

‘ಪರಿಸರದ ಅಳಿವು ಉಳಿವಿಗೆ ಮನುಷ್ಯನೇ ಕಾರಣ. ಮನುಷ್ಯ ಮನಸ್ಸು ಮಾಡಿದರೆ ಪರಿಸರವನ್ನು ಉಳಿಸಿಕೊಳ್ಳುವುದು ಸಾಧ್ಯವಿದೆ. ಪರಿಸರದ ಕೆಲಸವನ್ನು ನಾವು ಪಕ್ಷಿಗಳಿಂದ ಕಲಿಯಬೇಕು. ಅವು ನಿರಂತರವಾಗಿ ಪ್ರತಿದಿನವೂ ಬೀಜಪ್ರಸಾರ ಮಾಡುವ ಮೂಲಕ ಕಾಡಿನ ಬೆಳವಣಿಗೆಗೆ ಸಹಾಯವಾಗುತ್ತದೆ. ನಾವು ಮನುಷ್ಯರು ವರ್ಷಕ್ಕೊಂದು ಸಲ ಪರಿಸರ ದಿನಾಚರಣೆ ಮಾಡಿ ಕೈತೊಳೆದುಕೊಳ್ಳುತ್ತೇವೆ. ಪಕ್ಷಿಗಳಿಗಿರುವ ಪರಿಸರ ಕಾಳಜಿಯನ್ನು ನಾವು ಮೈಗೂಡಿಸಿಕೊಳ್ಳಬೇಕು’ ಎಂದು ಪಕ್ಷಿವೀಕ್ಷಕ ಪ್ರಸಾದ್ ಹೇಳಿದರು.
ಅವರು ಇಂಡಿಯಾ ಫೌಂಡೇಷನ್ ಫಾರ್ ದಿ ಆಟ್ರ್ಸ ಸಂಸ್ಥೆಯ ಆಶ್ರಯದಲ್ಲಿ ತಾಲೂಕಿನ ಆನಗೋಡ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ‘ಮಕ್ಕಳಿಗಾಗಿ ಎರಡನೇ ಹಂತದ ಪಕ್ಷಿ ವೀಕ್ಷಣೆ ವಿಶೇಷ ತರಬೇತಿ ಕಾರ್ಯಕ್ರಮ’ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
‘ಚಿನ್ನದ ಸೂಜಿ ಅಂತ ಕಣ್ಣಿಗೆ ಚುಚ್ಚಿಕೊಂಡರೆ ನೋವಾಗುವುದು ನಮಗೇ. ಹಾಗಾಗಿ ಇದು ಸರಕಾರದ ಕೆಲಸ ಅಂತ ಕಾಯದೆ ಪ್ರತಿಯೊಬ್ಬರೂ ಪರಿಸರ ರಕ್ಷಣೆಯ ಕೆಲಸ ತಮ್ಮ ಕೈಲಾದ ಮಟ್ಟಿಗೆ ಮಾಡಬೇಕು’ ಎಂದು ಅವರು ಹೇಳಿದರು.
ದೈಹಿಕ ಶಿಕ್ಷಣ ತಾಲೂಕ ಅಧಿಕಾರಿ ರವೀಂದ್ರ ಕಾಪಸೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ‘ಮಕ್ಕಳು ಪಕ್ಷಿವೀಕ್ಷಣೆಯ ಜೊತೆಗೆ ಅವುಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಗೂಗಲ್ ಮೂಲಕ ಸಂಗ್ರಹಿಸಬಹುದು’ ಎಂದು ಅವರು ತಿಳಿಸಿದರು.
ವಿದ್ಯಾರ್ಥಿನಿ ಅಶ್ವಿನಿ ಭಟ್ಟ ಹಾಡಿದ ಸ್ವಾಗತಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮುಖ್ಯಾಧ್ಯಾಪಕ ಸುಧಾಕರ ನಾಯಕ ಸ್ವಾಗತಿಸಿದರು. ಐಎಫ್‍ಏ ಗ್ರ್ಯಾಂಟಿ ಗಣೇಶ ಪಿ. ನಾಡೋರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಸುರೇಶ್ ಕುಮಾರ್(ಬರ್ಡ್ ಸುರೇಶ್), ಹರೀಶ್, ರಾಹುಲ್, ಶಿಕ್ಷಕಿಯರಾದ ಸವಿತಾ ಹೆಗಡೆ, ಪ್ರತಿಭಾ ನಾಯ್ಕ ಉಪಸ್ಥಿತರಿದ್ದರು. ಶಿಕ್ಷಕಿ ಕುಸುಮಾ ನಾಯಕ ವಂದಿಸಿದರು.
ಅದಕ್ಕೂ ಮೊದಲು ಸಂಪನ್ನೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಶಾಲೆಯ ಆಯ್ದ 25 ಮಕ್ಕಳನ್ನು ಕಾಡಿಗೆ ಕರೆದೊಯ್ದು ಪಕ್ಷಿವೀಕ್ಷಣೆಯ ಪಟ್ಟುಗಳನ್ನು ಹೇಳಿಕೊಡಲಾಯಿತು. ಸುರೇಶ್ ಕುಮಾರ್ ಸುಮಾರು 175 ಹಕ್ಕಿಗಳ ಮಾಹಿತಿಯಿರುವ ಬೋಷರ್‍ಗಳನ್ನು ಮಕ್ಕಳಿಗೆ ಉಚಿತವಾಗಿ ಹಂಚಿ, ಪಕ್ಷಿವೀಕ್ಷಣೆಯಲ್ಲಿ ದುರ್ಬೀನು ಬಳಕೆಯ ಕುರಿತು ಮಾಹಿತಿ ನೀಡಿದರು. ಕಾಡಿನಲ್ಲಿ ಪಕ್ಷಿಗಳ ಚಲನವಲನ, ಪಕ್ಷಿಗಳಿಗೂ ಮರಗಳಿಗೂ ಇರುವ ಸಂಬಂಧ, ಪ್ಲಾಸ್ಟಿಕ್‍ನಿಂದಾಗುವ ಹಾನಿ, ಪಕ್ಷಿಗಳು ಹಾಗೂ ಮಾನವನ ಕೃಷಿ ಚಟುವಟಿಕೆಗಳಿಗಿರುವ ಸಂಬಂಧ ಮುಂತಾದ ವಿಷಯವಾಗಿ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.

