

ಬೇಸಿಗೆಯಲ್ಲಿ ಬಡವಾಗಲಿದೆ ಈ ಜಲಪಾತ
ಹುಸೂರು ಜಲಪಾತ ನೋಡುವವರು ಈ ತಿಂಗಳಲ್ಲೇ ಬರಬೇಕು
ಜಲಪಾತಗಳ ಜಿಲ್ಲೆಯ ಹೆಚ್ಚು ಜಲಪಾತಗಳ ತಾಲೂಕು ಸಿದ್ಧಾಪುರ. ಸಿದ್ದಾಪುರದಲ್ಲಿ ಪ್ರಸಿದ್ಧ ಉಂಚಳ್ಳಿ ಜಲಪಾತ,ಬುರುಡೆ ಅಥವಾ ಕೆಪ್ಪಜೋಗ,ಸೋಮನಕುಳಿ ಜಲಪಾತ, ಶೀರಲಗದ್ದೆ,ಶಿವರಾತ್ರಿ ಹೊಂಡ,ತುಂಬ್ರಗೋಡು ಜಲಪಾತ, ನಿಪ್ಲಿ ಹೊಳೆಯ ಹುಸೂರು ಜಲಪಾತ ಹೀಗೆ ಅನೇಕ ಜಲಪಾತಗಳಿವೆ.
ಮಳೆಕಡಿಮೆ ಇರುವ ವರ್ಷಗಳಲ್ಲಿ ಅಕ್ಟೋಬರ್ ನವೆಂಬರ್‍ಗಳಲ್ಲಿ ಜಲಪಾತ ವೀಕ್ಷಿಸುವುದು ಇಲ್ಲಿಯ ಸಾಮಾನ್ಯ ರೂಡಿ,ü ಯಾಕೆಂದರೆ ಇಲ್ಲಿಯ ಬಹುತೇಕ ಜಲಪಾತಗಳು ಡಿಸೆಂಬರ್ ನಂತರ ಸೊರಗುತ್ತವೆ. ಜೋಗಜಲಪಾತ,ಉಂಚಳ್ಳಿ ಜಲಪಾತ, ಬುರುಡೆ ಪಾಲ್ಸ್ ಬಿಟ್ಟು ಉಳಿದ ಜಲಪಾತಗಳು ಜನೇವರಿಯಿಂದ ಮೇ ತಿಂಗಳವರೆಗೆ ಬಡವಾಗುತ್ತವೆ.
ಇತ್ತೀಚಿನ ವರ್ಷಗಳಲ್ಲಿ ಪ್ರಖ್ಯಾತವಾದ ಹುಸೂರು ಜಲಾಗಾರದ ಹುಸೂರು ಜಲಪಾತ ಅಕ್ಟೋಬರ್, ನವೆಂಬರ್ ಅವಧಿಯಲ್ಲಿ ಆಕರ್ಷಕವಾಗಿ ಕಾಣುತ್ತದೆ. ಡಿಸೆಂಬರ್ ವರೆಗೆ ಹರಿವು ಇರುವ ಈ ಹುಸೂರು ಜಲಪಾತದ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.
ಈ ವರ್ಷ ಸಿದ್ಧಾಪುರ ತಾಲೂಕಿನಲ್ಲಿ ವಾಡಿಕೆಯ 3000 ಮಿ.ಮೀ ಮಳೆ ಬದಲು 5 ಸಾವಿರ ಮಿ.ಮೀ. ದಾಟಿದೆ. ಆದರೂ ಹುಸೂರು ಜಲಪಾತ ಡಿಸೆಂಬರ್ ನಂತರ ಸೊರಗುವ ಸಾಧ್ಯತೆ ನಿಚ್ಚಳವಾಗಿದೆ. ಜೋಗಕ್ಕೆ ಬರುವ ಬಹುತೇಕ ಪ್ರವಾಸಿಗಳು ಹುಸೂರು ಜಲಪಾತಕ್ಕೆ ಬರುವುದರಿಂದ ಈ ಜಲಪಾತ ನೋಡುವವರು ಡಿಸೆಂಬರ್ ಮೊದಲು ಆಗಮಿಸಿದರೆ ಜಲಪಾತದ ಸೊಬಗು ಸವಿಯಬಹುದು. ಡಿಸೆಂಬರ್ ನಂತರದ ಬೇಸಿಗೆ ಕಾಲದಲ್ಲಿ ಜಲಪಾತ ವೀಕ್ಷಣೆಗೆ ಬಂದರೆ ನಿರಾಸೆ ಕಟ್ಟಿಟ್ಟ ಬುತ್ತಿ.





