

ಯಲ್ಲಾಪುರದ ಸಾಹಿತಿ ಗಣೇಶ ಪಿ. ನಾಡೋರ ಅವರು ಮಕ್ಕಳಿಗಾಗಿ ಬರೆದ ‘ಪುಟ್ಟ ಯಜಮಾನ’ ಕಾದಂಬರಿ ಪ್ರಸ್ತುತ ಸಾಲಿನ ಜಿ.ಬಿ. ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ.
ನ. ೧೦ ರಂದು ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.
ಹಿರಿಯ ಸಾಹಿತಿ ಎಚ್. ಎಸ್. ವೆಂಕಟೇಶಮೂರ್ತಿ ‘ಪುಟ್ಟ ಯಜಮಾನ’ ಕೃತಿ ಬಿಡುಗಡೆ ಮಾಡಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ೧೫ ಸಾವಿರ ನಗದು, ಫಲಕ ಹಾಗೂ ಸನ್ಮಾನವನ್ನು ಒಳಗೊಂಡಿರುತ್ತದೆ.
ಗಣೇಶ ನಾಡೋರ ಅವರು ಸುಮಾರು ಮೂವತ್ತು ವರ್ಷಗಳಿಂದ ನಿರಂತರವಾಗಿ ಮಕ್ಕಳಿಗಾಗಿ ಪ್ರೀತಿಯಿಂದ ಬರೆಯುತ್ತಿರುವ ಕ್ರಿಯಾಶೀಲ ಲೇಖಕರು.
‘ನೆಗೆತ’, ‘ಕರಿಮುಖ’, ‘ಪೂರ್ವಿ’, ‘ಸಾಯಿಲಕ್ಷಿö್ಮ ಮನೆಗೆ ಸಾಂತಕ್ಲಾಸ್ ಬಂದ’ ಮುಂತಾಗಿ ಇಲ್ಲಿಯವರೆಗೆ ಮಕ್ಕಳಿಗಾಗಿ ೧೮ ಕೃತಿಗಳನ್ನು ಪ್ರಕಟಿಸಿದ್ದಾರೆ.
ದಟ್ಟವಾದ ಸಮಕಾಲೀನ ಪ್ರಜ್ಞೆ, ಮಕ್ಕಳಿಗಾಗಿ ಗಂಭೀರ ಓದಿನ ಕೃತಿಗಳು ಇವರ ಗಮನಾರ್ಹ ವಿಶೇಷಗಳು. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಬಿ. ಎಂ. ಶ್ರೀ. ಪ್ರತಿಷ್ಠಾನ ಪ್ರಶಸ್ತಿ ಮುಂತಾಗಿ ಹಲವಾರು ಗೌರವಗಳು ಅವರಿಗೆ ಬಂದಿವೆ. ಸದ್ಯ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ ಸಂಸ್ಥೆಯ ಗ್ರಾö್ಯಂಟಿಯಾಗಿ ಯಲ್ಲಾಪುರ ತಾಲೂಕಿನ ಆನಗೋಡ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ‘ಹಕ್ಕಿಗಳು ಹಾರುತಿವೆ ನೋಡಿದಿರಾ?!’ ಪ್ರಾಜೆಕ್ಟ್ ನಡೆಸುತ್ತಿದ್ದಾರೆ.
