

ತಂಡಾಗುಂಡಿ ಗಂಡಾಗುಂಡಿ ಸ್ಟೋರಿ- ಭಾಗ-02
ಸಿದ್ದಾಪುರ ತಾಲೂಕಿನ ತಂಡಾಗುಂಡಿ ಗ್ರಾ.ಪಂ. ನಲ್ಲಿ ಸರ್ಕಾರಿ ಕಾಮಗಾರಿ ನಿರ್ವಹಿಸದೆ ಗುತ್ತಿಗೆದಾರರಿಗೆ ಹಣ ಪಾವತಿಸಿರುವುದು,ತರಾತುರಿಯಲ್ಲಿ ಹಳೆ ಕಾಮಗಾರಿಗಳನ್ನು ನಿರ್ವಹಿಸಿರುವುದು ಸೇರಿದಂತೆ ರಾಜಕೀಯ ಮುಖಂಡರ ಸ್ನೇಹ,ಅಧಿಕಾರ,ಸರ್ಕಾರದ ಅಧಿಕಾರ ದುರುಪಯೋಗಪಡಿಸಿಕೊಂಡ ಗುತ್ತಿಗೆದಾರನ ಸ್ವಾರ್ಥಕ್ಕೆ ಸಹಕರಿಸಿದ ಮೇಲ್ನೋಟದ ಆರೋಪದ ಮೇಲೆ ತಂಡಾಗುಂಡಿ ಗ್ರಾ.ಪಂ. ಅಧಿಕಾರಿ ಲತಾ ಶೇಟ್ ಅಮಾನತ್ತಾಗಿದ್ದಾರೆ.
ಈ ಅಮಾನತ್ ಆದೇಶದ ಹಿಂದೆ ಕೆಲಸ ಮಾಡಿದ್ದು ಮಾಹಿತಿಹಕ್ಕು ಅರ್ಜಿ ಎನ್ನುವುದು ಕುತೂಹಲದ ವಿಷಯ.
ನೂತನ ಗ್ರಾ.ಪಂ.ಆದ ತಂಡಾಗುಂಡಿಯಲ್ಲಿ ಈ ಅವಧಿಗೆ 6 ಜನ ಸದಸ್ಯರನ್ನು ಅಲ್ಲಿಯ ಮತದಾರರು ಅವಿರೋಧವಾಗಿ ಆಯ್ಕೆಮಾಡಿದ್ದರು. ಬಹುತೇಕ ಗ್ರಾ.ಪಂ. ಗಳಲ್ಲಿ ನಡೆಯುವಂತೆ ಸದಸ್ಯರು ತಮ್ಮ ಲಾಭದ ಕೆಲಸ, ಅನುಕೂಲಗಳಿಗೆ ಸರ್ಕಾರಿ ವ್ಯವಸ್ಥೆಯನ್ನು ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಸ್ಫಷ್ಟ. ಆದರೆ ತಂಡಾಗುಂಡಿಯಲ್ಲಿ ಗಂಡಾಗುಂಡಿ ವ್ಯವಹಾರ ಮಾಡಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾ.ಪಂ. ಸದಸ್ಯರು ಈ ವ್ಯವಹಾರಗಳಿಗೆ ಒಂದೆರಡು ಗುತ್ತಿಗೆದಾರರನ್ನು ಬಳಸಿಕೊಂಡಿದ್ದರೂ ತಂಡಾಗುಂಡಿ,ಹೆಗ್ಗರಣಿ ಸೇರಿದಂತೆ ಈ ಭಾಗದ ನಾಲ್ಕೈದು ಗ್ರಾಮ ಪಂಚಾಯತ್ ಗಳಲ್ಲಿ ನಾಮಕಾವಸ್ಥೆಗೆ ನಾಲ್ಕೈದು ಗುತ್ತಿಗೆದಾರರ ಹೆಸರನ್ನು ಬಳಸಿಕೊಂಡು ಪ್ರಮುಖವಾಗಿ ಶಾಸಕರ ಆಪ್ತ ಎಂದು ತಿರುಗಾಡುವ ಒಬ್ಬನೇ ಗುತ್ತಿಗೆದಾರನಿಗೆ ಈ ಭಾಗದಲ್ಲಿ ಗುತ್ತಿಗೆ ನೀಡಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದ್ದಾರೆ.
ತಂಡಾಗುಂಡಿಯಲ್ಲಿ ಅನುದಾನದ ಮೊತ್ತದ ಚೆಕ್ ಪಾವತಿಸಿದ ಸರಿಸುಮಾರು ನಾಲ್ಕೈದು ತಿಂಗಳ ನಂತರ ಡಿಸೆಂಬರ್ 15 ರ ಅವಧಿಯಲ್ಲಿ ನಿರ್ಮಿಸಲಾದ ಕಾಲುಸಂಕಕ್ಕೆ ಅಡಿಪಾಯದ ಪಿಲ್ಲರ್ ಆಗಲಿ ಮೇಲಿನ ಸಿಮೆಂಟ್ ಮುಚ್ಚಿಗೆಯನ್ನುಹಿಡಿದಿಡುವ ಅಡಿಪಾಯಕ್ಕೆ ಕಲ್ಲಿನ ತಳಪಾಯ ಹಾಕುವ ಬದಲು ಹಸಿಮಣ್ಣಿನ ಮೇಲೆ ಸಿಮೆಂಟ್ ಒರೆಸಲಾಗಿದೆ.
ಈ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ತಂಡಾಗುಂಡಿ ಗ್ರಾ.ಪಂ. ನಲ್ಲಿ ಈ ವ್ಯವಹಾರಗಳನ್ನು ಸದಸ್ಯರೊಬ್ಬರು ವಿರೋಧಿಸಿದ ಮೇಲೆ ,ಅದರ ಆಧಾರದಲ್ಲಿ ಮಾಹಿತಿ ಹಕ್ಕು ಕಾಯಿದೆ ಅನುಸಾರ ದಾಖಲಾತಿ ತೆಗೆಸಿದ ಮೇಲೆ ಈ ಕಾಮಗಾರಿಯನ್ನು ನಿಯಮಮೀರಿ ಮಾಡಲಾಗಿದೆ.
ಕುಳ್ಳೆ ಶಾಲೆಯ ಕಾಮಗಾರಿ-
ತಂಡಾಗುಂಡಿ ಪಂಚಾಯತ್ ಕುಳ್ಳೆ ಶಾಲೆಗೆ ಇತ್ತೀಚಿನ ವರ್ಷಗಳಲ್ಲಿ ಎರಡೂ ಬಾರಿ ಪ್ರತ್ಯೇಕವಾಗಿ ವಿಭಿನ್ನ ಕಾಮಗಾರಿಗಳಿಗಾಗಿ ಗ್ರಾಮ ಪಂಚಾಯತ್ ನಿಂದ ಅನುದಾನ ನೀಡಲಾಗಿದೆ. ಹೀಗೆ ಸರ್ಕಾರಿ ಅನುದಾನವನ್ನು ಗ್ರಾ.ಪಂ. ಠರಾವಿನ ಮೇರೆಗೆ ನಿರ್ವಹಿಸಿದ ಗುತ್ತಿಗೆದಾರರು ಯಾವ ಕೆಲಸವನ್ನೂ ಪೂರ್ತಿಗೊಳಿಸಿಲ್ಲ.2019 ಮಾರ್ಚ್‍ನಲ್ಲಿ ಬಿಲ್ ಪಾವತಿಸಿದ ಕೆಲಸದ ಕಾಮಗಾರಿ 2019 ರ ಡಿಸೆಂಬರ್ ನಲ್ಲಿ ನಡೆದಿದೆ. ಈ ಶಾಲೆಯ ಸಭಾಭವನ, ಆಟದ ಮೈದಾನ ಸಮತಟ್ಟು ಮಾಡುವುದು,ಪೈಪ್ ಅಲವಡಿಸುವಿಕೆ ಎಲ್ಲವೂ ನಿಯಬಾಹೀರ ಮತ್ತು ಕಳಪೆಯಾಗಿರುವ ಬಗ್ಗೆ ಸ್ಥಳಿಯರು ದೂರಿದ್ದಾರೆ. ಆದರೆ ಗ್ರಾ.ಪಂ. ಮತ್ತು ಗುತ್ತಿಗೆದಾರರು ಹೊಂದಾಣಿಕೆಯಿಂದ ಅಕ್ರಮಸಂಪಾದನೆಗಾಗಿ ಮಾಡಿರುವ ಈ ಕಾಮಗಾರಿಗಳ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಶಾಲೆಯ ಮೇಲ್ ಉಸ್ತುವಾರಿ ಸಮೀತಿ ಗಮನಿಸಿರಲಿಲ್ಲವೆ? ಎನ್ನುವ ಅನುಮಾನ ಈಗಿನ ಯಕ್ಷ ಪ್ರಶ್ನೆಯಾಗಿದೆ.
ಹುಲಿಗುಂಡಿಯ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೂ ಕಂಚಿಮಡಿಕೆ ಕುಡಿಯುವ ನೀರಿನ ಬಾವಿ ಮತ್ತು ಟ್ಯಾಂಕ್ ನಿರ್ಮಾಣ ಮಾಡಿದ ಗುತ್ತಿಗೆದಾರರಿಗೆ ಬಾದರಾಯಣಕ್ಕಿಂತ ಹತ್ತಿರದ ಸಂಬಂಧವಿದೆ ಎಂದು ದೂರುವ ಸ್ಥಳಿಯರು ಕಂಚಿಮಡಿಕೆ ಬಾವಿ,ನೀರು ಸಂಗ್ರಹಾರ, ಪೈಪ್ ಜೋಡಣೆಗಳಿಗೆ ಎರಡ್ಮೂರು ಬಾರಿ ಪ್ರತ್ಯೇಕ ಅನುದಾನ,ಹಣ ಪಾವತಿಸಲಾಗಿದೆ. ಆದರೆ ಅಲ್ಲಿ ಮೊದಲಬಾರಿ ಆದ ಕೆಲಸಗಳಿಗೆ ಈ ಡಿಸೆಂಬರ್‍ನಲ್ಲಿ ತೇಪೆ ಹಚ್ಚಲಾಗಿದೆ. ಈ ತೇಪೆಹಚ್ಚುವ ಕೆಲಸ ಮಾಡಿದ ಗ್ರಾ.ಪಂ. ಬಿಲ್ ಪಾವತಿಯಾಗಿ ನಾಲ್ಕು ತಿಂಗಳ ನಂತರ ಯಾಕೆ ಕೆಲಸಮಾಡಿತೆಂದರೆ ಮಾಹಿತಿಹಕ್ಕಿನ ಸಕಾರಣ ದೊರೆಯುತ್ತದೆ.
ಈ ಕಾಮಗಾರಿಗಳಿಗೆ ಮೂರುಬಾರಿ ಅನುದಾನ ನೀಡಿ ಮೊದಲ ಅನುದಾನದ ಮೊತ್ತದ ಅರ್ಧಕ್ಕಿಂತ ಕಡಿಮೆ ಹಣದಲ್ಲಿ ಈ ಕೆಲಸವನ್ನೂ ಪೂರ್ತಿಗೊಳಿಸದ ಗುತ್ತಿಗೆದಾರನ ಕೈ ಚಳಕದ ಹಿಂದೆ ಅವರು ನಿರ್ವಹಿಸಿದ ಈ ಪಂಚಾಯತ್ ನ ಪ್ರತಿಶತ 70 ರಷ್ಟು ಕಾಮಗಾರಿಗಳ ಗುಣಮಟ್ಟ ನಿಂತಿದೆ ಎನ್ನುತ್ತಾರೆ ಈ ಪ್ರಕರಣ ಹೊರಹಾಕಿದ ಯುವಕರು.
ಹುಕ್ಳಿ ಸ್ಮಶಾನಕ್ಕೆ ಒಂದೇ ಕಾಮಗಾರಿಗೆ ಎರಡು ಅನುದಾನ-
ತಂಡಾಗುಂಡಿ ಪಂಚಾಯತ್ ಹುಕ್ಳಿ ಸ್ಮಶಾನದ ರಸ್ತೆ ನಿರ್ಮಾಣಕ್ಕೆ 2019 ರಲ್ಲಿ ಅಂದರೆ 2018-2019-2020 ಎರಡು ಆರ್ಥಿಕ ವರ್ಷಗಳಲ್ಲಿ ಎರಡು ಬಾರಿ ಪ್ರತ್ಯೇಕ ಅನುದಾನ ನೀಡಿ ಬಹುಮೊದಲೇ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗಿದೆ. ಆದರೆ 2018 ರಲ್ಲಿ ಒಮ್ಮೆ ಒಂದು ಕಾಮಗಾರಿ ಮಾಡಿದ ನಂತರ ಮಾಹಿತಿಹಕ್ಕಿನ ಮಾಹಿತಿ ನೀಡಿದ ಬಳಿಕ ಕೆಲವು ಬುಟ್ಟಿ ಮಣ್ಣು ತೆಗೆದು ಒಂದು ಕೂಲಿಯಾಳುಮಾಡುವ ಕೆಲಸದಷ್ಟು ಕಸ ತೆಗೆಯಲಾಗಿದೆ.
ಈ ಕಾಮಗಾರಿಗೆ ಎರಡು ಬಿಲ್ ಪಾವತಿಸಿದ ಗ್ರಾ.ಪಂ. ಆಡಳಿತದ ವಿರುದ್ಧ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಎಚ್ಚರಿಸಿದ್ದರೂ ಅವರು ಹಳೆಚಾಳಿ ಬಿಡದೆ ತಮ್ಮ ಛಲ ಬಿಡದದ್ದಕ್ಕೆ ಅಮಾನತ್ತಾಗಿದ್ದಾರೆ. ಈ ಕಾಮಗಾರಿಗಳು ಸೇರಿದಂತೆ ಗೋಣಿಗದ್ದೆ ರಸ್ತೆ, ಮಾಹಿತಿ ಹಕ್ಕಿನ ಮಾಹಿತಿಗಾಗಿ ಕಾಯುತ್ತಿರುವ ಇಂಥ ನೂರಾರು ಕಾಮಗಾರಿಗಳಿವೆ ಎನ್ನುವ ಯುವಕರ ತಂಡದ ಮಾಹಿತಿ ಧೃಡ ಪಡಿಸುವಂತೆ ಪರಮೇಶ್ವರ ರೊಡ್ಡಾ ಮುಕ್ರಿ ಎಂಬುವವರ ಮನೆಯ ಕಾಮಗಾರಿಗೆ ಮೇಲ್ಛಾವಣಿಗೆ ಮೊದಲು, ಅಡಿಪಾಯಕ್ಕೆ ನಂತರ! ಗುತ್ತಿಗೆದಾರರಿಗೆಕಾಮಗಾರಿ ನಿರ್ವಹಣೆಯ ಬಿಲ್ ಪಾವತಿಸಲಾಗಿದೆ. ಹೀಗೆ ತಂಡಾಗುಂಡಿ ಮತ್ತು ಹೆಗ್ಗರಣಿ ಸೇರಿದಂತೆ ಈ ಭಾಗದ ಇನ್ನಿತರ ಮೂರ್ನಾಲ್ಕು ಪಂಚಾಯತ್ ಗಳಲ್ಲಿ ಹೆಸರಿಗೆ ಮೂರ್ನಾಲ್ಕು ಗುತ್ತಿಗೆದಾರರು ವಾಸ್ತವದಲ್ಲಿ ಒಬ್ಬನೇ ಗುತ್ತಿಗೆದಾರ ನಿರ್ವಹಿಸಿದ ಕಾಮಗಾರಿಗಳಿವೆಯಲ್ಲ ಅವುಗಳ ಹೂರಣ ಹೊರಕ್ಕೆ ಬರಬಾರದೆಂದೇ ಆ ಗುತ್ತಿಗೆದಾರರ ಶಾಸಕರು, ಸಂಸದರ ಹೆಸರು ಹೇಳುತಿದ್ದಾನೋ? ಅಥವಾ ಶಾಸಕರು, ಸಂಸದರ ನೆರವಿನಿಂದ ಈ ಅವ್ಯವಹಾರ ಮಾಡಿದ್ದಾರೋ ಎನ್ನುವ ಬಗ್ಗೆ ಜಿ.ಪಂ. ಮುಖ್ಯ ಕಾರ್ಯದರ್ಶಿ ಮಹಮ್ಮದ್ ರೋಷನ್ ಉತ್ತರಿಸುವಂತಾಗಿದ್ದು ಮಾತ್ರ ಅವರ ಪ್ರಾಮಾಣಿಕತೆ, ದಕ್ಷತೆ,ಕ್ರೀಯಾಶೀಲತೆಯ ಉತ್ತಮ ಹೆಸರಿಗೆ ಅಂಟಬಹುದಾದ ಕಪ್ಪುಚುಕ್ಕೆ.
