

ರಾಜ್ಯದ ಉಪಚುನಾವಣೆಗಳಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಏನಕೇನ ಪ್ರಕಾರೇಣ ಗೆಲ್ಲುವುದು, ಅಧಿಕಾರ ಗೃಹಣ ಏಕೈಕ ಗುರಿ ಎಂದುಕೊಂಡಿರುವ ಬಿ.ಜೆ.ಪಿ. ತನ್ನೆಲ್ಲಾ ಕಸರತ್ತುಗಳನ್ನು ಮಾಡುತ್ತಿದೆ.
ಕಾಂಗ್ರೆಸ್ ಕೂಡಾ ಈ ಚುನಾವಣೆಯನ್ನು ಪ್ರತಿಷ್ಠೆಯ ಕಣವನ್ನಾಗಿಸಿಕೊಂಡಿದೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಬಿ.ಜೆ.ಪಿ.ನಾಯಕರು ಹೆಬ್ಬಾರ್ ಗೆಲುವಿಗೆ ಟೊಂಕಕಟ್ಟಿದ್ದರೆ,ಕಾಂಗ್ರೆಸ್ ಗೆಲುವಿಗಾಗಿ ಕಾಂಗ್ರೆಸ್ ನಾಯಕರು ದುಡಿಯುತಿದ್ದಾರೆ.
ಹೆಬ್ಬಾರ್ ಅಕ್ರಮ ಆಸ್ತಿ, ವ್ಯವಹಾರ, ಪಲ್ಲಂಗಪುರಾಣ ಕಾಂಗ್ರೆಸ್ ಬತ್ತಳಿಕೆಯ ಅಸ್ತ್ರಗಳಾದರೆ,ಬಿ.ಜೆ.ಪಿ. ಹಿಂದುತ್ವ, ಅಭಿವೃದ್ಧಿ ಎನ್ನುತ್ತಿದೆ. ಯಲ್ಲಾಪುರ ಕ್ಷೇತ್ರದಲ್ಲಿ ಬಹುಸಂಖ್ಯಾತರು ಅಹಿಂದ್ ವರ್ಗವಾದರೆ, ಬ್ರಾಹ್ಮಣರು ಕ್ಷೇತ್ರದ ಮೊದಲ ಬಹುಸಂಖ್ಯಾತರು.
ಮೇಲ್ನೋಟಕ್ಕೆ ಬ್ರಾಹ್ಮಣರು,ಲಿಂಗಾಯತರು ಬಿ.ಜೆ.ಪಿ. ಪರವಾಗಿದ್ದಾರೆ ಎನಿಸಿದರೂ ದೇಶಪಾಂಡೆ ಬ್ರಾಹ್ಮಣರ ಮತಗಳನ್ನು ಕಾಂಗ್ರೆಸ್ ಗೆ ಸೆಳೆಯುವ ಜೊತೆಗೆ ಲಿಂಗಾಯತರು, ಮರಾಠರ ಮತಗಳನ್ನು ಕೇಂದ್ರೀಕರಿಸಿ ಕೆಲಸಮಾಡುತಿದ್ದಾರೆ.
ಹೆಬ್ಬಾರ್ ಅನರ್ಹ ಎನಿಸಿಕೊಂಡರೂ ಮತಬಾಚುವ ಸಕಲ ತಂತ್ರಗಳನ್ನು ಅರಿತಿರುವ ಅವರಿಗೆ ಮತದಾರರ ನಾಡಿಮಿಡಿತ ತಿಳಿದಿದೆ. ಭೀಮಣ್ಣ ವ್ಯಕ್ತಿಗತ ಶಾಂತ ಸ್ವಾಭಾವದ ಸಜ್ಜನ. ದೇಶಪಾಂಡೆ ಜೊತೆಗಿಲ್ಲದಿದ್ದರೆ ಚುನಾವಣೆಗೆ ಸ್ಫರ್ಧಿಸುವ ಯೋಚನೆಯನ್ನೂ ಮಾಡದ ಭೀಮಣ್ಣ ದೇಶಪಾಂಡೆ ಮಾರ್ಗದರ್ಶನದಲ್ಲಿ ಸಕಲ ತಂತ್ರ-ಮಂತ್ರಗಳನ್ನು ಪ್ರಯೋಗಿಸಿದ್ದಾರೆ.
ಭೀಮಣ್ಣ ನಾಯ್ಕರಿಗೆ ಕಾಂಗ್ರೆಸ್ ಬಣಗಳ ಒಳಹೊಡೆತ ಕಷ್ಟಕರವಾದರೂ ದೇಶಪಾಂಡೆಯವರ ಎದುರು ಈ ಬಣಗಳ ಆಟ ನಡೆಯಲಿಲ್ಲ ಎನ್ನುವುದೇ ವಿಶ್ವಾಸದ ಹಿಂದಿನ ಗುಟ್ಟು.
ಆದರೆ ಹೆಬ್ಬಾರ್ ರಿಗೆ ಬಿ.ಜೆ.ಪಿ.ಯ ಒಳ ಹೊಡೆತಗಳು ಸರಿಯಾಗಿಯೇ ಬಿದ್ದಿವೆ ಎನ್ನುವ ಲೆಕ್ಕಾಚಾರವಿದೆ. ಬಿ.ಜೆ.ಪಿ. ಕಾಗೇರಿ, ವಿ.ಎಸ್. ಪಾಟೀಲ್ ಬಣ ಕಾಂಗ್ರೆಸ್ ಪರವಾಗಿ ಕೆಲಸಮಾಡಿರುವುದರಿಂದ ಭೀಮಣ್ಣನವರಿಗೆ ಇದರ ಅನುಕೂಲ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೆಬ್ಬಾರ್ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರಾದರೂ ಮರಾಠರು,ಅಲ್ಫಸಂಖ್ಯಾತರು, ಲಿಂಗಾಯತರು, ಜೊತೆಜೊತೆಗೆ ಹವ್ಯಕರೂ ಹೆಬ್ಬಾರ್ ರಿಗೆ ಕೈ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಹೆಬ್ಬಾರ್ ರಿಗೆ ಕೈಕೊಟ್ಟವರ ಪಟ್ಟಿ ಮುಂದೆ ಭೀಮಣ್ಣನವರಿಗೆ ಕೈ ಹಿಡಿದವರ ಪಟ್ಟಿ ವಿಸ್ತರಿಸಿದರೆ ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ ವಿಧಾನಸೌಧ ಪ್ರವೇಶಿಸುತ್ತಾರೆ. ಆದರೆ ಹೆಬ್ಬಾರ್ ಅಷ್ಟು ಸುಲಭದ ಆಸಾಮಿಯಲ್ಲ ಬಿ.ಜೆ.ಪಿ. ಹೆಸರಲ್ಲಿ ಮೇಲ್ವರ್ಗ, ಅವರ ಮಂತ್ರ-ತಂತ್ರಗಳಿಂದ ಇತರರ ಮತ ಬಾಚುವ ಶಕ್ತಿ ಅವರಿಗಿರುವುದರಿಂದ ಹೆಬ್ಬಾರ್ ಕೂಡಾ ಹೋರಾಟದಲ್ಲಿ ಹಿಂದೆ ಬಿದ್ದಿಲ್ಲ. ಕಾಂಗ್ರೆಸ್,ಬಿ.ಜೆ.ಪಿ. ಸೆಣಸಿನ ಮಧ್ಯೆ ಜೆ.ಡಿ.ಎಸ್. ಪಡೆಯುವ ಮತಗಳಷ್ಟು ಅಂತರದಿಂದ ಭೀಮಣ್ಣ ಅಥವಾ ಹೆಬ್ಬಾರ್ ಆಯ್ಕೆಯಾಗುತ್ತಾರೆ ಎನ್ನಲಾಗುತ್ತಿದೆ.
ಹೆಬ್ಬಾರ್ ಗೆದ್ದರೆ ಮಂತ್ರಿಯಾಗುವ ಸಾಧ್ಯತೆ ಹೆಚ್ಚು. ಆದರೆ ದೇಶಪಾಂಡೆ ತಾವೇ ಮಂತ್ರಿ-ಮುಖ್ಯಮಂತ್ರಿಯಾಗುವ ಕನಸಿನೊಂದಿಗೆ ಅಂತಿಮ ಹೋರಾಟಕ್ಕಿಳಿದಿದ್ದಾರೆ ಎನ್ನಲಾಗುತ್ತಿದೆ.
ಅನಂತಕುಮಾರ ಹೆಗಡೆ ಹೇಳಿಕೆ,ವರ್ತನೆಗೆ ಛೀಮಾರಿ
40 ಸಾವಿರ ಕೋಟಿ ರೂಪಾಯಿ ರಕ್ಷಣೆಗಾಗಿ ಮಹಾರಾಷ್ಟ್ರದಲ್ಲಿ ಫಡ್ನವೀಸ್ ಒಂದು ದಿವಸ ಮುಖ್ಯಮಂತ್ರಿಯಾಗಿದ್ದರು ಎಂದು ಯಲ್ಲಾಪುರ ಕ್ಷೇತ್ರದಲ್ಲಿ ಹೇಳಿದ್ದ ಮಾಜಿ ಸಚಿವ ಅನಂತಕುಮಾರ ಹೆಗಡೆಯವರ ಹೇಳಿಕೆ ಮತ್ತು ನಡವಳಿಕೆಗೆ ತೀವೃ ವಿರೋಧ ವ್ಯಕ್ತವಾಗಿದೆ.
ಕಳೆದ ವಾರದ ಕೊನೆಗೆ ಮಾಜಿ ಸಚಿವ, ಸಂಸದ ಅನಂತಕುಮಾರ ಹೆಗಡೆ ಕೇಂದ್ರದ 40 ಸಾವಿರ ಕೋಟಿ ರೂಪಾಯಿ ರಕ್ಷಿಸಲು ಫಡ್ನವೀಸ್ ಏಕ್ ದಿನ್ ಕಾ ಮುಖ್ಯಮಂತ್ರಿ ಆಗಿದ್ದರು ಎಂದು ಅನಂತಕುಮಾರ ಹೆಗಡೆ ಯಲ್ಲಾಪುರ ಚುನಾವಣಾ ಭಾಷಣದಲ್ಲಿ ಹೇಳಿದ್ದರು.
ಈ ಹೇಳಿಕೆ ಸುಳ್ಳು ಹಾಗೇನೂ ಇಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಫಡ್ನವೀಸ್ ಪ್ರತಿಕ್ರೀಯಿಸಿದ್ದರು.
ಈ ಬೆಳವಣಿಗೆಗಳ ನಂತರ ಟ್ವೀಟರ್, ಫೇಸ್‍ಬುಕ್ ಸೇರಿದ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ಮತ್ತು ವರ್ತನೆಗಳ ಬಗ್ಗೆ ತೀವೃ ತರಾಟೆ ಎತ್ತಿದ್ದಾರೆ.
ಅನಂತಕುಮಾರ ಹೆಗಡೆ ಸುಳ್ಳು-ಮೋಸ,ದ್ರೋಹದ ಮೂಲಕವೇ ಮುಗ್ಧರ ದಿಕ್ಕು ತಪ್ಪಿಸುತ್ತಾರೆ. ಮತಾಂಧತೆಯ ಮತ್ತು ರಾಜಕೀಯ ಲಾಭದ ಕಾರಣಕ್ಕೆ ಅನಂತಕುಮಾರ ಹೆಗಡೆ ಸುಳ್ಳು ಹೇಳುತಿದ್ದು ಸಾರ್ವಜನಿಕ ಶಿಸ್ತು, ನಡವಳಿಕೆ ಉಲ್ಲಂಘಿಸುವ ಮೂಲಕ ಅನಂತಕುಮಾರ ತನ್ನ ಮೂರನೇ ದರ್ಜೆಯ ನಡತೆ ಪ್ರದರ್ಶಿಸುತ್ತಾರೆ. ಅನಂತಕುಮಾರ ಹೆಗಡೆ ಮತ್ತವರ ಪಕ್ಷ ಹಾಗೂ ಸಂಘ ಎಲ್ಲರನ್ನೂ ಎಲ್ಲಾ ಕಾಲದಲ್ಲೂ ವಂಚಿಸಲು ಸಾಧ್ಯವಿಲ್ಲ ಎಂದು ಅನೇಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿ.ಜೆ.ಪಿ.ಯ ಬಿ.ಟೀಮ್ ಯಡಿಯೂರಪ್ಪನವರನ್ನು ಬಲಿ ಹಾಕಲು ನಡೆಸಿರುವ ಶಡ್ಯಂತ್ರದ ಭಾಗವಾಗಿ ಈ ಕೀಳು ವರ್ತನೆ, ನಡತೆಗಳು ನಡೆಯುತ್ತಿವೆ. ಈ ಸುಳ್ಳು ಹೇಳುವ ನಾಟಕಕಾರರನ್ನು ಮನೆಗೆ ಕಳುಹಿಸುವ ಮೂಲಕ ಜನತೆ ಪ್ರಬುದ್ಧತೆ ಮೆರೆಯಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಗೆ ಕರೆ ನೀಡಲಾಗಿದೆ. ಈ ಬಗ್ಗೆ ಬಿ.ಜೆ.ಪಿ. ಮುಖಂಡರು ಕೂಡಾ ಅನಂತ ಹೆಗಡೆಯನ್ನು ತೀವೃ ವಿರೋಧಿಸಿದ್ದು, ಅವಿವೇಕದ ಮಾತು, ಮತಾಂಧತೆ,ಅತಿರೇಕಗಳಿಂದ ಚುನಾವಣೆ ಗೆಲ್ಲುವ ಅವರ ಲಾಗಾಯ್ತಿನ ಚಾಳಿ ಈಗ ಪಕ್ಷ, ನಾಯಕರಿಗೆ ಮುಜುಗರ ಉಂಟುಮಾಡುತ್ತಿದೆ. ಅವರಿಂದ ಬಿ.ಜೆ.ಪಿ.,ಮುಖಂಡರನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಅವರ ಮೇಲೆ ಶಿಸ್ತಿನ ಕ್ರಮಕ್ಕೆ ಒತ್ತಾಯಿಸಿದ್ದಾರೆ.

