

ಮಲೆನಾಡು,ಕರಾವಳಿಯಲ್ಲಿ ಕಳೆದ ಒಂದು ವಾರದಿಂದ ಪ್ರತಿದಿನ ಸುರಿಯುತ್ತಿರುವ ಮಳೆ ಬೆಳೆ ಹಾಳುಮಾಡುವುದರೊಂದಿಗೆ ರೈತರ ಹೊಟ್ಟೆಮೇಲೆ ಹೊಡೆದಿದೆ.
ಈ ವರ್ಷದ ಮಹಾಮಳೆಯಲ್ಲಿ ಮಳೆ,ಪ್ರವಾಹದ ಹಾನಿ ಸಂಭವಿಸಿ ಚೇತರಿಸಿಕೊಳ್ಳುವ ಮೊದಲೇ ಈಗಿನ ಹಿಂಗಾರು ಮಳೆ ಬಹಳ ಕಡೆ ಅನಾಹುತ ಮಾಡಿದೆ. ಶನಿವಾರ, ಸೋಮವಾರ ಸುರಿದ ಭಾರಿ ಮಳೆಗೆ ಉತ್ತರಕನ್ನಡ ಜಿಲ್ಲೆಯ ಅನೇಕ ಕಡೆ ಹಾನಿ ಸಂಭವಿಸಿದೆ. ಸಿದ್ದಾಪುರದ ಕೋಲಶಿರ್ಸಿ ಪಂಚಾಯತ್ ಬಳಗುಳಿ, ಬಾಳೆಗದ್ದೆ ಸೇರಿದ ಕೆಲವು ಕಡೆ ಕೃಷಿಭೂಮಿಗೆ ಹಾನಿಯಾಗಿದೆ.
ಬಿದ್ರಕಾನ ಗ್ರಾಮ ಪಂಚಾಯತ್ ನ ಕೆಲವು ಕಡೆ ವಿಪರೀತ ಮಳೆಯಿಂದ ತೋಟ,ಗದ್ದೆಗಳಿಗೆ ಹಾನಿಯಾಗಿದೆ. ಹಳದೋಟದಲ್ಲಿ ತೋಟದ ಮೇಲೆ ನೆಗಸು ಹರಿದಿದ್ದರಿಂದ ಬಹುತೇಕ ತೋಟದ ಮುಚ್ಚಿಗೆ,ಗೊಬ್ಬರ, ಮಣ್ಣು ತೊಳೆದುಹೋಗಿದ್ದಲ್ಲದೆ, ತೋಟದಲ್ಲಿನ ಫಲಭರಿತ ಅಡಿಕೆ,ತೆಂಗು,ಬಾಳೆ, ಮೆಣಸಿನ ಬೆಳೆಗೆ ಹಾನಿಯಾಗಿದೆ.
ಈ ಬಗ್ಗೆ ಗ್ರಾಮಸ್ಥರು ಕಂದಾಯ ಇಲಾಖೆಗೆ ವರದಿ ನೀಡಿದ್ದು ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಹಿಂದಿನ ವಾರದಿಂದ ನಿತ್ಯ ಬೀಳುತ್ತಿರುವ ಮಳೆಗೆ ಹಾನಿ ಸಂಭವಿಸಿದ್ದರೆ, ಇದೇ ವಾರದ ಅ.24-25 ರ ನಡುವೆ 200 ಮಿ.ಮೀ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ದೀಪಾವಳಿ ಮುನ್ನಾ ದಿನಗಳಲ್ಲಿ ವಿಪರೀತ ಮಳೆ ಸುರಿಯುವ ಸಾಧ್ಯತೆಯನ್ನು ತಿಳಿಸಿರುವ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಶಿಸಿದೆ.
ಅರಣ್ಯ ಇಲಾಖೆಯ ಕಿರುಕುಳಕ್ಕೆ ಬೇಸತ್ತು ಆತ್ಮಾಹುತಿ ಬೆದರಿಕೆ-
ಕಾಡುಪ್ರಾಣಿ, ಕಾಡುರಕ್ಷಕ ಇಲಾಖೆಯ ಕಿರುಕುಳ ಹಿಂಸೆಗೆ ಧರಣಿ-ಪ್ರತಿಭಟನೆಯ ಬಿಸಿ
ರೈತರ ಆಕ್ರೋಶಕ್ಕೆಗುರಿಯಾದ ಅಧಿಕಾರಿಗಳು
ವನ್ಯಮೃಗಗಳ ಹಾವಳಿ ಮತ್ತು ಅರಣ್ಯ ಇಲಾಖೆಯ ಕಿರುಕುಳ ಹಿಂಸೆಗಳ ವಿರುದ್ಧ ಜನರು ಸಿಡಿದೆದ್ದು ಪ್ರತಿಭಟನೆ ಮತ್ತು ಆತ್ಮಾಹುತಿಗೆ ಪ್ರಯತ್ನಿಸಿದ ಘಟನೆ ಇಂದು (ಸಿದ್ಧಾಪುರ) ತಾಲೂಕಿನ ಇಟಗಿಯಲ್ಲಿ ನಡೆದಿದೆ.
ಕಾಡುಪ್ರಾಣಿಗಳ ಹಾವಳಿಯಿಂದ ರೈತರಿಗೆ ಆಗುತ್ತಿರುವ ತೊಂದರೆಗೆ ಪರಿಹಾರ ಕಂಡುಹಿಡಿಯಲು ಇಂದು ಇಟಗಿಗ್ರಾಮ ಪಂಚಾಯತ್‍ನಲ್ಲಿ ವಿಶೇಶ ಗ್ರಾಮ ಸಭೆಯನ್ನು ಕರೆಯಲಾಗಿತ್ತು. ಸಭೆ ಪ್ರಾರಂಭವಾಗುತ್ತಲೇ ಕೆಲವು ಇಲಾಖೆಯ ಅಧಿಕಾರಿಗಳು ಹಾಜರಿರದೆ ಕಾಟಾಚಾರಕ್ಕೆ ಸಭೆ ನಡೆಸುವುದು ಬೇಡ ಎಂದು ಸ್ಥಳಿಯರು ಪ್ರತಿಭಟಿಸಿದರು. ನಂತರ ಸ್ಥಳಿಯರನ್ನು ಸಮಾಧಾನಪಡಿಸಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜೇಶ್ ನಾಯ್ಕ ಎರಡು ತಿಂಗಳ ಹಿಂದಿನ ಮುಂದುವರಿದ ಗ್ರಾಮಸಭೆ ಇದು, ಕೆಲವು ಇಲಾಖೆಗಳು ಹಿಂದಿನ ಸಭೆಯಲ್ಲಿ ಪಾಲ್ಗೊಂಡು ಮಾಹಿತಿ ನೀಡಿವೆ. ಈಗ ಕಾಡುಪ್ರಾಣಿಗಳ ಹಾವಳಿ ಕುರಿತ ವಿಶೇಶ ಗ್ರಾಮಸಭೆ ಇದಾಗಿರುವುದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸೋಣ ನಂತರ ಕೆಲವು ಇಲಾಖೆಯ ಅಧಿಕಾರಿಗಳು ಬರುತ್ತಾರೆ. ಎಂದು ಸಭೆ ಪ್ರಾರಂಭಿಸಿದರು.


