

ಸಂಸ್ಥೆಯ ಸಂಕಷ್ಟದ ಸಮಯದಲ್ಲಿ ಅಂದಿನ ಸಹಕಾರ ಸಚಿವ ಕೆ.ಎಚ್.ಪಾಟೀಲ್ ಟಿ.ಎಂ.ಎಸ್. ಗೆ ಜೀವದಾನ ನೀಡಿದ್ದಾರೆ. ಅಂಥ ಮಹನೀಯರು, ತಾಲೂಕಿನ ಅಡಿಕೆ ಬೆಳೆಗಾರರ ಸಹಕಾರ, ಶ್ರಮದಿಂದ ಸಂಸ್ಥೆ ಯಶಸ್ವಿಯಾಗಿ 75 ವರ್ಷ ಪೂರೈಸಿದೆ. 1 ಕೋಟಿ ವೆಚ್ಚದ ಸಂಸ್ಥೆಯ ಕಟ್ಟಡ ನವೀಕರಣದೊಂದಿಗೆ ವಿದಾಯಕ ಕಾರ್ಯಕ್ರಮಗಳ ಮೂಲಕ 2 ದಿನ ಅಮೃತಮಹೋತ್ಸವ ಆಚರಿಸುತಿದ್ದೇವೆ.
-ಆರ್.ಎಂ.ಹೆಗಡೆ, ಬಾಳೇಸರ
ಸಿದ್ಧಾಪುರ ತಾಲೂಕಿನ ರೈತರ ಅಭಿಮಾನದ ಸಂಸ್ಥೆ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘದ 75 ನೇ ವರ್ಷದ ಅಮೃತಮಹೋತ್ಸವದ ಅಂಗವಾಗಿ ಜ.11,12 ರಂದು ವಿಶಿಷ್ಟ ಕಾರ್ಯಕ್ರಮಗಳು ನಡೆಯಲಿವೆ.
11 ರ ಶನಿವಾರ ಅಮೃತಮಹೋತ್ಸವದ ಅಂಗವಾಗಿ ವಿಚಾರ ಸಂಕಿರಣ ನಡೆಯಲಿದ್ದು ರವಿ ಹೆಗಡೆ ಹೂವಿನಮನೆ, ಡಾ.ಶಶಿಭೂಷಣ ಹೆಗಡೆ ದೊಡ್ಮನೆ, ಎ.ಆರ್. ಹೆಗಡೆ ಹೂಡ್ಲಮನೆ, ಎಸ್.ಜಿ.ಹೆಗಡೆ,ಜಿ.ಕೆ.ರಾಮಪ್ಪ ಉಪನ್ಯಾಸ ನೀಡಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಕೀಲ ಜಯಕುಮಾರ ಎಸ್. ಪಾಟೀಲ್ ಕೋಲಶಿರ್ಸಿ ವಹಿಸಲಿದ್ದಾರೆ.
ರವಿವಾರ ಅಮೃತಮಹೋತ್ಸವ ಸಮಾರಂಭ ನಡೆಯಲಿದ್ದು ರಾಜ್ಯ ವಿಧಾನಸಭೆಯ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಸಮಾರಂಭ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಅನಂತ ಹೆಗಡೆ, ಉ.ಕ. ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಶಿವರಾಮ ಹೆಬ್ಬಾರ್ ಜೊತೆಗೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ರವಿವಾರ ಸಾಯಂಕಾಲ ಸನ್ಮಾನ ಮತ್ತು ಸಮಾರೋಪ ಸಮಾರಂಭ ನಡೆಯಲಿದ್ದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಸಮಾರೋಪ ಭಾಷಣ ಮಾಡಲಿದ್ದಾರೆ. ಈ ಸಮಾರಂಭದಲ್ಲಿ 31 ಜನ ಬೆಳೆಗಾರ ಸದಸ್ಯರು ಸನ್ಮಾನಿತರಾಗಲಿದ್ದಾರೆ ಎಂದು ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ತಿಳಿಸಿದ್ದಾರೆ.

