

ಸುಮಾರು 60 ವರ್ಷದ ಹಿಂದಿನ ಸ್ಥಳೀಯ ನೈಜ ಘಟನೆಯನ್ನು ಆಧರಿಸಿ ತಾಲೂಕಿನ ಕೊಂಡ್ಲಿ ಗ್ರಾಮದ ಪ್ರತಿಭಾವಂತ ಯುವಕರು ನಿರ್ಮಿಸಿದ ಕೊಂಡಲಿಪುರ 1960 ಎನ್ನುವ ಕಿರುಚಿತ್ರದ ಪೋಷ್ಟರ್ ಬಿಡುಗಡೆ ಸಮಾರಂಭ ಹೊಸ ವರ್ಷದ ಸಂದರ್ಭದಲ್ಲಿ ಕೊಂಡ್ಲಿಯ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಗುತ್ತಿಗೆದಾರರಾದ ಚಂದ್ರಹಾಸ ಜಿ.ನಾಯ್ಕ, ಪಪಂ ಸದಸ್ಯ ಸುಧೀರ್ ನಾಯ್ಕ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನಾಯಕ ಎಂ.ನಾಯ್ಕ, ಶಾಲಾ ಮುಖ್ಯಾಧ್ಯಾಪಕಿ ಶೋಭಾ ಪಾಲನಕರ್, ಸಹಶಿಕ್ಷಕರು ಹಾಗೂ ಊರ ನಾಗರಿಕರ ಸಮ್ಮುಖದಲ್ಲಿ ಪೋಷ್ಟರನ್ನು ಬಿಡುಗಡೆಗೊಳಿಸಲಾಯಿತು. ಸಮಾರಂಭದಲ್ಲಿ ಪಾಲ್ಗೊಂಡ ಅತಿಥಿಗಳು ಈ ಯುವಕರ ಪ್ರಯತ್ನಕ್ಕೆ ಶುಭ ಹಾರೈಸಿದರು.
ಕನ್ನಡಿಗರ ಶೌರ್ಯ ಮತ್ತು ಕನ್ನಡ ಭಾಷೆಯ ಹಿರಿಮೆಯನ್ನು ಬಿಂಬಿಸುವ ನೈಜ ಘಟನೆಯನ್ನಾಧರಿಸಿದ ಈ ಕಿರುಚಿತ್ರದ ಚಿತ್ರಕಥೆ ಮತ್ತು ನಿರ್ದೇಶನ ಮನು ನಾಯ್ಕ ಕೊಂಡ್ಲಿಯವರದ್ದಾಗಿದ್ದು ನಾಣಿ ಜಿ.ಬಿ. ಸಹನಿರ್ದೇಶಕರಾಗಿದ್ದಾರೆ.
ಶಶಾಂಕ್ ನಾಯ್ಕ ಹಾಗೂ ಮಂಜು ನಾಯ್ಕ ನಿರ್ಮಾಣದ ಜವಾಬ್ದಾರಿ ನಿರ್ವಹಿಸಿದ್ದು ಅಮರ ನಾಯ್ಕ, ನವೀನ ನಾಯ್ಕ, ಪ್ರಸಾದ ಭಟ್ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ತಾಲೂಕಿನ ಹೆಗ್ಗೇರಿಯಲ್ಲಿ ಕಿರುಚಿತ್ರದ ಹಲವು ಭಾಗಗಳ ಚಿತ್ರೀಕರಣ ಮಾಡಲಾಗಿದ್ದು ಆ ಊರಿನ ಮಹಾಂತೇಶ್ ಹಾಗೂ ಅಲ್ಲಿನ ಹಲವು ಯುವಕರು ಸಹಕಾರ ನೀಡಿದ್ದಾರೆ. ಮಹೇಶ್ ಎಂ. ನಿರ್ದೇಶನಕ್ಕೆ ಉತ್ತಮ ಸಹಕಾರ ನೀಡಿದ್ದಾರೆ.
ಗೃಹ ಉದ್ಯಮದಲ್ಲಿ ಯಶಸ್ಸು ಕಾಣುತ್ತಿರುವ ಶಿವಕುಮಾರ
ಹೆಸರು-ಶಿವಕುಮಾರ ಗೋವಿಂದ
ವಯಸ್ಸು-25
ವೃತ್ತಿ-ಅಗರಬತ್ತಿ ತಯಾರಿಕೆ.
ಹೀಗೆ ಪರಿಚಯಿಸಬಹುದಾದ ಯುವಕ ಶಿವಕುಮಾರ ಗೋವಿಂದ ನಾಯ್ಕ ಕಡಕೇರಿಯವರು.
ಈಗಿನ ಟ್ರೆಂಡ್‍ನಂತೆ ಮೂರು ವರ್ಷ ಡಿಪ್ಲೊಮಾ ಓದಿದ ಶಿವಕುಮಾರ ಮಹಾನಗರಕ್ಕೆ ಓಡಲು ಮುಂದಾಗಲಿಲ್ಲ. ಕೆಲವು ವರ್ಷ ಆಯ್.ಟಿ.ಆಯ್. ವಿದ್ಯಾರ್ಥಿಗಳಿಗೆ ಪಾಠ ಮಾಡಿದ. ನಂತರ ಸ್ವಂತ ಉದ್ದಿಮೆ ಶ್ರೇಷ್ಠ ಎಂದು ಬಗೆದು, ಅಗರಬತ್ತಿ ತಯಾರಿಸಲು ಪ್ರಾರಂಭಿಸಿದ. ಈಗ ತಿಂಗಳೊಂದಕ್ಕೆ ಕನಿಷ್ಠ ಮೂರು ಟನ್ ಊದುಬತ್ತಿ ತಯಾರಿಸುವ ಶಿವಕುಮಾರ ಮೂರ್ನಾಲ್ಕು ಜನ ಕೆಲಸಗಾರರಿಗೆ ವೇತನ ಕೊಟ್ಟು ದಿನಕ್ಕೆ ಸಾವಿರ ಮಿಕ್ಕಿ ಉಳಿಸುತ್ತಾರೆ.


