

ರಕ್ತದಾನದಿಂದ ಗಮನ ಸೆಳೆಯುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಶಿರಸಿಯಲ್ಲಿ ಉತ್ತಮ ಕೆಲಸಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಶಿರಸಿಯಲ್ಲಿ ಕರವೇ ಗಜಸೇನೆ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಶಿರಸಿ ಮಾರಿಕಾಂಬಾ ದೇವಾಲಯದ ಉಪಾಧ್ಯಕ್ಷ ಮನೋಹರ್ ಮಲ್ಮನೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕರವೇ ಗಜಸೇನೆ ತನ್ನ ಸಾಂಪ್ರದಾಯಿಕ ಕೆಲಸಗಳ ಜೊತೆಗೆ ರಕ್ತದಾನ ಮಾಡುವ ಮೂಲಕ ತನ್ನ ಸಾಮಾಜಿಕ ಜವಾಬ್ಧಾರಿ ನಿರ್ವಹಿಸಿದೆ ಎಂದರು.
ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಕರವೇ ಗಜಸೇನೆ ರಾಜ್ಯಾಧ್ಯಕ್ಷ ರಾಘವೇಂದ್ರ ಮಾತನಾಡಿ ಗಜಸೇನೆ ಕನ್ನಡದ ಕೆಲಸದ ಜೊತೆಗೆ ಸಾಮಾಜಿಕ,ವೈಯಕ್ತಿಕ ಆರೋಗ್ಯದ ಬಗ್ಗೆ ಕೂಡಾ ಗಮನ ಹರಿಸುತ್ತಿದೆ. ಪಕ್ಷಾತೀತ, ಜಾತ್ಯಾತೀತವಾಗಿ ಕೆಲಸಮಾಡುತ್ತಿರುವ ಗಜಸೇನೆ ರಾಜ್ಯದಲ್ಲಿ ಕನ್ನಡಿಗರ ಹಿತಾಸಕ್ತಿಯ ಕೆಲಸದ ಮೂಲಕ ವಿಸ್ತರಿಸುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ಮಾತನಾಡಿ ಕರವೇ ಗಜಸೇನೆಯ ಯುವಶಕ್ತಿ ಸಮಾಜಮುಖಿ ಕೆಲಸದ ಮೂಲಕ ಹೆಸರುಮಾಡುತ್ತಿದೆ. ಪ್ರತಿಭಟನೆ,ಸಂಘರ್ಷ, ಹೋರಾಟದ ಜೊತೆಗೆ ರಕ್ತದಾನದಂಥ ಶಿಬಿರಗಳು ಗಜಸೇನೆಯ ಆದ್ಯತೆಗೆ ಸಾಕ್ಷಿ ಎಂದರು.
ಡಾ ಸುಮನಾ ಹೆಗಡೆ ಕನ್ನಡದ ಕೆಲಸವೆಂದರೆ ಕನ್ನಡಿಗರ ಆರೋಗ್ಯ ರಕ್ಷಣೆ ಕೂಡಾ ಎಂದು ಮಾರ್ಮಿಕವಾಗಿ ನುಡಿದರು. ಕರವೇ ಗಜಸೇನೆಯ ಜಿಲ್ಲಾಧ್ಯಕ್ಷ ಉಮೇಶ್ ಹರಿಕಂತ್ರ, ಕಾನೂನು ವಿಭಾಗ ಪ್ರಮುಖ ದಿವಾಕರ ನಾಯ್ಕ, ಸ.ಕಾರ್ಯದರ್ಶಿ ಕೃಷ್ಣಮೂರ್ತಿ ಸೇರಿದಂತೆ ಜಿಲ್ಲೆ, ರಾಜ್ಯದ ಅನೇಕ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಶಿರಸಿ ಪಂಡಿತ ಸಾರ್ವಜನಿಕ ಆಸ್ಫತ್ರೆ ಮತ್ತು ಕರವೇ ಗಜಸೇನೆ ಜಂಟಿಯಾಗಿ ಸಂಘಟಿಸಿದ್ದ ಈ ಕಾರ್ಯಕ್ರಮದಲ್ಲಿ ಕರವೇ ಗಜಸೇನೆಯ ನೂರಾರು ಕಾರ್ಯಕರ್ತರು ರಕ್ತದಾನ ಮಾಡಿದರು.
ಸಾರ್ವಜನಿಕರ ತುರ್ತು ಅವಶ್ಯಕತೆಯಾದ ರಕ್ತದಾನದ ಮೂಲಕ ಗಜಸೇನೆ ಉತ್ತಮ ಕೆಲಸ ಮಾಡಿದ ಪ್ರಶಂಸೆಗೆ ಪಾತ್ರವಾಯಿತು. ಸಂಘಟನೆಯ ಧಾರ್ಮಿಕ ಮುಖಂಡ ರಂಗನಾಥ್ ಶರ್ಮಾ ಮತ್ತು ರಸ್ತೆ ದುರಸ್ಥಿಮಾಡಿ ಹೆಸರು ಮಾಡಿದ ಕುಮಟಾ ಕರವೇ ಗಜಸೇನೆಯ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಳಪೆ ಕಾಮಗಾರಿ ಪ್ರಕರಣ
ರಸ್ತೆ ಕಾಮಗಾರಿ ನಿಲ್ಲಿಸಲು ಕೋರಿದ ಇಲಿಯಾಸ್‍ರಿಗೆ ಅಧಿಕಾರಿಗಳ ದೀಡ್ ಸಲಾಂ
ಶಿರಸಿ ಉಪವಿಭಾಗದ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿರುವ ಹೊಂಡ ತುಂಬುವ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಲೋಕಾಯುಕ್ತರಿಗೆ ದೂರಿರುವ ಇಲಿಯಾಸ ಶೇಖ್ ಪ್ರಯತ್ನದ ಬಗ್ಗೆ ಸಾರ್ವಜನಿಕ ಪ್ರಶಂಸೆ ವ್ಯಕ್ತವಾಗಿದೆ.
ಶಿರಸಿ ವಿಭಾಗದ ಲೋಕೋಪಯೋಗಿ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿರುವ ಬಗ್ಗೆ ಅನೇಕ ತಕರಾರುಗಳಿದ್ದರೂ ಇಲಾಖೆ ಕಳೆದ ಒಂದು ವರ್ಷದಿಂದ ದುರಸ್ಥಿ ಮಾಡಿರಲಿಲ್ಲ. ಇತ್ತೀಚೆಗೆ ದುರಸ್ಥಿ ಕಾರ್ಯ ಕೈಗೊಂಡಿರುವ ಇಲಾಖೆ ನಾಮಕಾವಸ್ಥೆ ಹೊಂಡ ತುಂಬುತ್ತಾ ಕಳಪೆ ಕಾಮಗಾರಿ ಮಾಡುತ್ತಿದೆ ಎಂದು ಜೆ.ಡಿ.ಎಸ್. ಅಲ್ಫಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ಇಲಿಯಾಸ್ ಶೇಖ್ ದೂರಿದ್ದರು.
ಈ ಕಳಪೆ ಕಾಮಗಾರಿ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿರುವ ಇಲಿಯಾಸ್ ಶೇಖ್ ವಿರೋಧದ ಬಗ್ಗೆ ಸಾರ್ವಜನಿಕರ ಪ್ರಶಂಸೆ ವ್ಯಕ್ತವಾದರೆ, ಜನರಿಗೆ ಸ್ಫಂದಿಸದ ಲೋಕೋಪಯೋಗಿ ಇಲಾಖೆ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡುವ ಬದಲು ನಮಗೆ ತಿಳಿಸಿದ್ದರೆ ನಾವು ಸರಿಮಾಡುತಿದ್ದೆವು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅಲವತ್ತುಕೊಂಡಿದ್ದಾರಂತೆ.
ಹೀಗೆ ಲೋಕೋಪಯೋಗಿ ಇಲಾಖೆಯ ಕೆಲಸದ ಬಗ್ಗೆ ಲೋಕಾಯುಕ್ತಕ್ಕೆ ದೂರಿದ ಮೇಲೆ ನಮಗೆ ಹೇಳಿದ್ದರೆ ನಾವು ಸರಿಮಾಡುತಿದ್ದೆವು ಎಂದು ಹೇಳುವ ಅಧಿಕಾರಿಗಳು ತಮ್ಮ ಕಳಪೆ ಕೆಲಸವನ್ನು ಮೇಲ್ನೊಟಕ್ಕೆ ಒಪ್ಪಿಕೊಂಡಂತಾಗಿದೆ.
ಹೀಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾನಾ ಇಲಾಖೆಗಳು ನಾಮಕಾವಸ್ಥೆ ಕೆಲಸಮಾಡುವುದು, ಕಳಪೆ ಕಾಮಗಾರಿ ಮಾಡುವ ಹಿಂದೆ ಇಲ್ಲಿಯ ಸಂಸದರು, ಶಾಸಕರ ವ್ಯವಹಾರ ಕಾರಣ ಎನ್ನಲಾಗಿದೆ.
ಈಗ ಹೊಸ ಸರ್ಕಾರದ ಅವಧಿಯಲ್ಲಿ ಕಳಪೆ ಕಾಮಗಾರಿ ಮಿತಿಮೀರಲು ಹೊಸ ಸರ್ಕಾರದ ಮುಖ್ಯಸ್ಥರ ಆಪರೇಶನ್ ಕಮಲ, ಬೃಹತ್ ಬಂಡವಾಳ ಹೂಡಿಕೆ ಕಾರಣ ಎನ್ನಲಾಗುತ್ತಿದೆ. ಸರ್ಕಾರ, ಸಂಸದರ, ಶಾಸಕರ ನಿರ್ಧೇಶನದಂತೇ ಕಳಪೆ ಕಾಮಗಾರಿಗಳು ನಡೆಯುತ್ತಿರುವುದರಿಂದ ಅಧಿಕಾರಿಗಳು, ಇಂಜಿನಿಯರ್ ಗಳು ತಲೆಮರೆಸಿಕೊಂಡು ಸುತ್ತಾಡುವ ಸ್ಥಿತಿ ಇರುವ ಬಗ್ಗೆ ಸಾರ್ವಜನಿಕ ವಲಯದಲ್ಲೂ ಚರ್ಚೆಗಳಾಗುತ್ತಿವೆ.



