಯದಲ್ಲಿ ರಸ್ತೆಗೆ ಬಾಗಿ ಮಾವಿನಮರವೊಂದಕ್ಕೆ ಒರಗಿರುವ ಒಣಮರ ಈ ವರೆಗೆ ನೆಲಕ್ಕುರುಳದೆ ಸಾರ್ವಜನಿಕ ರಸ್ತೆಗೆ ಕಮಾನಿನಂತೆ ಬಾಗಿಕೊಂಡಿದೆ. ಈ ಮರ ಯಾವುದೇ ಸಮಯದಲ್ಲಿ ಬೀಳುವ ಸಾಧ್ಯತೆ ಇದ್ದು ಈ ಮರ ವಾಹನ ಸವಾರರು ಸಾಗುವ ಸಮಯದಲ್ಲಿ ಅಥವಾ ಪಾದಚಾರಿಗಳು ಸಾಗುವ ಸಮಯದಲ್ಲಿ ಧರೆಗುರುಳಿದರೆ ಜೀವಹಾನಿ, ತೊಂದರೆಗಳಾಗುವ ಸಾಧ್ಯತೆ ನಿಚ್ಚಳವಾಗಿದೆ.
ಈ ಅಪಾಯ ಸಾಧ್ಯತೆಯನ್ನು ಗಮನಿಸಿರುವ ಸ್ಥಳಿಯರು ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ ಅರಣ್ಯ ಇಲಾಖೆ ಈ ವರೆಗೆ ಕ್ರಮ ಜರುಗಿಸದಿರುವುದರಿಂದ ಜನತೆ ಈ ಅಪಾಯದ ಬಗ್ಗೆ ಭಯಭೀತರಾಗಿದ್ದಾರೆ. ಈ ಹಳೆದೊಡ್ಡಮರ ತೆರವುಮಾಡುವ ಮೂಲಕ ಸ್ಥಳಿಯರ ತೊಂದರೆ,ಭಯಕ್ಕೆ ಪರಿಹಾರದ ಅಭಯ ನೀಡಬೇಕೆಂದು ಮಾಧ್ಯಮಗಳ ಮೂಲಕ ಜನತೆ ತಾಲೂಕಾ ಆಡಳಿತ ಮತ್ತು ಅರಣ್ಯ ಇಲಾಖೆಗಳನ್ನು ಆಗ್ರಹಿಸಿದ್ದಾರೆ.





ವಿಜಯೇಂದ್ರ ಶ್ರಮಜೀವಿ. ಅವರ ಕ್ರಷಿ ಅವರಿಗೆ ಸಂತ್ರಪ್ತಿ ಕೊಟ್ಟಿದೆ. ಪೇಟೆ ಹುಡುಗ ಹಳ್ಳಿ ಜೀವನಕ್ಕೆ ಹೊಂದಿಕೊಂಡ ಬಗೆ ಅದ್ಬುತ.