

ಸದ್ದಿಲ್ಲದ ಸೇವಾ ಕಾರ್ಯ- ರಸ್ತೆ ಹೊಂಡ ತುಂಬಿ ಪ್ರಶಂಸೆಗೆ ಪಾತ್ರರಾದ ವಿದ್ಯಾರ್ಥಿಗಳು
ಸಣ್ಣದಿರಲಿ, ದೊಡ್ಡದಿರಲಿ, ತಾವು ಮಾಡುವ ಜನಪರ ಕಾರ್ಯಗಳಿಗೆ ಕೆಲಸಕ್ಕಿಂತ ಮಿಗಿಲಾದ ಪ್ರಚಾರ ಬಯಸುವವರ ನಡುವೆ ತಾಲೂಕಿನ ಬಿಳಗಿ ಸಮೀಪದ ಕತ್ರಗಾಲ ಕ್ರಾಸ್ ಸಮೀಪದ ಇಬ್ಬರು ವಿದ್ಯಾರ್ಥಿಗಳ ಕೆಲಸ ಗಮನ ಸೆಳೆಯುವಂತಿದೆ. ಮಾತ್ರವಲ್ಲ ಉಳಿದವರಿಗೂ ಮಾದರಿಯಾಗಿದೆ.
ಬಿಳಗಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ವಿಠೋಬ ಮತ್ತು ನೂರಿ ಎನ್ನುವ ಹೆಸರಿನ ಈ ವಿದ್ಯಾರ್ಥಿಗಳು ಸಿದ್ದಾಪುರ- ಕುಮಟಾ ಮುಖ್ಯರಸ್ತೆಯಲ್ಲಿನ ಕತ್ರಗಾಲ ಕ್ರಾಸ್ ಬಳಿ ಸುಮಾರು ಅರ್ಧ ಕಿಮೀ.ಗೂ ಹೆಚ್ಚು ರಸ್ತೆಯಲ್ಲಿನ ಹೊಂಡಗಳಿಗೆ ಮಣ್ಣು ತುಂಬಿ ಓಡಾಟಕ್ಕೆ ಅನುವು ಮಾಡಿಕೊಟ್ಟರು.
ಶಾಲೆಯಲ್ಲಿ ಅಧ್ಯಾಪಕರು ಹೇಳುತ್ತಿದ್ದ ಸೇವಾ ಕಾರ್ಯದ ಕುರಿತಾದ ಮಾತು ಮತ್ತು ಸಾರ್ವಜನಿಕರು ರಸ್ತೆ ಹೊಂಡಗಳಿಂದಾಗಿ ಅನುಭವಿಸುತ್ತಿರುವ ತೊಂದರೆಯನ್ನು ಕಂಡು ರಜಾ ದಿನದಲ್ಲಿ ಈ ಕೆಲಸದಲ್ಲಿ ತೊಡಗಿಕೊಂಡರು.
ಅವರ ಕಾರ್ಯವನ್ನು ಗಮನಿಸಿ ಆ ವಿದ್ಯಾರ್ಥಿಗಳಲ್ಲಿ ವಿವರ ಪಡೆದ ಪತ್ರಿಕಾ ವಿತರಕ, ಸಂಚಾರಿ ವ್ಯಾಪಾರಿ ಬಾಲಿಕೊಪ್ಪದ ಗಣಪತಿ ನಾಯ್ಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
