ಉತ್ತರ ಕನ್ನಡ ಜಿಲ್ಲೆಗೆ ಬೆಳೆವಿಮೆ ಪರಿಹಾರ 14.92 ಕೋಟಿ, ಶಿರಸಿ ಕ್ಷೇತ್ರಕ್ಕೆ ಗ್ರಾಮೀಣ ರಸ್ತೆಗಳಿಗೆ 12 ಕೋಟಿ ಅನುದಾನ, ಅತಿವೃಷ್ಟಿ ಪರಿಹಾರ ಸಿದ್ಧಾಪುರ ತಾಲೂಕಿಗೆ 12.68 ಕೋಟಿ ಹೀಗೆ ಈ ವರ್ಷ ತಾಲೂಕು, ಕ್ಷೇತ್ರ, ಜಿಲ್ಲೆಗೆ ಹೆಚ್ಚಿನ ಅನುದಾನ ಬಂದಿದ್ದು ಆ ಅನುದಾನದ ಸದ್ಭಳಕೆಗೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.
ತಾ,ಪಂ. ಸಭಾಭವನದಲ್ಲಿ ನಡೆದ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಈ ವರ್ಷ ಹೆಚ್ಚು ಅನುದಾನ ಬಂದಿದೆ. ಮುಂದಿನ ಆರ್ಥಿಕ ವರ್ಷದಲ್ಲೂ ಹೆಚ್ಚಿನ ಅನುದಾನ ಬರಲಿದೆ. ಈ ಅವಕಾಶದಲ್ಲಿ ಅನುದಾನ ಸದ್ಭಳಕೆ ಮಾಡುವ ಮೂಲಕ ತಾಲೂಕು ಕ್ಷೇತ್ರದ ಅಭಿವೃದ್ಧಿ ಮಾಡಬೇಕಿದೆ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಸೂಚನೆ ನೀಡಿದ ವಿಶ್ವೇಶ್ವರ ಹೆಗಡೆ ಕಾಡು ಪ್ರಾಣಿ ಹಾವಳಿ, ಕಾಡುಪ್ರಾಣಿಗಳಿಂದ ಬೆಳೆನಾಶ ಸೇರಿದ ಕೆಲವು ಅವಶ್ಯ ಕೆಲಸಗಳನ್ನು ಮಾಡಿಸುವುದಾಗಿ ಭರವಸೆ ನೀಡಿದರು.
ಪ್ರಗತಿಪರಿಶೀಲನಾ ಸಭೆಯ ಪ್ರಾರಂಭದಲ್ಲಿ ಮಾತನಾಡಿದ ಹೆಗಡೆ ಈ ಆರ್ಥಿಕ ವರ್ಷ ಕೊನೆಯಾಗುತ್ತಿದೆ.ವಿಳಂಬ, ನಿರ್ಲಕ್ಷದಿಂದ ಅಭಿವೃದ್ಧಿ ಅನುದಾನ ಮರಳಬಾರದು. ಈಗಿನಿಂದಲೇ ತಾಲೂಕಿಗೆ ನಿರೀಕ್ಷೆ ಮೀರಿ ಹಣ ಬರಲಿದೆ ಅದರ ಸದ್ಭಳಕೆ ಆಗಬೇಕು ಎಂದು ಆದೇಶಿಸಿದ ಅವರು ಜನಪ್ರತಿನಿಧಿಗಳು, ಅಧಿಕಾರಿಗಳು ಅವಶ್ಯ ಕೆಲಸಗಳ ಬಗ್ಗೆ ತಿಳಿಸಿ ಸಹಕರಿಸಿದರೆ ಈ ಸರ್ಕಾರದಿಂದ ಗರಿಷ್ಟ ಅನುದಾನದ ಜೊತೆಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದರು.
ಸಭೆಗೆ ಮಾಹಿತಿ ನೀಡಿದ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆವಿಮೆ, ಬೆಳೆಹಾನಿ ಅನುದಾನದ ತಾಲೂಕುವಾರು ದಾಖಲೆಗಳು ಲಭ್ಯವಿಲ್ಲದಿದ್ದುದರಿಂದ ಕರಾರುವಕ್ಕಾಗಿ ತಾಲೂಕಿಗೆ ಇಷ್ಟು ಅನುದಾನ ಬಂದಿದೆ. ಇಷ್ಟು ಫಲಾನುಭವಿಗಳಿಗೆ ದೊರೆತಿದೆ ಎನ್ನುವುದು ತಿಳಿಯುವುದಿಲ್ಲ ಎಂದು ತೊಂದರೆಯನ್ನು ವಿಧಾನಸಭಾಅಧ್ಯಕ್ಷರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರೀಯಿಸಿದ ಅವರು ಸಂಬಂಧಿಸಿದ ಸಚಿವರು, ಅಧಿಕಾರಿಗಳಿಗೆ ತಿಳಿಸಿ ಈ ತೊಂದರೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಆರೋಗ್ಯ ಮತ್ತು ಇತರ ಇಲಾಖೆಗಳ ವರದಿ ಕೇಳಿದ ಸಚಿವರು ಅಗತ್ಯ ಅನುಕೂಲ ಕೇಳಿ ಮುಂಜಾಗ್ರತೆಯಿಂದ ತೊಂದರೆ ಬಗೆಹರಿಸಲು ಸೂಚಿಸಿದರು.