ಕಾಲದ ಗಾಳಿ ಬೀಸುತ್ತದೆ
ಏನೇನೋ ಓಡುತ್ತದೆ… ಹಾಡುತ್ತದೆ…
ಬಿತ್ತುತ್ತದೆ… ನಮಗೆ ಓಡಲಾಗುವುದಿಲ್ಲ
ಬಿತ್ತಿದ್ದು ಗೊತ್ತಾಗುವುದಿಲ್ಲ…
ಮೊಳೆತದ್ದು ತಿಳಿಯುವುದಿಲ್ಲ
ಕಾಲದ ಗಾಳಿ ಬೀಸುತ್ತದೆ…
ಅವರು ಮಾಲ್ ಗಳಲ್ಲಿ ಮಾತಾಡುತ್ತಾರೆ…
ಪಬ್ ಗಳಲ್ಲಿ ಹಾಡು ಹೇಳುತ್ತಾರೆ…
ಬಾಟಲಿಯಲ್ಲಿ ನೀರುಕುಡಿದು… ಹಳ್ಳಿಯ ಊಟಕ್ಕೆ
ಸ್ಪೆಶಲ್ ಎನ್ನುತ್ತ ಪೇಟೆಗೂ
ಬಾಳೆಎಲೆ ತರಿಸುತ್ತಾರೆ…
ಕಾಲದ ಗಾಳಿ ಬೀಸುತ್ತದೆ…
ಮೆಟ್ರೋದಲ್ಲಿ ಪರಪ್ಯೂಂ ವಾಸನೆ
ಬೆವರ ವಾಸನೆಗಿಲ್ಲ ಜಾಗ…ಟಿವಿಮುಂದೆ
ದೇಶದ ಕುರಿತು ಹರಟುತ್ತಾರೆ
ಎದ್ದು ಊಟಕ್ಕೆ ಹೋಗುತ್ತಾರೆ
ಬೇರೆ ದೇಶದ ಹುಳುಕು ಹುಡುಕಿ
ನಮ್ಮದೆಲ್ಲವ ಮರೆಯುತ್ತಾರೆ
ಕಾಲದ ಗಾಳಿ ಬೀಸುತ್ತದೆ…
ಕೈ ಅದರುತ್ತದೆ .. ಮರದ ಎಲೆ ಉದುರುತ್ತದೆ
ನದಿಗಳಲ್ಲಿ ಮರಳು ಮರಳಿನಲ್ಲಿ ಕಟ್ಟಡ
ಕಟ್ಟಡದಲ್ಲಿ ನಾವೂ ಇದ್ದೇವೆ
ಕಾಲದ ಗಾಳಿ ಬೀಸುತ್ತದೆ…
ರಪ ರಪ ಮಳೆ ಸುರಿಯುತ್ತದೆ
ಎಲ್ಲಾ ಕೊಚ್ಚಿಹೋಗುತ್ತದೆ
ಆದರೂ ತಂಪಾಗುತ್ತದೆ
ಕಾಲದ ಗಾಳಿ ಬೀಸುತ್ತದೆ…
ಹೊಸದೇನೋ ಹುಟ್ಟುತ್ತದೆ !
-ತಮ್ಮಣ್ಣ ಬೀಗಾರ.