ಮಳೆಗೂ ಇಳೆಗೂ ಬಿಡಿಸದ ನಂಟು, ಇಳೆ ಕಾದು ಆರುವ ಸಮಯಕ್ಕೆ ಮಳೆ ಪ್ರಾರಂಭವಾಗುತ್ತದೆ. ಮಳೆ ಪ್ರಾರಂಭವಾಗುತ್ತಲೇ ಜೀವಜಾಲದ ವಿಸ್ಮಯದ ಜಾತ್ರೆ ಹೊರಡುತ್ತದೆ.ಮಳೆಯೊಂದಿಗೆ ಕುಡಿಒಡೆಯುವ ಡೇರೆ ಹೂ ಬಿಡಲು ಸುಮಾರು ಮೂರು ತಿಂಗಳು ಬೇಕು. ಮೆಕ್ಸಿಕೋ ಮೂಲದ ಈ ಹೂ ಮಲೆನಾಡು-ಕರಾವಳಿಯ ಹಿಂಗಾರಿನ ಹೂ. ಈ ಸಮಯ ಡೇರೆ ಹೂ ಬೀತುಹೋಗುವ ಸಮಯ, ಮಳೆವಿಳಂಬವಾದ ವರ್ಷ ಅಕ್ಟೋಬರ್ ವರೆಗೆ ಅರಳುವ ಈ ಹೂವಿನ ಗಿಡ ಸೆಪ್ಟೆಂಬರ್ ನಲ್ಲಿ ಹೂ ಬಿಡುವ ಸಮಯ.
ಈ ವರ್ಷದ ಕೊನೆಯ ಹಂಗಾಮಿನಲ್ಲಿ ಸಿದ್ದಾಪುರದ ಪಡನ್ ಬೈಲ್ ನ ಮಹಿಳೆಯರು ವಾರಕ್ಕೆ ನಾಲ್ಕು ದಿನ ಈ ಪುಷ್ಫಗಳನ್ನು ಮಾರಿ ನಗರದ ಮಹಿಳೆಯರ ಮುಡಿಯ ಸೊಬಗು ಹೆಚ್ಚಿಸುತ್ತಾರೆ. ಪ್ರತಿದಿನ ನೂರಾರು ಹೂ ಬೆಳೆದು ತರುವ ಈ ಮಹಿಳೆಯರು ವಿಭಿನ್ನ ಗಾತ್ರದ ಮೂರು ಡೇರೆ ಹೂಗಳಿಗೆ 10-ರಿಂದ 15 ರೂಪಾಯಿ ಪಡೆಯುತ್ತಾರೆ. ಬೆಳೆಯುವ, ಹೊತ್ತುತಂದು ಶ್ರಮಕ್ಕೆ ಹೂವೊಂದಕ್ಕೆ ಸರಾಸರಿ 6ರಿಂದ ಹತ್ತು ರೂಪಾಯಿ ಹೆಚ್ಚಿನ ಬೆಲೆಯಲ್ಲ. ಆದರೆ ಡೇರೆ ಹೂ ಬೆಳೆಯುವ, ಮಾರುವ ವ್ಯವಹಾರ ಸಂಬಂಧಗಳ ನಡುವೆ ಗ್ರಾಮೀಣ ಬಡ ಮಹಿಳೆಯರು ಮತ್ತು ನಗರದ ಮಹಿಳೆಯರೊಂದಿಗಿನ ಸಂಪರ್ಕ ವೃದ್ಧಿಸಿ, ಸಂಬಂಧವಾಗಿದೆ.
ಡೇರೆ ಮಾರುವ ಹೆಂಗಳೆಯರೂ ನಗರದ ರೀತಿ-ರಿವಾಜಿಗೆ ಒಗ್ಗಿಕೊಳ್ಳುವವರೆಗೆ ಈ ಹೂ ಸಂಬಂಧಕ್ಕೆ ಆಯುಸ್ಸು ಸಿದ್ಧಾಪುರ ನಗರದಲ್ಲಿ ಆಗಾಗ ಕಾಣುವ ಈ ಡೇರೆ ಮಹಿಳೆಯರು ಹೂವಿನಿಂದ ತಮ್ಮ ಬದುಕು,ಜೀವನೋತ್ಸಾಹದಗುಟ್ಟು ಕಂಡುಕೊಂಡಿದ್ದಾರೆ.