ಸಿದ್ಧಾಪುರ ತಾಲೂಕಿನ ತಂಡಾಗುಂಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಸರ್ಕಾರಿ ಅನುದಾನದ ಕಾಮಗಾರಿಗಳನ್ನು ನಿರ್ವಹಿಸದೆ ಜನಪ್ರತಿನಿಧಿಗಳು, ಗುತ್ತಿಗೆದಾರರು, ಅಧಿಕಾರಿಗಳು ಸೇರಿ ಅನುದಾನ ದುರ್ಬಳಿಕೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ತಂಡಾಗುಂಡಿ ಪಂಚಾಯತ್ ವ್ಯಾಪ್ತಿಯ ಸ್ಥಳಿಯರ ಕೋರಿಕೆ ಮೇರೆಗೆ ತೆರಳಿದ ಮಾಧ್ಯಮ ಪ್ರತಿನಿಧಿಗಳಿಗೆ ಈ ಅವ್ಯವಹಾರದ ವಿಷಯತಿಳಿಸಿ,ಮಾಹಿತಿಯ ದಾಖಲೆ ಪ್ರದರ್ಶಿಸಿದ ಸ್ಥಳಿಯರು 2019ರಮಾರ್ಚ್,ಏಫ್ರಿಲ್,ಮೇ ಜೂನ್, ಜುಲೈವರೆಗೆ ಕೆಲವು ಗುತ್ತಿಗೆದಾರರಿಗೆ ಪಾವತಿಸಿದ ಕಾಮಗಾರಿ ನಿರ್ವಹಣೆಯ ಅನುದಾನದ ಮೊತ್ತಕ್ಕೆ ಸರಿಯಾಗಿ ಕಾಮಗಾರಿಗಳು ನಡೆದಿಲ್ಲ. ಈ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದ ಅನುಕೂಲದಿಂದ ಮಾಹಿತಿ ಪಡೆದ ಸ್ಥಳಿಯರಿಗೆ ಮಾಹಿತಿ ನೀಡಿದ ಮೇಲೆ ತರಾತುರಿಯಲ್ಲಿ ಈ ಹಣ ಪಾವತಿಸಿದ ಕಾಮಗಾರಿಗಳನ್ನು ನಿರ್ವಹಿಸಿರುವುದು ಬೆಳಕಿಗೆ ಬಂದಿದೆ ಎನ್ನುವ ಆರೋಪ ಸತ್ಯವಾಗುವಂತೆ ವಾಸ್ತವ ಅಲ್ಲಿತ್ತು.
ಹುಲಿಗುಂಡಿ ಬಳಿ ಇದೇವಾರದ ಮೊದಲು ನಿರ್ಮಿಸಿದ 50 ಸಾವಿರ ರೂಪಾಯಿ ವೆಚ್ಚದ ಕಾಲುಸಂಕದ ಕಾಮಗಾರಿಗೆ ಏಫ್ರಿಲ್12,2019 ರಂದೇ ಬಿಲ್ ಪಾವತಿಸಲಾಗಿದೆ. ಅದೇ ಮಾರ್ಗದಲ್ಲಿ ಮುಂದುವರಿದು ಕುಳ್ಳೆ ಕಿ.ಪ್ರಾ.ಶಾಲೆಗೆ ಈ ತಿಂಗಳು ನಿರ್ಮಿಸಿದ ಆಟದ ಮೈದಾನ ಮತ್ತು ಪೈಪ್ ಅಳವಡಿಕೆ ಕಾಮಗಾರಿಯ48450ರೂಪಾಯಿಗಳನ್ನು2019ಮಾರ್ಚ್6 ರಂದೇ ಬಿಲ್ ಮಾಡಲಾಗಿದೆ.
ಅತ್ಯಧಿಕ ಮಳೆ ಬಿದ್ದ 2019 ರ ಆಗಸ್ಟ್26,2019 ರಂದು ಕಂಚಿಮಡಿಕೆ ಕುಡಿಯುವ ನೀರಿನ ಬಾವಿಮತ್ತು ನೀರು ಸಂಗ್ರಹಾರಕ್ಕೆ 2 ಬಿಲ್ ಗಳಲ್ಲಿ ಪ್ರತ್ಯೇಕ ತಲಾ ಲಕ್ಷಕ್ಕೂ ಅಧಿಕ ಬಿಲ್ ಪಾವತಿಸಲಾಗಿದೆ.
ಹೀಗೆ ಕಾಮಗಾರಿ ನಿರ್ವಹಣೆ ಮಾಡುವ ಮೊದಲೇ ಬಿಲ್ ಪಾವತಿಸಲಾದ ಅನೇಕ ಕಾಮಗಾರಿಗಳ ಕೆಲಸಗಳನ್ನು ಸಾರ್ವಜನಿಕರು ಮಾಹಿತಿ ಕೇಳಿದ ಮೇಲೆ ತೇಪೆ ಹಚ್ಚಿ ಕಳಪೆ ಮಾಡಲಾಗಿದೆ ಎಂದು ಆರೋಪಿಸಿರುವ ಸ್ಥಳಿಯರು ಈ ಬಗ್ಗೆ ಕೂಲಂಕುಶ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ಈ ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಮತ್ತು ಈ ಅವ್ಯವಹಾರಕ್ಕೆ ಸಹಕರಿಸಿದ ಜನಪ್ರತಿನಿಧಿಗಳ ಸದಸ್ಯತ್ವವನ್ನು ರದ್ದು ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿನಡೆದ ಸ್ಥಳ ಪರಿಶೀಲನೆ ಮತ್ತು ಮಾಧ್ಯಮಗೋಷ್ಠಿಯಲ್ಲಿ ಶಶಾಂಕಮಡಿವಾಳ,ಅಣ್ಣಪ್ಪ ಗೌಡ ತಂಡಾಗುಂಡಿ, ಗಣಪತಿ ನಾ.ಹೆಗಡೆ, ಎನ್.ಕೆ.ಭಟ್ ಹಂದ್ಯಾನೆ, ಮಹಾಬಲೇಶ್ವರ ಮಾ ಗೌಡ, ಸೀತಾರಾಮ ಹು.ಗೌಡ, ನಾಗಪತಿ ಬಿ.ಗೌಡ ಹುತ್ಗಾರ, ಈಶ್ವರ ಮಾಳು ಗೌಡ,ಈಶ್ವರ ರಾಮುಗೌಡ, ಸೋಮಶೇಖರ್ ನಾಯ್ಕ ಜೋಗನಮನೆ, ಎ.ಪಿ.ಎಂ.ಸಿ.ಸದಸ್ಯ ಸೀತಾರಾಮ ಗೌಡ ಉಪಸ್ಥಿತರಿದ್ದರು.
ಧರಣಿ ಸತ್ಯಾಗ್ರಹ-
ಈಗ ಲಭ್ಯವಿರುವ ಮಾಹಿತಿ,ದಾಖಲೆಗಳ ಆಧಾರದಲ್ಲಿ ಸಂಬಂಧಿಸಿದವರಿಗೆ ತನಿಖೆಗೆ ಕೋರಿದ್ದೇವೆ.ಈ ತಿಂಗಳ ಕೊನೆ ಒಳಗೆ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸದಿದ್ದರೆ ಜನೇವರಿ 1 ರಿಂದ ಗ್ರಾ.ಪಂ. ಮತ್ತು ತಾ.ಪಂ. ಆವಾರಗಳಲ್ಲಿ ಧರಣಿ ನಡೆಸಿ ಪ್ರತಿಭಟಿಸುವುದಾಗಿ ಎಚ್ಚರಿಸಿರುವ ಸ್ಥಳಿಯರು ಈ ಬಗ್ಗೆ ತಾ.ಪಂ. ಮು.ಕಾ.ನಿ.ಅ. ಜಿಲ್ಲಾ ಪಂಚಾಯತ್ ಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.