

ಮಾರುತಿ
ಮಧುವನದ ಕತೆ
ಸಿದ್ಧಾಪುರ ತಾಲೂಕಿನ ಕಾನಗೋಡಿನ ನಿವೃತ್ತ ನೌಕರರೊಬ್ಬರು ಶ್ರೇಷ್ಠ ಜೇನು ಕೃಷಿಕರಾಗಿ ಜಿಲ್ಲೆಗೆ ಜೇನಿನ ಸವಿ ಉಣಿಸಿದ್ದಾರೆ.
ಮಾರುತಿ ಬೋರ್ಕರ್ ರಾಜ್ಯ ಸಾರಿಗೆ ಸಂಸ್ಥೆಯಮಾಜಿ ನೌಕರರು, ಕೃಷಿ ಪರಿಸರದ ಈ ನಿವೃತ್ತ ನೌಕರರಿಗೆ ಬಹಳ ಹಿಂದಿನಿಂದ ಜೇನು ತುಪ್ಪ, ಕೃಷಿಯ ಬಗ್ಗೆ ಆಸಕ್ತಿ ಇತ್ತಂತೆ. ನಿವೃತ್ತಿ ನಂತರ ಸಮಾನಮನಸ್ಕ ಜೇನು ಕೃಷಿಕರ ಸ್ನೇಹ ಮಾಡಿದ ಈ ಮಾರುತಿ ಈಗ ಮಾರುತಿ ಮಧುವನ ಎಂದೇ ಖ್ಯಾತರಾಗಿದ್ದಾರೆ.
ತಮ್ಮ ಹೆಸರಿನ ಬರೀ 5 ಗುಂಟೆ ಜಾಗದ ಜೊತೆಗೆ ಸಹೋದರರು, ಸ್ನೇಹಿತರು ಪರಿಚಿತರ ಮನೆಯಲ್ಲೆಲ್ಲಾ ಜೇನು ಗೂಡು ಇಡುವ ಇವರು ಕ್ವಿಂಟಾಲ್ ಲೆಕ್ಕದಲ್ಲಿ ಜೇನುಬೆಳೆಯುತ್ತಾರೆ. ಮಡದಿ ಮನೆ-ಮಂದಿಯನ್ನೆಲ್ಲಾ ಈ ಜೇನು ಕೃಷಿಗೆ ಬಳಸಿಕೊಳ್ಳುವ ಮಾರುತಿ ಬಿ.ಪಿ. ಶುಗರ್ ಸೇರಿದಂತೆ ನಾನಾ ಕಾಯಿಲೆಗಳಿರುವವರು ಈ ಜೇನಿನ ಸಂಘ ಮಾಡಿ ಆಗೀಗ ಕಚ್ಚಿಸಿಕೊಂಡರೆ ಔಷಧಿಯಂತೆ ಕೆಲಸಮಾಡುತ್ತದೆ ಎನ್ನುವ ಇವರು ಇಂಥ ಪ್ರಯೋಗಗಳಿಂದ ಹೆಸರು ಮಾಡಿದ್ದಾರೆ.
ಪ್ರಾಕೃತಿಕವಾಗಿ ಜೇನು, ನಸರಿ ಜೇನು ಬೆಳೆಯುವ ವಿಭಿನ್ನ ಪ್ರಯೋಗಗಳಲ್ಲಿ ಯಶಸ್ವಿಯಾಗಿರುವ ಇವರಿಗೆ ಜೇನು, ಜೇನುಕೃಷಿ ಬರಹಗಳೆಂದರೆ ಎಲ್ಲಿಲ್ಲದ ಪ್ರೀತಿ. ನೂರಾರು ಗೂಡುಗಳನ್ನು ಇಟ್ಟು ಜೇನು ತೆಗೆಯುತ್ತಾ ಫಲಕಂಡಿರುವ ಮಾರುತಿ ಕುಟುಂಬ ಮರದ ಪೊಟರೆಯಲ್ಲೇ ಔಷಧಿಗುಣಗಳ ಜೇನಿನ ಬೆಳೆ ಬೆಳೆದು ಖುಷಿ ಕಂಡಿದ್ದಾರೆ.
ಇವರು ಕ್ವಿಂಟಾಲ್ ಲೆಕ್ಕದಲ್ಲಿ ಬೆಳೆಯುವ ಜೇನಿನ ಸಾದಾ ಜೇನುತುಪ್ಪಕ್ಕೆ 250 ರಿಂದ ಕೇಜಿ.ಗೆ 300 ರೂಪಾಯಿ ಬೆಲೆಯಾದರೆ, ನಸ್ರಿ ತುಪ್ಪಕ್ಕೆ ಕನಿಷ್ಠ 2.5 ಸಾವಿರ ಒಂದು ಕೇಜಿ ತುಪ್ಪಕ್ಕೆ!. ಅಭ್ಯಾಸ, ಹವ್ಯಾಸಗಳಾಗಿ ಜೇನು ಕೃಷಿ ರೂಢಿಸಿಕೊಂಡಿರುವ ಮಾರುತಿ ಜೇನು ಕೃಷಿಯ ಆಸಕ್ತಿ-ಅಭಿರುಚಿ ವೃದ್ಧಿಸಿದ್ದು ಮಧುಕರ ಹೆಗಡೆಯವರ ಸ್ನೇಹ-ಸಹವಾಸದಿಂದ ಎನ್ನುವ ಇವರ ಮನೆಯಲ್ಲಿ ನಿತ್ಯ ಜೇನು ಉತ್ಫಾದನಾ ಪ್ರಾತ್ಯಕ್ಷಿಕೆ ನಡೆಯುತ್ತದೆ. ಜೇನು ಗೂಡು (ಪೆಟ್ಟಿಗೆ)ತಯಾರಿಕೆ, ಜೇನುಸಂಗ್ರಹ, ಜೇನು ಪಾಲನೆ, ಜೇನು ತುಪ್ಪ ಸಂಸ್ಕರಣೆ ಹೀಗೆ ಜೇನು ಉತ್ಫಾದನೆಯ ನಾನಾ ಹಂತಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸುವ ಇವರ ಸಾಧನೆ, ಸೇವೆಗೆ ತಾಲೂಕಿನ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಶ್ರೇಷ್ಠ ಜೇನು ಕೃಷಿಕ ಎಂದು ಗುರುತಿಸಿ, ಅಭಿನಂದಿಸಿವೆ.
ತಾಲೂಕಿನ ರೈತರಿಗೆ ಜೇನುಪೆಟ್ಟಿಗೆ, ಜೇನು, ಜೇನು ಪಾಲನಾ ವಿಧಾನಗಳೆಲ್ಲವನ್ನೂ ನೀಡುವ ಮಾರುತಿಬೋರ್ಕರ್ ಈಗ ಮಾರುತಿ ಮಧುವನ ಎಂದು ಅನ್ವರ್ಥಕನಾಮದಿಂದ ಕರೆಸಿಕೊಳ್ಳುತಿದ್ದಾರೆ.
ಆಸಕ್ತಿ-ಅಭಿರುಚಿ ಇದ್ದರೆ ವಯಸ್ಸು, ಹೆಚ್ಚಿನ ಅನುಕೂಲತೆಗಳ ಬೆಂಬಲವಿಲ್ಲದೆಯೂ ಸಾಧನೆ ಮಾಡಬಹುದು ಎಂಬುದಕ್ಕೆ ಮಾರುತಿ ಬೋರ್ಕರ್ ದೃಷ್ಟಾಂತ. ನಿವೃತ್ತ ನೌಕರರು ಸೇರಿದಂತೆ ಎಲ್ಲಾ ಕ್ಷೇತ್ರ, ವಯೋಮಾನದವರೂ ಕಿವಿ ಅರಳಿಸಿ, ಕಣ್ಣು ಅಗಲಿಸಿ ನೋಡುವಂತಹ ಸಾಧನೆ ಮಾಡಿರುವ ಈ ನಿವೃತ್ತ ನೌಕರ ಜೀವನೋತ್ಸಾಹ ಮತ್ತು ಜೀವಂತಿಕೆಗೆ ಸಾಕ್ಷಿ.
ವಿಶಿಷ್ಟ ಪೆಟ್ಟಿಗೆಗಳು-
ಜೇನು ಸಾಕಾಣಿಕೆಯಲ್ಲಿ ಜೇನು ಸಂಗ್ರಹಿಸುವ ಪೆಟ್ಟಿಗೆಗಳಿಗೂ ಮಹತ್ವವಿದೆ. ಕಾಡು ಹುಳುಗಳು ಜೇನು ಪೆಟ್ಟಿಗೆಗೆ ನುಗ್ಗಿದಾಗ ರಕ್ಷಣೆ ಮಾಡಿಕೊಳ್ಳುವ ವಿನ್ಯಾಸ,ನಸ್ರಿ ಜೇನನ್ನು ಉಪಾಯದಿಂದ ಪ್ಲಾಸ್ಟಿಕ್ ಬಾಟಲಿಯಲ್ಲಿ ಜೇನು ಪೆಟ್ಟಿಗೆಯಲ್ಲೇ ಉಪಾಯದಿಂದ ಸಂಗ್ರಹಿಸುವುದು ಹೀಗೆ ಜೇನು ಕೃಷಿ, ಜೇನು ತಯಾರಿಕೆಯ ಪೆಟ್ಟಿಗೆ ರಚನೆಯಲ್ಲೂ ವಿಶಿಷ್ಟ ವಿಧಾನ ಅನುಸರಿಸುವ ಮಾರುತಿ ಮಧುವನ ಈಗ ಜೇನು ಪೆಟ್ಟಿಗೆ ತಯಾರಿಸುವ ಸಣ್ಣ ಉದ್ಯಮಿಯಾಗಿಯೂ ಹೆಸರುಮಾಡುತಿದ್ದಾರೆ.
ಕೆಲಸ ಇಲ್ಲ ಎನ್ನುವ ಎಳೆಯರು ಮತ್ತು ನಿವೃತ್ತರಿಗೆಲ್ಲಾ ಜೇನು ಕೆಲಸಮಾಡಿ ನಾವು,ನೀವು, ಪರಿಸರ ಎಲ್ಲವೂ ಉಳಿಯೋಣ, ಉಳಿಸೋಣ ಎನ್ನುವ ಸಂದೇಶವೇ ಅವರು ಈ ಜಗತ್ತಿಗೆ ಕೊಡುವ ವಿವೇಕ,ಸಂದೇಶ.






