

ಚಿಂತನ ಮಂಥನದ ಫಲಶೃತಿ-
200 ಚೆಕ್ ಡ್ಯಾಂ ನಿರ್ಮಾಣಕ್ಕೆ ಗುರಿ
ಉತ್ತರ ಕನ್ನಡ ಜಿಲ್ಲೆಯಲ್ಲಿ 200 ಬೆಕ್ ಡ್ಯಾಂ ಗಳು ನಿರ್ಮಾಣವಾಗುತಿದ್ದು ಸಿದ್ದಾಪುರ ತಾಲೂಕಿನ 41 ಬಾಂದಾರುಗಳ ನಿರ್ಮಾಣಕ್ಕೆ ಇದೇ ಯೋಜನೆಯಡಿ ಪ್ರಸ್ಥಾವನೆ ಸಲ್ಲಿಕೆಯಾಗಿ ತಾಂತ್ರಿಕ ಮಂಜೂರಾತಿ ದೊರೆತಿದೆ ಎಂದು ಜಿ.ಪಂ. ಮುಖ್ಯಕಾರ್ಯದರ್ಶಿ ಮೊಹಮ್ಮದ್ ರೋಷನ್ ಹೇಳಿದರು.
ಇಲ್ಲಿಯ ತಾ.ಪಂ.ನಲ್ಲಿ ನಡೆದಪ್ರಗತಿ ಪರಿಶೀಲನೆ ಮತ್ತು ಚಿಂತನ ಮಂಥನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜನಪ್ರತಿನಿಧಿಗಳು ಅಧಿಕಾರಿಗಳ ಗುರಿ, ಉದ್ದೇಶ ಒಂದೇ ಆಗಿದ್ದರೂ ಹೊಂದಾಣಿಕೆ ಕೊರತೆ ಕಾಣುತಿತ್ತು ಹಾಗಾಗಿ ಅಧಿಕಾರಿಗಳು ಜನಪ್ರತಿನಿಧಿಗಳ ನಡುವಿನ ಸಮನ್ವಯ ಹೆಚ್ಚಿಸಿ ಅಭಿವೃದ್ಧಿಯ ವೇಗ ಹೆಚ್ಚಿಸುವ ಉದ್ಧೇಶದಿಂದ ಪ್ರಾರಂಭವಾಗಿದ್ದ ಚಿಂತನ ಮಂಥನ ಈ ದಿಸೆಯಲ್ಲಿ ಫಲ ನೀಡುತ್ತಿದೆ ಎಂದರು.
ಉತ್ತರ ಕನ್ನಡ ಜಿಲ್ಲೆಯ ಪ್ರಗತಿಗಾಗಿ ದುಡಿಯುತ್ತಾ ನಾನಾ ವಿಭಾಗಗಳಲ್ಲಿ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ಈ ಸಾಧನೆ ಸಾರ್ವಜನಿಕರು, ಜನಪ್ರತಿನಿಧಿಗಳ ಸಹಕಾರದಿಂದ ಆಗಿದೆ. ಕಸವಿಲೇವಾರಿ ಘಟಕವನ್ನು ಗೋಕರ್ಣ ದಲ್ಲಿ ಮಾದರಿಯಾಗಿ ನಿರ್ವಹಿಸುತಿದ್ದೇವೆ. ಜನರ ಒಳಿತಿಗಾಗಿ ಸಾಧ್ಯವಾದಷ್ಟು ಒಳ್ಳೆಯ ಕೆಲಸ ಮಾಡುತ್ತಿರುವುದಕ್ಕೆ ಎಲ್ಲರ ಸಹಕಾರ ದೊರೆಯುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಅಧ್ಯಕ್ಷೆ ಜಯಶ್ರೀ ಮೊಗೇರ್ ಜಿಲ್ಲೆಯ ಗ್ರಾ.ಪಂ.ಗಳ ಸಮಸ್ಯೆ, ತೊಂದರೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಲು ಚಿಂತನ-ಮಂಥನ ಪ್ರಾರಂಭಿಸಲಾಗಿದೆ ಎಂದರು. ಸಭೆಯಲ್ಲಿ ಸಲಹೆ ನೀಡಿದ ತಾ.ಪಂ.ಅಧ್ಯಕ್ಷ ಸುಧೀರ್ ಗೌಡರ್ ಪ್ರಾಕೃತಿಕ ವಿಕೋಪ, ಕಾಡುಪ್ರಾಣಿಗಳ ಹಾವಳಿಯಿಂದ ತಾಲೂಕಿನ ಜನತೆ ತೊಂದರೆಯಲ್ಲಿದ್ದಾರೆ. ಮಳೆಯಿಂದಾಗಿ ಕಾಮಗಾರಿಗಳ ಅನುಷ್ಠಾನ ವಿಳಂಬವಾಗುತ್ತಿದೆ ಹಾಗಾಗಿ ಹೆಚ್ಚಿನ ಸಮಯಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
