

ಸಿದ್ಧಾಪುರ ತಾಲೂಕಿನ ಪೂರ್ವಭಾಗದ ಕಾವಂಚೂರು ತಾ.ಪಂ. ಕ್ಷೇತ್ರದಲ್ಲಿ ಭತ್ತದ ಬೆಳೆಗಾರರು ಮಳೆಯಿಂದ ಕಂಗಾಲಾದ ಪರಿಸ್ಥಿತಿ ಎದುರಾಗಿದೆ.
ಕಾವಂಚೂರು ತಾ.ಪಂ. ಕ್ಷೇತ್ರವಾದ ಶಿರಳಗಿ,ಮನ್ಮನೆ,ಕಾವಂಚೂರು ಸೇರಿದ ಬಹುತೇಕ ಕಡೆ ಭತ್ತದ ಬೆಳೆ ಕಟಾವಿಗೆ ಬಂದಿದ್ದು ಭತ್ತ ಕೊಯ್ಯದವರು ಕೊಯ್ದರೆ ಮಳೆಯಿಂದ ರಕ್ಷಣೆ ಹೇಗೆ ಎಂದು ಚಿಂತಿತರಾದರೆ, ಈಗಾಗಲೇ ಭತ್ತ ಕಟಾವು ಮಾಡಿದವರು ನಿರಂತರ ಮಳೆಗೆ ಸಿಕ್ಕ ಭತ್ತ ಮೊಳಕೆ ಬರುವ ಹಾನಿ ಎದುರಿಸುವಂತಾಗಿದೆ.
ಮಂಗಳವಾರ ಈಭಾಗಕ್ಕೆ ಭೇಟಿ ನೀಡಿದ ಪತ್ರಕರ್ತರಿಗೆ ಮಾಹಿತಿ ನೀಡಿದ ತಾ.ಪಂ.ಸದಸ್ಯ ನಾಶಿರ್ ಖಾನ್ ವಲ್ಲೀಖಾನ್ ಈ ವರ್ಷದ ಪ್ರಾರಂಭದ ಮಳೆಯಿಂದ ಬಿತ್ತಿದ ಭತ್ತ ಸಂಪೂರ್ಣ ಹಾಳಾಗಿತ್ತು ನಂತರ ಒಂದೆರಡು ಬಾರಿ ನಾಟಿ ಮಾಡಿ ಭತ್ತ ಬೆಳೆದರೆ ಈಗ ಮಳೆಯಿಂದ ತೊಂದರೆ, ಹಾನಿ ಆಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಿ ಸರ್ಕಾರ ಭತ್ತದ ಬೆಳೆಗಾರರಿಗೆ ಪರಿಹಾರ ನೀಡದಿದ್ದರೆ ಬದುಕುವುದೇ ಕಷ್ಟ ಎಂದರು.
ಇದೇ ಸಮಯದಲ್ಲಿ ಸ್ಥಳದಲ್ಲಿದ್ದ ಅಯೂಬ್ ಖಾನ್, ರಮೇಶ್ ಗೊಂಡ ಐಗಳಕೊಪ್ಪ, ಕೆರಿಯಾ ಭೋವಿ, ಪರಶುರಾಮ ಬಡಗಿ ತಮ್ಮ ಭತ್ತದ ಬೆಳೆಯ ವ್ಯಥೆಯ ಕತೆ ಹೇಳಿದರು.
ಸಿದ್ದಾಪುರದ ಕಾವಂಚೂರು ಪಂಚಾಯತ್ ನ ನೆಜ್ಜೂರು ಬಯಲು ತಾಲೂಕಿನ ಭತ್ತ ಬೆಳೆಯುವ ದೊಡ್ಡ ಕ್ಷೇತ್ರ. ಈ ಭಾಗದಲ್ಲಿ ಮೂರು ಹಂತಗಳಲ್ಲಿ ಭತ್ತದ ಬೆಳೆ ಬಿತ್ತನೆ ಮತ್ತು ಕಟಾವು ಮಾಡಲಾಗುತ್ತದೆ.ಈ ವರ್ಷ ಮಳೆ ಈ ರೈತರ ಸಂಯಮ ಪರೀಕ್ಷಿಸುವಂತೆ ತೊಂದರೆ ನೀಡಿದೆ. ಹೀಗೇ ಆದರೆ ಭತ್ತ ಬೆಳೆಯುವುದನ್ನೇ ಬಿಡಬೇಕಾಗುತ್ತದೆ ಎಂದು ಈ ರೈತರು ಅಲವತ್ತುಕೊಂಡರೆ ಇವರಿಗೆ ಪರಿಹಾರ ಕೊಡಿಸುವ ವಿಚಾರದಲ್ಲಿ ತಾನೂ ಅಸಹಾಯಕ ಎನ್ನುತ್ತಾರೆ ನಾಶಿರ್‌ಖಾನ್.
ಭೆಳೆವಿಮೆ, ಸರ್ಕಾರದ ಸೌಲಭ್ಯ, ಪರಿಹಾರ ಇವೆಲ್ಲವೂ ಅಂಬಾರಿಯ ಆನೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಕೃಷಿ ಇಲಾಖೆ ಕೂಡಾ ಬೆಳೆವಿಮೆ ಮಾಡಿಸಿದವರನ್ನು ಬಿಟ್ಟು ಉಳಿದವರಿಗೆ ಯಾವ ಅನುಕೂಲವನ್ನೂ ಮಾಡುವ ಅವಕಾಶವಿಲ್ಲ ಎಂದಿದ್ದಾರೆ.
ನೆಜ್ಜೂರು ಭಾಗದಲ್ಲಿ ಭತ್ತದ ಬೆಳೆಗೆ ಮಳೆತೊಂದರೆ ವಿಷಯ ಗಮನಕ್ಕೆ ಬಂದಿದೆ. ನಮ್ಮ ಸಿಬ್ಬಂದಿಗಳು ಕ್ಷೇತ್ರಕ್ಕೆ ತೆರಳಿ ಮಾಹಿತಿ ಕಲೆಹಾಕುತಿದ್ದಾರೆ. ಬೆಳೆವಿಮೆ ಮಾಡಿಸಿದ ರೈತರಿಗೆ ಆ ಅನುಕೂಲ ಸಿಗಲಿದೆ. ಬೆಳೆವಿಮೆ ಪಡೆಯದವರಿಗೆ ಯಾವ ಅನುಕೂಲವೂ ದೊರೆಯುವುದಿಲ್ಲ. -ಪ್ರಶಾಂತ್ -ಕೃಷಿ ಅಧಿಕಾರಿ


