

ರತ್ನಾಕರ & ತಮ್ಮಣ್ಣರಿಗೆ ಸನ್ಮಾನ
ಟಿ.ವಿ.,ಮೊಬೈಲ್ ಮಾದಕವಸ್ತುಗಳು ಈಗಿನ ನವ ಜನಾಂಗ ಮತ್ತು ಮಹಿಳೆಯರಿಗೆ ಮಾರಕವಾಗಿವೆ ಎಂದು ಅಭಿಪ್ರಾಯ ಪಟ್ಟಿರುವ ಸಾಹಿತಿ,ಜಿಲ್ಲಾ ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷ ರೋಹಿದಾಸ ನಾಯ್ಕ ಸಾಹಿತ್ಯದ ಕೃಷಿ ಮತ್ತು ಓದಿನಿಂದ ಈ ಅಪಾಯವನ್ನು ತಪ್ಪಿಸಬಹುದು ಎಂದಿದ್ದಾರೆ.
ರತ್ನಾಕರ ನಾಯ್ಕ ಸಂಪಾದಿಸಿರುವ ಸಾಹಿತ್ಯ ಸಮ್ಮೇಳನಗಳ ಒಡನಾಡಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು ದೂರದರ್ಶನಗಳ ಧಾರವಾಹಿಗಳು, ಮೊಬೈಲ್ ಅನುಕೂಲಗಳು, ಮಾದಕ ದೃವ್ಯಗಳು ನಮಗೆ ಅಪಾಯಕಾರಿಯಾಗಿ ಪರಿಣಮಿಸಿವೆ.
ಈ ತೊಂದರೆಯಿಂದ ಪಾರಾಗಲು ಮನುಷ್ಯತ್ವ, ಮಾನವೀಯ ಅಂತ:ಕರಣದ ಸಾಹಿತ್ಯದ ಕೃಷಿ ಮತ್ತು ಓದೇ ಬಿಡುಗಡೆಯಾಗಬೇಕು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಸಾಂಸ್ಕøತಿಕ ಘಟಕದ ಜಿಲ್ಲಾಧ್ಯಕ್ಷ ಗೋಪಾಲನಾಯ್ಕ ಭಾಶಿ ಕಾರ್ಯಕ್ರಮಕ್ಕೆ ಸರ್ವರನ್ನೂ ಸ್ವಾಗತಿಸಿದರು.
ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ಮಾತನಾಡಿ ಒಡನಾಡಿ ಒಂದು ಆಕರ ಗೃಂಥದಂತಿದೆ. ಇಲ್ಲಿಯ ಮಾಹಿತಿ-ಆಶಯಗಳು ಸಮಾಜಮುಖಿಯಾಗಿವೆ ಎಂದರು.
ಹಿರಿಯ ಸಾಹಿತಿ ವಿಷ್ಣುನಾಯ್ಕ ಮಾತನಾಡಿ ಒಡನಾಡಿಯಲ್ಲಿ ಮಹತ್ವದ ಮಾಹಿತಿ-ವಿಶೇಶ ವಿಚಾರಗಳಿವೆ. ವ್ಯಕ್ತಿಯಾಗಿ ರತ್ನಾಕರ ಒಂದು ಸಂಸ್ಥೆಯ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ನಿವೃತ್ತ ಶಿಕ್ಷಕ ತಮ್ಮಣ್ಣ ಬೀಗಾರ್ ರನ್ನು ಸಂಘಟಕರು ಸನ್ಮಾನಿಸಿದರು.
ಪೌರ್ಣಿಮಾ ಸಾಹಿತ್ಯ ವೇದಿಕೆಯಿಂದ ಕೃತಿ ಸಂಗ್ರಹಿಸಿದ ರತ್ನಾಕರ ನಾಯ್ಕರನ್ನು ಸನ್ಮಾನಿಸಲಾಯಿತು. ರಾಮಚಂದ್ರ ಭಾಗವತರ ಸುಶ್ರಾವ್ಯ ಯಕ್ಷಗೀತೆಗಳಿಂದ ಪ್ರಾರಂಭವಾದ ಕಾರ್ಯಕ್ರಮ ಅವರ ಯಕ್ಷಗೀತೆಗಳೊಂದಿಗೆ ಮುಕ್ತಾಯವಾಯಿತು.
ಸಾಹಿತ್ಯ ಪರಿಷತ್‍ನ ಚಟುವಟಿಕೆ ಕ್ಷೀಣಿಸಿರುವ ಬಗ್ಗೆ ವಿಷಾದಿಸಿದ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಎಸ್ ಗೌಡರ್ ಉತ್ತಮ ಕಾರ್ಯಕ್ರಮಗಳಿಂದ ಸಾಹಿತ್ಯ ಪರಿಷತ್ ಕ್ರೀಯಾಶೀಲವಾಗಬೇಕೆಂದು ಆಶಿಸಿದರು. ಸಹಾಯಕ ಅಭಿಯೋಜಕ ಚಂದ್ರಶೇಖರ್ ಎಸ್.ಎಚ್., ವಿಮರ್ಶಕ ಸುಬ್ರಾಯ ಮತ್ತೀಹಳ್ಳಿ, ಕೃತಿ ಸಂಪಾದಕ ರತ್ನಾಕರ ನಾಯ್ಕ ಮಾತನಾಡಿದರು.
