ನಿವೃತ್ತ ಲೋಕಾಯುಕ್ತರಾಗಿದ್ದ ವೆಂಕಟಾಚಲ ತಮ್ಮ 90ನೇ ವಯಸ್ಸಿನಲ್ಲಿ ಬುಧವಾರ ಬೆಂಗಳೂರಿನಲ್ಲಿ ನಿಧನರಾದರು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಾಗಿದ್ದ ಎನ್. ವೆಂಕಟಾಚಲರನ್ನು 2000ದ ದಶಕದಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣರ ಸರ್ಕಾರ ನೇಮಕ ಮಾಡಿತ್ತು.
ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಅಸ್ಥಿತ್ವಕ್ಕೆ ಬಂದು 2ದಶಕಗಳು ಕಳೆದಿದ್ದರೂ ರಾಜ್ಯದಲ್ಲಿ ಲೋಕಾಯುಕ್ತ ಎನ್ನುವ ಸಂಸ್ಥೆಯೊಂದಿದೆ,ಅದಕ್ಕೆ ನಿವೃತ್ತ ನ್ಯಾಯಮೂರ್ತಿಗಳು ಮುಖ್ಯಸ್ಥರಾಗಿರುತ್ತಾರೆ ಎಂದು ಪ್ರಚಾರಕ್ಕೆ ಬಂದಿದ್ದೇ 2000ನೇ ಇಸ್ವಿಯ ನಂತರ. ಈ ಅವಧಿಯಲ್ಲಿ ಲೋಕಾಯುಕ್ತರಾಗಿ ಚುರುಕಿನಿಂದ ಕೆಲಸಮಾಡುತ್ತಾ ಬೃಷ್ಟರನ್ನು ಶಿಕ್ಷಿಸಿದ ಎನ್ ವೆಂಕಟಾಚಲರ ಅವಧಿಯಲ್ಲಿ ರಾಜ್ಯದ ಲೋಕಾಯುಕ್ತದ ಒಂದು ದಿವಸದ ಪ್ರಕರಣಗಳ ಸಂಖ್ಯೆ 25-30 ರಿಂದ 300 ಕ್ಕೇರಿತು. ಯಾವ ಹಂತದ ಅಧಿಕಾರಿಗಳನ್ನೂ ಏಕವಚನದಲ್ಲೇ ಏನಯ್ಯಾ ಎಂದು ಸಂಭೋದಿಸುತಿದ್ದ ವೆಂಕಟಾಚಲ ಜಿಲ್ಲೆಗಳಿಗೆ ಬರುತ್ತಾರೆಂದರೆ ಅಧಿಕಾರಿಗಳ ತೊಳ್ಳೆ ನಡುಗುತಿತ್ತು.
ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಗೆ ಬಂದು ಬೃಷ್ಟರಿಗೆ ಬಲೆ ಬೀಸಿದ್ದ ವೆಂಕಟಾಚಲ ಕಾರವಾರಕ್ಕೆ ಬಂದಿದ್ದಾಗ ನಾವೆಲ್ಲಾ ಹೊಸ ವರದಿಗಾರರು. ಕಾರವಾರದ ಆಸ್ಫತ್ರೆ, ಸರ್ಕಾರಿ ಕಛೇರಿಗಳಿಗೆ ಮಿಂಚಿನ ವೇಗದಲ್ಲಿ ಭೇಟಿ ನೀಡಿದ್ದ ಅವರು ಅಧಿಕಾರಿಗಳ ದಫ್ತರಿಗೇ ಕೈ ಹಚ್ಚಿ ಅದ್ಯಾಕೆ? ಇದ್ಯಾಕೆ ಎಂದು ಪ್ರಶ್ನಿಸಿದ್ದರು.
ಕಾರವಾರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗೆ ಬಂದು ಗುಡುಗಿದ ವೆಂಕಟಾಚಲರನ್ನು ನೋಡಿ ನಮಗೆಲ್ಲಾ ರೋಮಾಂಚನವಾಗಿದ್ದರೆ, ಬೃಷ್ಟರು ಹೆದರಿ ಕಂಗಾಲಾಗಿದ್ದರು. ಉತ್ತರ ಕನ್ನಡ, ಶಿವಮೊಗ್ಗ, ಸೇರಿದಂತೆ ರಾಜ್ಯದಾದ್ಯಂತ ತಿಂಗಳಿಗೆ ಕನಿಷ್ಟ 8-10 ಜಿಲ್ಲೆ ಸುತ್ತುತಿದ್ದ ಲೋಕಾಯುಕ್ತ ವೆಂಕಟಾಚಲರ ಕ್ರೀಯಾಶೀಲತೆ,
ಸೂಕ್ಷ್ಮಗ್ರಾಹಿತ್ವದಿಂದಾಗಿ ಪ್ರತಿನಿತ್ಯ ಅಧಿಕಾರಿಗಳು ಸೆರೆಯಾಗುತಿದ್ದರು.
ಎನ್. ವೆಂಕಟಾಚಲರ ಮೊದಲು, ನಂತರ ಅನೇಕ ನ್ಯಾಯಮೂರ್ತಿಗಳು ಬಂದು ಹೋಗಿದ್ದಾರೆ.ಆದರೆ ಸಂತೋಷಹೆಗ್ಗಡೆಯವರಂತೆ ಸುದ್ದಿಮಾಡುತ್ತಲೇ ಕೆಲಸಮಾಡಿದ ಇವರೇ ಇಬ್ಬರು ನ್ಯಾಯಮೂರ್ತಿಗಳನ್ನು ಬಿಟ್ಟರೆ ಬೇರೆಯಾರ ಹೆಸರೂ ನೆನಪಿಗೆ ಬಾರದಿರುವುದು ಅವರ ಶಕ್ತಿ-ಸಾಮಥ್ರ್ಯ,ಪ್ರಾಮಾಣಿಕ ಕೆಲಸಕ್ಕೆ ಸಿಕ್ಕ ಗೌರವ ಎನ್ನಲೇಬೇಕು. ಈಗ ನಿಧನರಾದ ಎನ್.ವೆಂಕಟಾಚಲ ಅನೇಕರನ್ನು ದಂಗುಬಡಿಸಿದ್ದರು, ಬಹುತೇಕರನ್ನು ಉತ್ತೇಜಿಸಿ, ಸನ್ಮಾರ್ಗಕ್ಕೆ ಪ್ರೇರೇಪಿಸಿದ್ದರು ಎನ್ನುವುದೇ ಅವರು ನಾಡಿಗೆ ನೀಡಿದ ಕಾಣಿಕೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಅನೇಕ ಗಣ್ಯರು ಮಾಜಿ ಲೋಕಾಯುಕ್ತ ಎನ್. ವೆಂಕಟಾಚಲರ ಸಾವಿಗೆ ವಿಷಾದ ವ್ಯಕ್ತಪಡಿಸಿ,ಸಂತಾಪ ಸೂಚಿಸಿದ್ದಾರೆ.