

ಸಿದ್ಧಾಪುರ ತಾಲೂಕಿನ ಕಾನಸೂರು, ಹಸರಗೋಡು ಪಂಚಾಯತ್ ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಸೋಮವಾರ ಸ್ಥಳಿಯರ ಸಹಕಾರದಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆ ಓಡಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಕಳೆದ ಎರಡು- ಮೂರು ದಿವಸಗಳ ಹಿಂದೆ ಕಾನಸೂರು, ಗವಿನಗುಡ್ಡ ಬಳಿ ಕಾಣಿಸಿಕೊಂಡ ನಾಲ್ಕು ಸಲಗಗಳ ಗುಂಪು 2 ರಾತ್ರಿ- 2 ಹಗಲುಗಳ ಸಮಯದಲ್ಲಿ ಕೃಷಿಕರಿಗೆ ಉಪಟಳ ನೀಡಿವೆ. ತೋಟದ ಅಡಿಕೆ,ಬಾಳೆ,ತೆಂಗು, ಕಬ್ಬು ತಿಂದದ್ದಲ್ಲದೆ ಕೆಲವೆಡೆ ಭತ್ತದ ಗದ್ದೆ ಮತ್ತು ಗೊಣಬೆಗಳನ್ನು ಹಾಳು ಮಾಡಿವೆ.
ಈ ಸುದ್ದಿ ತಿಳಿದ ಸ್ಥಳಿಯರು ಇಂದು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಆನೆ ಬೆದರಿಸುವ ಕಾರ್ಯಾಚರಣೆ ನಡೆಸಿದರು. ಆನೆಗಳು ದಾಸನಕೊಪ್ಪ ಬದನಗೋಡು, ಯಲ್ಲಾಪುರ,ಮುಂಡಗೋಡು ಭಾಗಗಳಲ್ಲಿ ಸಂಚರಿಸುವುದು ಸಾಮಾನ್ಯ ಆದರೆ ಈ ವರ್ಷ ಆನೆಗಳ ಗುಂಪು ಪಥ ಬದಲಿಸಿ ಸಿದ್ಧಾಪುರ ತಾಲೂಕು ಪ್ರವೇಶಿಸಿದ್ದು ರೈತರಲ್ಲಿ ಆತಂಕ ಹೆಚ್ಚಿಸಿದೆ.
ತಮ್ಮಣ್ಣರ ಕವನ-
ಕಾಲದ ಗಾಳಿ ಬೀಸುತ್ತದೆ
ಕಾಲದ ಗಾಳಿ ಬೀಸುತ್ತದೆ
ಏನೇನೋ ಓಡುತ್ತದೆ… ಹಾಡುತ್ತದೆ…
ಬಿತ್ತುತ್ತದೆ… ನಮಗೆ ಓಡಲಾಗುವುದಿಲ್ಲ
ಬಿತ್ತಿದ್ದು ಗೊತ್ತಾಗುವುದಿಲ್ಲ…
ಮೊಳೆತದ್ದು ತಿಳಿಯುವುದಿಲ್ಲ
ಕಾಲದ ಗಾಳಿ ಬೀಸುತ್ತದೆ…
ಅವರು ಮಾಲ್ ಗಳಲ್ಲಿ ಮಾತಾಡುತ್ತಾರೆ…
ಪಬ್ ಗಳಲ್ಲಿ ಹಾಡು ಹೇಳುತ್ತಾರೆ…
ಬಾಟಲಿಯಲ್ಲಿ ನೀರುಕುಡಿದು… ಹಳ್ಳಿಯ ಊಟಕ್ಕೆ
ಸ್ಪೆಶಲ್ ಎನ್ನುತ್ತ ಪೇಟೆಗೂ
ಬಾಳೆಎಲೆ ತರಿಸುತ್ತಾರೆ…
ಕಾಲದ ಗಾಳಿ ಬೀಸುತ್ತದೆ…
ಮೆಟ್ರೋದಲ್ಲಿ ಪರಪ್ಯೂಂ ವಾಸನೆ
ಬೆವರ ವಾಸನೆಗಿಲ್ಲ ಜಾಗ…ಟಿವಿಮುಂದೆ
ದೇಶದ ಕುರಿತು ಹರಟುತ್ತಾರೆ
ಎದ್ದು ಊಟಕ್ಕೆ ಹೋಗುತ್ತಾರೆ
ಬೇರೆ ದೇಶದ ಹುಳುಕು ಹುಡುಕಿ
ನಮ್ಮದೆಲ್ಲವ ಮರೆಯುತ್ತಾರೆ
ಕಾಲದ ಗಾಳಿ ಬೀಸುತ್ತದೆ…
ಕೈ ಅದರುತ್ತದೆ .. ಮರದ ಎಲೆ ಉದುರುತ್ತದೆ
ನದಿಗಳಲ್ಲಿ ಮರಳು ಮರಳಿನಲ್ಲಿ ಕಟ್ಟಡ
ಕಟ್ಟಡದಲ್ಲಿ ನಾವೂ ಇದ್ದೇವೆ
ಕಾಲದ ಗಾಳಿ ಬೀಸುತ್ತದೆ…
ರಪ ರಪ ಮಳೆ ಸುರಿಯುತ್ತದೆ
ಎಲ್ಲಾ ಕೊಚ್ಚಿಹೋಗುತ್ತದೆ
ಆದರೂ ತಂಪಾಗುತ್ತದೆ
ಕಾಲದ ಗಾಳಿ ಬೀಸುತ್ತದೆ…
ಹೊಸದೇನೋ ಹುಟ್ಟುತ್ತದೆ !
-ತಮ್ಮಣ್ಣ ಬೀಗಾರ.





ತಮ್ಮಣ್ಣ ಬೀಗಾರರ ಕವನ ವರ್ತಮಾನಕ್ಕೆ ಹಿಡಿದ ಕೈಗನ್ನಡಿ. ರತ್ನಾಕರ ನರಮುಂಡಿಗೆ.