

ಮಹಾತ್ಮಾ ಗಾಂಧಿಯವರ 151ನೇ ಜಯಂತಿ ಅಂಗವಾಗಿ ಭಾರತೀಯ ಜನತಾ ಪಕ್ಷವು ಅ.16ರಿಂದ ಸಂಸದರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿ ಅ.16ರಂದು ಬೆಳಿಗ್ಗೆ 9ಕ್ಕೆ ಕಾರವಾರದಲ್ಲಿ ಮಹಾತ್ಮಾಗಾಂಧಿಯವರು ಭೇಟಿ ನೀಡಿದಾಗ ತಂಗಿದ ಹಳದಿಪುರಕರ ಅವರ ಮನೆಯಿಂದ ಪಾದಯಾತ್ರೆ ಆರಂಭಗೊಳ್ಳುವುದು. ಸಂಸದ ಅನಂತಕುಮಾರ ಹೆಗಡೆ ಪಾದಯಾತ್ರೆಗೆ ಚಾಲನೆ ನೀಡುವರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಭಾನುಪ್ರಕಾಶ್,ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು, ಜಿಪಂ ಸದಸ್ಯರು, ಎಲ್ಲ ಹಂತದ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಳ್ಳುವರು.16ರಂದು ಕಾರವಾರ ವಿಧಾನಸಭಾ ಕ್ಷೇತ್ರ, ಅ.17ರಂದು ಕುಮಟಾ ವಿಧಾನಸಭಾ ಕ್ಷೇತ್ರ, 18ರಂದು ಭಟ್ಕಳ ವಿಧಾನಸಭಾ ಕ್ಷೇತ್ರ, 19ರಂದು ಸಿದ್ದಾಪುರದಿಂದ ಆರಂಭಿಸಿ ಶಿರಸಿ ವಿಧಾನಸಭಾ ಕ್ಷೇತ್ರ, 20ರಂದು ಬನವಾಸಿಯಿಂದ ಆರಂಭಿಸಿ ಮುಂಡಗೋಡ ವಿಧಾನಸಭಾ ಕ್ಷೇತ್ರ, 21ರಂದು ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ಸಮಾರೋಪಗೊಳ್ಳುವುದು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸಭೆಗಳ ಮೂಲಕ ಮಹಾತ್ಮಾಗಾಂಧಿಯವರ ವಿಚಾರಗಳ ಕುರಿತು ಜಾಗೃತಿ ಮೂಡಿಸಲಾಗುವದು ಎಂದರು.
ಕೇಂದ್ರ ಸರಕಾರವು ಈಗಾಗಲೇ ಮಹಾತ್ಮಾಗಾಂಧಿಯವರ ಕನಸುಗಳನ್ನು ನನಸುಮಾಡುವಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವರ ಸ್ವದೇಶಿ ಚಿಂತನೆ, ಅಧಿಕಾರ ವಿಕೇಂದ್ರಿಕರಣ ಮುಂತಾದವುಗಳ ಕುರಿತು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದೆ.ಸ್ವಚ್ಛತೆಯ ಕುರಿತು ಸ್ವಚ್ಛಭಾರತ ಅಭಿಯಾನದ ಮೂಲಕ ಜನತೆಗೆ ಸ್ವಚ್ಛತೆಯ ಬಗ್ಗೆ ಶ್ರಮದಾನದ ಮೂಲಕ ಜಾಗೃತಿ ಮೂಡಿಸಿದ್ದಲ್ಲದೇ ಜನತೆಗೆ ಶೌಚಾಲಯ ಒದಗಿಸಿಕೊಡುವಲ್ಲಿ ಹೆಚ್ಚಿನ ಗಮನ ನೀಡಿದೆ. ಗ್ರಾಮರಾಜ್ಯದ ಕಲ್ಪನೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪಂಚಾಯತಗಳಿಗೆ ಹೆಚ್ಚಿನ ಅನುದಾನ ಒದಗಿಸಿದ್ದಲ್ಲದೇ, ಅವಕ್ಕೆ ಹೆಚ್ಚಿನ ಅಧಿಕಾರ ನೀಡಿದೆ.
ಮದ್ಯಪಾನ ನಿಷೇಧದ ಕುರಿತು ಸರಕಾರ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಈವರೆಗೆ ಆಡಳಿತ ನಡೆಸಿದ ಹಲವು ಮಹಾತ್ಮಾ ಗಾಂಧಿಯವರ ಹೆಸರನ್ನು ಬಳಸಿಕೊಂಡಿವೆಯೇ ಹೊರತು ಅವರ ವಿಚಾರಗಳನ್ನು ಕಾರ್ಯಗತಗೊಳಿಸಿಲ್ಲ. ಭಾರತೀಯ ಜನತಾ ಪಕ್ಷ ಮಹಾತ್ಮಾಗಾಧಿಯವರನ್ನು ರಾಜಕಾರಣಕ್ಕೆ ಬಳಸಿಕೊಳ್ಳದೇ ಅವರ ಚಿಂತನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಮುಂದಾಗಿದೆ ಎಂದರು.
ವಿಧಾನಸಭೆಗೆ ನಡೆಯಲಿರುವ ಉಪ ಚುನಾವಣೆಯ ಕುರಿತಂತೆ ಪಕ್ಷವು ಸಿದ್ಧತೆ ನಡೆಸಿದ್ದು ವರಿಷ್ಠರು ನಿರ್ಣಯಿಸಿದವರು ಅಭ್ಯರ್ಥಿಯಾಗುತ್ತಾರೆ. ಯಲ್ಲಾಪುರ ಕ್ಷೇತ್ರದಲ್ಲಿ ಈಗಾಗಲೇ ಎಲ್ಲ ಹಂತಗಳಲ್ಲೂ ಸಂಘಟನೆಯನ್ನು ಗಟ್ಟಿಗೊಳಿಸಲಾಗಿದ್ದು ನಮ್ಮ ಅಭ್ಯರ್ಥಿ ಗೆಲುವು ಶತಸಿದ್ಧ. ಪಕ್ಷವು ಯಾರನ್ನೇ ಅಭ್ಯರ್ಥಿ ಮಾಡಿದರೂ ಗೆಲ್ಲಿಸಲು ಸಜ್ಜಾಗಿದ್ದೇವೆ ಎಂದರು.
ಭಾಷಾ ಪ್ರಯೋಗಾಲಯ ಉದ್ಘಾಟನೆ- ಸದ್ಭಾವನಾ ಪ್ರಶಸ್ತಿ ಪ್ರದಾನ
ಕಳೆದ 25 ವರ್ಷಗಳಿಂದ ವಿಕಲಚೇತನÀ, ಮುಖ್ಯವಾಗಿ ಅಂಧ ವಿದ್ಯಾರ್ಥಿಗಳ ಬದುಕಿನಲ್ಲಿ ಆತ್ಮವಿಶ್ವಾಸ ಮೂಡಿಸಿ ಅಗತ್ಯವಾದ ಶಿಕ್ಷಣ ನೀಡುತ್ತಿರುವ ಆಶಾ ಕಿರಣ ಟ್ರಸ್ಟಿನ ಕಾರ್ಯ ಶಾಘ್ಲನೀಯ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶ್ಲಾಘಿಸಿದರು.
ಅವರು ಇಲ್ಲಿನ ಆಶಾ ಕಿರಣ ಟ್ರಸ್ಟ್‍ನ ಜಗದ್ಗುರು ಮುರುಘರಾಜೇಂದ್ರ ಅಂಧರ ಶಾಲೆಯಲ್ಲಿ ಡಾ| ಎ.ಪಿ.ಜೆ.ಅಬ್ದುಲ್ ಕಲಾಂ ಜನ್ಮದಿನದಂದು ನೂತನವಾಗಿ ಆರಂಭಿಸಿದ ಭಾಷಾ ಪ್ರಯೋಗಾಲಯ ಉದ್ಘಾಟಿಸಿ, ಸಾಧಕರಿಗೆ ಸದ್ಭಾವನಾ ಪ್ರಶಸ್ತಿ ಪುರಸ್ಕರಿಸಿ ಮಾತನಾಡಿದರು.
ಶಾರೀರಿಕವಾಗಿ ಉತ್ತಮವಾಗಿರುವವರಿಗಿಂತ ವಿಕಲಚೇತನರು ಹೆಚ್ಚಿನ ಸಾಧನೆ ಮಾಡುತ್ತಾರೆ. ಸಮಾಜ ವಿಕಲಚೇತನರನ್ನು ನೋಡುವ ದೃಷ್ಟಿಕೋನ ಭಿನ್ನವಾದದ್ದು. ಅವರಿಗೆ ಕನಿಕರದ ಮಾತಿಗಿಂತ ಅವರ ಸಾಧನೆ ಗುರುತಿಸಿ ಪ್ರೋತ್ಸಾಹಿಸುವದು ಅಗತ್ಯ. ಅವರಿಗೆ ಸೂಕ್ತ ಶಿಕ್ಷಣ, ಸಂಸ್ಕಾರ ನೀಡಿದಾಗ ಅವರು ಇನ್ನಷ್ಟು ಸಾಧನೆ ಮಾಡಲು, ರಾಷ್ಟ್ರದ ಆಸ್ತಿಯಾಗಲು ಸಾಧ್ಯ. ಆ ನಿಟ್ಟಿನಲ್ಲಿ ಆಶಾಕಿರಣ ಟ್ರಸ್ಟ ಹಲವಾರು ದಾನಿಗಳ, ಸಂಸ್ಥೆಗಳ ನೆರವಿನೊಂದಿಗೆ ಉತ್ತಮ ಕಾರ್ಯ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಥಪೂರ್ಣ ಕಾರ್ಯಗಳನ್ನು ನಡೆಸಲಿ.ನಮ್ಮೆಲ್ಲರ ಸಹಾಯ, ಸಹಕಾರ ಸದಾ ಇರುತ್ತದೆ ಎಂದರು.

