

ಸಿದ್ಧಾಪುರ ತಾಲೂಕಿನ ಮನೆಮನೆ ಗ್ರಾಮದ ವ್ಯಾಪ್ತಿಯಲ್ಲಿರುವ ಭೂತಪ್ಪನ ಕಟ್ಟೆ ವಿಚಾರದಲ್ಲಿ ಮನೆಮನೆ ಮತ್ತು ಸಾಗರದ ಗುಡ್ಡೆಮನೆ ಗ್ರಾಮಗಳ ನಡುವೆ ಸಂಘರ್ಷ ಉಂಟಾಗಿದ್ದು ಈ ವಿವಾದವನ್ನು ಬಗೆಹರಿಸುವುದು ಸೇರಿದಂತೆ ತಾಳಗುಪ್ಪಾ,ಸಾಗರಗಳ ಜೊತೆ ಒಡನಾಟ ಹೊಂದಿರುವ ಮನೆಮನೆಗ್ರಾಮಸ್ಥರ ರಕ್ಷಣೆ,ಭದ್ರತೆಗೆ ವ್ಯವಸ್ಥೆ ಮಾಡುವಂತೆ ಮನೆಮನೆ ಗ್ರಾಮಸ್ಥರು ಇಂದು ಇಲ್ಲಿಯ ತಹಸಿಲ್ಧಾರರಿಗೆ ಮನವಿ ನೀಡಿದರು.
ಮನೆಮನೆ,ಗುಡ್ಡೆಮನೆ ಗಡಿಯ ಸಿದ್ಧಾಪುರ ತಾಲೂಕಾ ವ್ಯಾಪ್ತಿಯಲ್ಲಿ ಈ ಭೂತನ ಕಟ್ಟೆ ಇದೆ. ಇಲ್ಲಿಯ ಪೂಜೆ,ಕಾರ್ಯಕ್ರಮಗಳ ವಿಚಾರದಲ್ಲಿ ಎರಡೂ ತಾಲೂಕಿನ ಜನರು ಈವರೆಗೆ ಹೊಂದಾಣಿಕೆಯಿಂದ ನಡೆದುಕೊಳ್ಳುತಿದ್ದರು.ಇತ್ತೀಚೆಗೆ ಕಾಣಿಕೆ ಡಬ್ಬಿ ಒಡೆದು ಹಣ ಹೊತ್ತೊಯ್ದ ಬಗ್ಗೆ ವಿವಾದ ಉಂಟಾಗಿ ತಹಸಿಲ್ಧಾರರ ಸಮ್ಮುಖದಲ್ಲಿ ಸಭೆ ನಡೆದಿದೆ. ಆದರೆ ಸ್ಫಸ್ಟ ತೀರ್ಮಾನ,ನಿರ್ಧಾರ ಆಗದ ಹಿನ್ನೆಲೆಯಲ್ಲಿ ತಹಸಿಲ್ದಾರರಿಗೆ ಮನವಿ ನೀಡಿರುವ ಮನೆಮನೆ ಗ್ರಾಮಸ್ಥರು ಈ ವಿವಾದವನ್ನು ಶೀಘ್ರ ಬಗೆಹರಿಸದಿದ್ದರೆ ಸ್ಥಳದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಿದ್ದಾಪುರ ವ್ಯಾಪ್ತಿಯ ಈ ಭೂತನ ಕಟ್ಟೆ ವಿವಾದ ಉತ್ತರಕನ್ನಡ ಜಿಲ್ಲೆಯ ಕಂದಾಯ ಮತ್ತು ಪೊಲೀಸ್ ವ್ಯಾಪ್ತಿಯಲ್ಲಿದೆ.ಆದರೆ ನೆರೆಯ ತಾಲೂಕಿನ ಗುಡ್ಡೆಮನೆಯ ಜನ ಹಿಂದೆ ಕೂಡಾ ಜಮೀನಿನ ವಿಚಾರದ ವಿವಾದದಲ್ಲಿ ಮನೆಮನೆಯ ಜನರಿಗೆ ತೊಂದರೆ ನೀಡಿರುವುದರಿಂದ ಈಗಲೂ ಜಿಲ್ಲಾಡಳಿತ ಈ ವಿವಾದ ಬಗೆಹರಿಸಿ ಮುಂದಿನ ತೊಂದರೆ ತಪ್ಪಿಸುವಂತೆ ಮನವಿ ಮೂಲಕ ಆಗ್ರಹಿಸಿದ್ದಾರೆ.

