ತೀವೃ ಕುತೂಹಲ ಕೆರಳಿಸಿದ್ದ ಯಲ್ಲಾಪುರ ಮತಕ್ಷೇತ್ರದ ಉಪಚುನಾವಣೆಯಲ್ಲಿ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ 31 ಸಾವಿರ ಮತಗಳ ಅಂತರದಿಂದ ಆಯ್ಕೆಯಾಗುವ ಮೂಲಕ ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕರನ್ನು ಸೋಲಿಸಿ ಮತ್ತೆ ವಿಧಾನಸೌಧ ಪ್ರವೇಶಿಸಿದ್ದಾರೆ.
ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ ಒಮ್ಮೆ ಲೋಕಸಭೆ, ಈ ಬಾರಿಯೂ ಸೇರಿ ಮೂರನೇ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತಂತಾಗಿದೆ.
ಭೀಮಣ್ಣ ನಾಯ್ಕ ಬಂಗಾರಪ್ಪನವರ ಗರಡಿಯಲ್ಲಿ ಬೆಳೆದು ಅವರದೇ ಪಕ್ಷದಿಂದ ಮೊದಲು ಕೆನರಾ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ಸೋತಿದ್ದರು. ಆ ನಂತರ ಬಂಗಾರಪ್ಪ ಸಮಾಜವಾದಿ ಪಕ್ಷ ಸೇರಿದ ನಂತರ ಶಿರಸಿ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ವಿಧಾನಸಭಾ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿ ವಿಶ್ವೇಶ್ವರ ಹೆಗಡೆಯವರ ಎದುರು 17 ಸಾವಿರ ಮತಗಳಿಂದ ಸೋಲು ಕಂಡಿದ್ದ ಅವರು ಈಗ ಕಾಂಗ್ರೆಸ್ ಅನಿವಾರ್ಯತೆಯಲ್ಲಿ ಯಲ್ಲಾಪುರದ ಅಭ್ಯರ್ಥಿಯಾಗಿದ್ದರು.
ಹಿಂದೆ ಶಿರಸಿ ಕ್ಷೇತ್ರದಲ್ಲಿ ಜೆ.ಡಿ.ಎಸ್. ಅಭ್ಯರ್ಥಿಯ ಹೀನಾಯ ಸೋಲು ಮತ್ತು ಈಬಾರಿ ಜಾದಳದ ಅಭ್ಯರ್ಥಿಯ ನಾಮಕಾವಾಸ್ಥೆ ಸ್ಫರ್ಧೆಗಳಿಂದ ಭೀಮಣ್ಣ ಸೋತರು ಎನ್ನಲಾಗುತಿದ್ದರೂ ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರ ಪುರಾತನ ಸಮರತಂತ್ರ ಗಳಿಂದಲೇ ಭೀಮಣ್ಣ ಸೋಲುತ್ತಾರೆ ಎನ್ನುವ ಆರೋಪಗಳಿವೆ.
ಶಿವರಾಮ ಹೆಬ್ಬಾರ್ ಮೂಲತ: ಬಿ.ಜೆ.ಪಿ.ಯವರಾಗಿದ್ದು ಎರಡು ಬಾರಿ ಕಾಂಗ್ರೆಸ್ ನಿಂದ ಈ ಬಾರಿ ಬಿ.ಜೆ.ಪಿ.ಯಿಂದ ವಿಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಶಾಸಕತ್ವಕ್ಕೆ ರಾಜೀನಾಮೆ ನೀಡಿ ಬಿ.ಜೆ.ಪಿ. ಸೇರ್ಫಡೆಯಾದ ಅನೇಕರಲ್ಲಿ ಶಿವರಾಮ ಹೆಬ್ಬಾರ್ ಕೂಡಾ ಒಬ್ಬರಾಗಿದ್ದು ಹಣ, ಅಧಿಕಾರ, ಧಾರ್ಮಿಕ ಭಾವನೆಗಳ ಆಧಾರದಲ್ಲಿ ಹೆಬ್ಬಾರ್ ಗೆದ್ದಿದ್ದಾರೆ ಎನ್ನಲಾಗುತಿದ್ದರೂ ಶಿವರಾಮ ಹೆಬ್ಬಾರ್ ಜನಸಂಪರ್ಕ, ಸಂಬಂಧ, ಸಂಪರ್ಕ ನಿರ್ವಹಣೆಗಳಲ್ಲಿ ಎತ್ತಿದ ಕೈ ಎನ್ನಲಾಗುತ್ತಿದೆ.
ದೇಶಪಾಂಡೆಯವರಿಗೆ ಬಹಿರಂಗ ಪಂಥಾಹ್ವಾನ ನೀಡಿದ್ದ ಹೆಬ್ಬಾರ್ ಕಾಂಗ್ರೆಸ್ ನಲ್ಲಿದ್ದಾಗ ಮತ್ತು ಕಾಂಗ್ರೆಸ್ ನಿಂದ ಹೊರಗಿದ್ದಾಗ ಕೂಡಾ ದೇಶಪಾಂಡೆಯವರೊಂದಿಗೆ ದಾಯಾದಿ ಕಲಹ ಇಟ್ಟುಕೊಂಡವರು.
ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರ ತಂತ್ರ-ಸಂಘಟನೆ, ಬಹಿರಂಗ ಪ್ರಚಾರಗಳೆದುರು ಶಿವರಾಮ ಹೆಬ್ಬಾರರಿಗೆ ನೆರವಾದದ್ದು ಅವರ ಬ್ರಾಹ್ಮಣ ಕುಲ ಮತ್ತು ಯಡಿಯೂರಪ್ಪನವರ ಲಿಂಗಾಯತ ಜಾತಿ ಎನ್ನಲಾಗುತ್ತಿದೆ. ಆದರೆ ಬಹುತೇಕ ಎಲ್ಲಾ ಹೋಬಳಿ, ವಿಭಿನ್ನ ಪ್ರದೇಶಗಳಲ್ಲಿ ಹೆಚ್ಚು ಮತಗಳಿಸಿರುವ ಹೆಬ್ಬಾರ್ ರಿಗೆ ಅನೇಕ ಪೂರಕ ಅಂಶಗಳು ನೆರವಿಗೆ ಬಂದಿವೆ.
ಹಿಂದೆ ಶಿರಸಿ ಕ್ಷೇತ್ರದಲ್ಲಿ 17 ಸಾವಿರ ಮತಗಳ ಅಂತರದಿಂದ ಪರಾಜಿತರಾಗಿದ್ದ ಭೀಮಣ್ಣ ಈ ಬಾರಿ 31 ಸಾವಿರ ಮತಗಳ ಅಂತರದಿಂದ ಯಲ್ಲಾಪುರದಲ್ಲಿ ಸೋತಿದ್ದಾರೆ. ಕಾಂಗ್ರೆಸ್ ಶಕ್ತಿ, ವೈಯಕ್ತಿಕ ಬಲಾಬಲಗಳ ಹಿನ್ನೆಲೆಯಲ್ಲಿ ಇತ್ತೀಚಿನ ಎರಡು ವರ್ಷಗಳ ಪ್ರತ್ಯೇಕ 2 ಚುನಾವಣೆಗಳಲ್ಲಿ ಭೀಮಣ್ಣ ನಾಯ್ಕ ಗಳಿಸಿರುವ ಮತಪ್ರಮಾಣ ನಗಣ್ಯವಲ್ಲ. ಕಾಂಗ್ರೆಸ್ ಗಾಳಿ-ಪ್ರಾಬಲ್ಯ, ಪಾರಮ್ಯಗಳ ಅವಧಿಯಲ್ಲಿ ಟಿಕೇಟ್ ವಂಚಿತರಾಗಿದ್ದರು ಭೀಮಣ್ಣ. ಬಿ.ಜೆ.ಪಿ. ಪ್ರಭಾವ, ಪಾರಮ್ಯಗಳ ಕಾಲದಲ್ಲಿ 50 ಸಾವಿರಗಳ ಮತ ಬಾಚಿರುವ ಭೀಮಣ್ಣ ಕಾಂಗ್ರೆಸ್ ಮರ್ಯಾದೆ ಉಳಿಸಿದ್ದಾರೆ ಎನ್ನುವ ಅಭಿಪ್ರಾಯಗಳೂ ಇವೆ.