

ಸಿದ್ಧಾಪುರ ಸೇರಿದಂತೆ ಕಳೆದ ತಿಂಗಳು ರಾಜ್ಯದಲ್ಲಿ ಅನೇಕ ಸರ್ಕಾರಿ ನೌಕರರುನಿವೃತ್ತರಾಗಿದ್ದಾರೆ.
ಅವರಲ್ಲಿ ಹಣಜಿಬೈಲ್ ಪ್ರಾಥಮಿಕ ಶಾಲೆಯ ಆರ್.ಎನ್. ಹಳಕಾರ ಮತ್ತು ತಮ್ಮಣ್ಣ ಬೀಗಾರ್ ಸೇರಿದ್ದಾರೆ.
ಹಣಜಿಬೈಲ್ ಪ್ರಾಥಮಿಕ ಶಾಲಾ ಶಿಕ್ಷಕ ಆರ್.ಎನ್. ಹಳಕಾರ ಮೂಲತ: ಕುಮಟಾದವರು. ಸಿದ್ಧಾಪುರದಲ್ಲಿ ಸೇವೆ ಸಲ್ಲಿಸಿ, ಉತ್ತಮ ಶಿಕ್ಷಕ ಎಂಬ ಹೆಸರು,ಪ್ರಶಸ್ತಿ ಪಡೆದಿರುವ ಅವರು ಸಿದ್ದಾಪುರದಲ್ಲೇ ನೆಲೆಸಿ ಸಿದ್ದಾಪುರದವರೇ ಆಗಿದ್ದಾರೆ.
ತಮಣ್ಣ ಬೀಗಾರ್ ಉತ್ತಮ ಶಿಕ್ಷಕ,ಸಾಹಿತಿ, ಮಕ್ಕಳ ಸಾಹಿತಿಯಾಗಿ ಹೆಸರು ಮಾಡಿದವರು. ಯಲ್ಲಾಪುರ ಮೂಲದ ತಮ್ಮಣ್ಣ ಕಾರವಾರದ ಕೈಗಾ ಹರಟುಗಾದಿಂದ ತಮ್ಮ ಸೇವೆ ಪ್ರಾರಂಭಿಸಿ,ಯಲ್ಲಾಪುರ ಬಾಗಿನಕಟ್ಟಾ, ಸಿದ್ದಾಪುರದ ಕ್ಯಾದಗಿ, ಹಲಗೇರಿ, ಮೆಣಸಿ, ಬಿದ್ರಕಾನಗಳಲ್ಲಿ ಕೆಲಸಮಾಡಿದ್ದಾರೆ.
ಉತ್ತಮ ಶಿಕ್ಷಕ ರಾಷ್ಟ್ರಪ್ರಶಸ್ತಿ ಪುರಸ್ಕøತರಾದ ತಮ್ಮಣ್ಣ ಮಕ್ಕಳ ಸಾಹಿತಿಯಾಗಿ ಹೆಸರುಮಾಡಿದ್ದಾರೆ. ಸಿದ್ಧಾಪುರದ ಹೊಸೂರಿನಲ್ಲಿ ಮನೆ ಮಾಡಿ ನೆಲೆಸಿರುವ ತಮ್ಮಣ್ಣ ಬೀಗಾರ್ ಸಿದ್ದಾಪುರ ಮೂಲದವರೇ ಎನ್ನುವಷ್ಟು ಇಲ್ಲಿಯವರಾಗಿದ್ದಾರೆ.
ಹಿಂದಿನ ತಿಂಗಳು ನಿವೃತ್ತರಾದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿ ಕರಿಕಟ್ಟಿ ಮೂಲತ: ಧಾರವಾಡದವರಾಗಿದ್ದು ಬಳ್ಳಾರಿಯಿಂದ ತಮ್ಮ ಸೇವೆ ಪ್ರಾರಂಭಿಸಿ, ಮಾವನಮನೆ ಸಿದ್ದಾಪುರಕ್ಕೆ ನಿವೃತ್ತಿಯ ಅಂಚಿನಲ್ಲಿ ಬಂದಿದ್ದರು. ಸೇವೆ,ನಡವಳಿಕೆಗಳಿಂದ ಹೆಸರು ಮಾಡಿರುವ ಕರಿಕಟ್ಟಿ ಸಿದ್ದಾಪುರದಲ್ಲೇ ಮನೆಮಾಡಿ ಇಲ್ಲಿಯವರೇ ಆಗಿದ್ದಾರೆ. ತಾಲೂಕು ಪಂಚಾಯತ್ ಡಿ ದರ್ಜೆ ನೌಕರರಾಗಿದ್ದ ಭವಾನಮ್ಮ ಕೂಡಾ ಕಳೆದ ತಿಂಗಳು ನಿವೃತ್ತರಾಗಿದ್ದಾರೆ.
ಈ ನಿವೃತ್ತರಿಗೆ ಬಿ.ಇ.ಓ. ಜಿ.ಆಯ್. ನಾಯ್ಕ, ಶಿಕ್ಷಕರ ಸಂಘದ ಎಂ.ಕೆ.ನಾಯ್ಕ. ಸಾ.ಪ. ನಿಕಟಪೂರ್ವ ತಾಲೂಕಾಧ್ಯಕ್ಷ ಕನ್ನೇಶ್ ಕೋಲಶಿರ್ಸಿ ಸೇರಿದಂತೆ ಅನೇಕರು ಶುಭಕೋರಿದ್ದಾರೆ.
ಉಪಚುನಾವಣೆ 15 ಕ್ಷೇತ್ರಗಳಲ್ಲಿ ಕಾಂ.14,ಬಿ.ಜೆ.ಪಿ. 8, ಜೆ.ಡಿ.ಎಸ್. 03!
ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲಿ ಯಾರು ಎಷ್ಟು ಸ್ಥಾನಗಳನ್ನು ಗೆಲ್ಲುತ್ತಾರೆ ಎನ್ನುವ ಸಂವಾದ, ಜಿದ್ಞಾಸೆ ಪ್ರಾರಂಭವಾಗಿದೆ. ರಾಜ್ಯ ಗುಪ್ತಚರ ಇಲಾಖೆ ವರದಿ ನಂಬುವುದಾದರೆ ಅವರು ಆಡಳತಾರೂಢ ಬಿ.ಜೆ.ಪಿ.ಯ 8 ಅನರ್ಹರು ಗೆಲ್ಲುವ ಮೂಲಕ ಬಿ.ಜೆ.ಪಿ. ಸರ್ಕಾರ ಅಪಾಯದಿಂದ ಪಾರಾಗುವ ಮುನ್ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ 15 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳನ್ನು ಗೆಲ್ಲುವುದಾಗಿ ಹೇಳಿಕೊಂಡರೂ ಭವಿಷ್ಯಕ್ಕೆ ಪ್ರಖ್ಯಾತರಾಗಿರುವ ಕೋಡಿಮಠದ ಸ್ವಾಮಿಗಳು ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ ಹೇಳಿ ಆಶ್ಚರ್ಯ ಮೂಡಿಸಿದ್ದಾರೆ ಎನ್ನಲಾಗಿದೆ.
ಹೀಗೆ 15 ರಲ್ಲಿ ಕಾಂಗ್ರೆಸ್ 14 ಕ್ಷೇತ್ರ ಗೆದ್ದರೆ ಬಿ.ಜೆ.ಪಿ,ಜೆ.ಡಿ.ಎಸ್. ಗಳು ಒಂದು ಕ್ಷೇತ್ರಕ್ಕಾಗಿ ಹೋರಾಟ ಮಾಡಬೇಕು. ಗುಪ್ತಚರ ಇಲಾಖೆಯ ವರದಿ ನಂಬುವುದಾದರೆ ಬಿ.ಜೆ.ಪಿ. 8 ಕ್ಷೇತ್ರಗಳಲ್ಲಿ ಜಯ ಗಳಿಸಿದರೆ ಕಾಂಗ್ರೆಸ್, ಮತ್ತು ಜಾ. ದಳಗಳು 7 ಕ್ಷೇತ್ರಗಳಲ್ಲಿ ಸ್ಫರ್ಧೆ ನಡೆಸಬೇಕು. ಜನಸಾಮಾನ್ಯರ ಅಭಿಪ್ರಾಯ, ಜೆ.ಡಿ.ಎಸ್. ಆತ್ಮವಿಶ್ವಾಸದ ಪ್ರಕಾರ ಜಾ.ದಳ ಕನಿಷ್ಟ 3 ಕ್ಷೇತ್ರಗಳನ್ನು ಗೆಲ್ಲಲಿದೆ.
ಹೀಗೆ ನಾನಾ ಲೆಕ್ಕಾಚಾರಗಳ ಪ್ರಕಾರ 14+8+3=25 ಆದರೆ ಇರುವ ಕ್ಷೇತ್ರಗಳೇ 15. ರಾಜಕೀಯದಲ್ಲಿ 15, 25 ಆಗಬಹುದೆ?
ಒಟ್ಟಾರೆ ಈ ಚುನಾವಣೆಯ ನಂತರ ರಾಜಕೀಯ ವ್ಯವಸ್ಥೆ ಬದಲಾಗಲಿದೆ ಎನ್ನುವ ಕೋಡಿಮಠದ ಭವಿಷ್ಯವಂತೂ ಸತ್ಯವಾಗಬಹುದು.

