ಕಾಡುಪ್ರಾಣಿ, ಕಾಡುರಕ್ಷಕ ಇಲಾಖೆಯ ಕಿರುಕುಳ ಹಿಂಸೆಗೆ ಧರಣಿ-ಪ್ರತಿಭಟನೆಯ ಬಿಸಿ
ರೈತರ ಆಕ್ರೋಶಕ್ಕೆಗುರಿಯಾದ ಅಧಿಕಾರಿಗಳು
ವನ್ಯಮೃಗಗಳ ಹಾವಳಿ ಮತ್ತು ಅರಣ್ಯ ಇಲಾಖೆಯ ಕಿರುಕುಳ ಹಿಂಸೆಗಳ ವಿರುದ್ಧ ಜನರು ಸಿಡಿದೆದ್ದು ಪ್ರತಿಭಟನೆ ಮತ್ತು ಆತ್ಮಾಹುತಿಗೆ ಪ್ರಯತ್ನಿಸಿದ ಘಟನೆ ಇಂದು (ಸಿದ್ಧಾಪುರ) ತಾಲೂಕಿನ ಇಟಗಿಯಲ್ಲಿ ನಡೆದಿದೆ.
ಕಾಡುಪ್ರಾಣಿಗಳ ಹಾವಳಿಯಿಂದ ರೈತರಿಗೆ ಆಗುತ್ತಿರುವ ತೊಂದರೆಗೆ ಪರಿಹಾರ ಕಂಡುಹಿಡಿಯಲು ಇಂದು ಇಟಗಿಗ್ರಾಮ ಪಂಚಾಯತ್‍ನಲ್ಲಿ ವಿಶೇಶ ಗ್ರಾಮ ಸಭೆಯನ್ನು ಕರೆಯಲಾಗಿತ್ತು. ಸಭೆ ಪ್ರಾರಂಭವಾಗುತ್ತಲೇ ಕೆಲವು ಇಲಾಖೆಯ ಅಧಿಕಾರಿಗಳು ಹಾಜರಿರದೆ ಕಾಟಾಚಾರಕ್ಕೆ ಸಭೆ ನಡೆಸುವುದು ಬೇಡ ಎಂದು ಸ್ಥಳಿಯರು ಪ್ರತಿಭಟಿಸಿದರು. ನಂತರ ಸ್ಥಳಿಯರನ್ನು ಸಮಾಧಾನಪಡಿಸಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜೇಶ್ ನಾಯ್ಕ ಎರಡು ತಿಂಗಳ ಹಿಂದಿನ ಮುಂದುವರಿದ ಗ್ರಾಮಸಭೆ ಇದು, ಕೆಲವು ಇಲಾಖೆಗಳು ಹಿಂದಿನ ಸಭೆಯಲ್ಲಿ ಪಾಲ್ಗೊಂಡು ಮಾಹಿತಿ ನೀಡಿವೆ. ಈಗ ಕಾಡುಪ್ರಾಣಿಗಳ ಹಾವಳಿ ಕುರಿತ ವಿಶೇಶ ಗ್ರಾಮಸಭೆ ಇದಾಗಿರುವುದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸೋಣ ನಂತರ ಕೆಲವು ಇಲಾಖೆಯ ಅಧಿಕಾರಿಗಳು ಬರುತ್ತಾರೆ. ಎಂದು ಸಭೆ ಪ್ರಾರಂಭಿಸಿದರು.
ಸಭೆಯಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಪ್ರಾರಂಭವಾದ ಚರ್ಚೆ ಅರಣ್ಯ ಇಲಾಖೆಯ ಕಿರುಕುಳ, ಹಿಂಸೆಗೆ ಬಂದು ನಿಂತಿತು. ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸ್ಥಳಿಯರು ಕಾಡುಪ್ರಾಣಿಗಳ ಹಾವಳಿ, ಅರಣ್ಯ ಇಲಾಖೆಯ ಅಧಿಕಾರಿಗಳ ಕಿರುಕುಳ, ಅತಿಕ್ರಮಣದಾರರ ಮೇಲೆ ಹಿಂಸೆ ನಿಯಂತ್ರಿಸದಿದ್ದರೆ ಪರಿಣಾಮ ಕೆಟ್ಟದಾಗಬಹುದು ಎಂದು ಎಚ್ಚರಿಸಿದರು.
ಸಭೆಗೆ ಮಾಹಿತಿ ನೀಡಿದ ವಲಯ ಅರಣ್ಯಾಧಿಕಾರಿ ಹರೀಶ್ ರೈತರನ್ನು ಸಮಾಧಾನಪಡಿಸುವ ಪ್ರಯತ್ನಮಾಡಿದರೂ ಫಲಕಾಣಲಿಲ್ಲ. ಈ ಬಿರುಸಿನ ಚರ್ಚೆ, ಗಲಾಟೆ ಸಮಯದಲ್ಲೇ ಸಭೆಯ ಎದುರು ಸೀಮೆಎಣ್ಣೆ ಕ್ಯಾನ್ ತಂದ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳುತ್ತಾರೆ ಎಂದು ಸ್ಥಳಿಯರು ಹೇಳಿ ಸಣ್ಣ ಪ್ರಹಸನವೇ ನಡೆದು ಹೋಯಿತು. ಕೆಲವು ಅಧಿಕಾರಿಗಳ ಗೈರು ಹಾಜರಿ, ಉಪಸ್ಥಿತರಿದ್ದ ಅಧಿಕಾರಿಗಳ ವಿವರಣೆಗಳಿಂದ ತೃಪ್ತರಾಗದ ಸ್ಥಳಿಯರು ಧರಣಿ ಸತ್ಯಾಗ್ರಹ ಪ್ರಾರಂಭಿಸಿಯೇ ಬಿಟ್ಟರು.