

ಸಾಗರಮಾಲಾ ಯೋಜನೆಯ ಕಾರವಾರ ಬಂದರು ಅಭಿವೃದ್ಧಿ ಯೋಜನೆಯ ವಿರೋಧಿ ಹೋರಾಟಗಾರರನ್ನು ಬಂಧಿಸಿದ ಸರ್ಕಾರದ ಕ್ರಮವನ್ನು ಖಂಡಿಸಿರುವ ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ನಾಯ್ಕ ಬಂಧಿತ ಮೀನುಗಾರರನ್ನು ತಕ್ಷಣ ಬಿಡುಗಡೆ ಮಾಡಿ ಈ ಯೋಜನೆ ಕೈಬಿಡಲು ಆಗ್ರಹಿಸಿದ್ದಾರೆ.
ಪತ್ರಿಕಾ ಪ್ರಕಟಣೆಯ ಮೂಲಕ ಈ ಆಗ್ರಹ ಮಾಡಿರುವ ಅವರು ಮತ್ಸ್ಯ ಕ್ಷಾಮ, ಸರ್ಕಾರದ ಯೋಜನೆಗಳಿಗಾಗಿ ಕಡಲು ಆಕ್ರಮಣಗಳಿಂದ ಮೀನುಗಾರರ ಬದುಕು ದುಸ್ತರವಾಗಿದೆ. ಶ್ರಮಜೀವಿಗಳಾದ ಮೀನುಗಾರರ ನೆರವಿಗೆ ಬರಬೇಕಾದ ಸರ್ಕಾರ ಅವರ ಪ್ರತಿಭಟನೆ ಹತ್ತಿಕ್ಕಿ ಬಲಪ್ರಯೋಗದಿಂದ ಅವರ ಸ್ವಾತಂತ್ರ್ಯ ಹರಣಮಾಡುತ್ತಿರುವುದನ್ನು ಖಂಡಿಸುವುದಾಗಿ ಅವರು ವಿವರಿಸಿದ್ದಾರೆ.
ಪರಿಸರದ ಅಳಿವು ಉಳಿವಿಗೆ ಮನುಷ್ಯನೇ ಕಾರಣ: ಪ್ರಸಾದ್
‘ಪರಿಸರದ ಅಳಿವು ಉಳಿವಿಗೆ ಮನುಷ್ಯನೇ ಕಾರಣ. ಮನುಷ್ಯ ಮನಸ್ಸು ಮಾಡಿದರೆ ಪರಿಸರವನ್ನು ಉಳಿಸಿಕೊಳ್ಳುವುದು ಸಾಧ್ಯವಿದೆ. ಪರಿಸರದ ಕೆಲಸವನ್ನು ನಾವು ಪಕ್ಷಿಗಳಿಂದ ಕಲಿಯಬೇಕು. ಅವು ನಿರಂತರವಾಗಿ ಪ್ರತಿದಿನವೂ ಬೀಜಪ್ರಸಾರ ಮಾಡುವ ಮೂಲಕ ಕಾಡಿನ ಬೆಳವಣಿಗೆಗೆ ಸಹಾಯವಾಗುತ್ತದೆ. ನಾವು ಮನುಷ್ಯರು ವರ್ಷಕ್ಕೊಂದು ಸಲ ಪರಿಸರ ದಿನಾಚರಣೆ ಮಾಡಿ ಕೈತೊಳೆದುಕೊಳ್ಳುತ್ತೇವೆ. ಪಕ್ಷಿಗಳಿಗಿರುವ ಪರಿಸರ ಕಾಳಜಿಯನ್ನು ನಾವು ಮೈಗೂಡಿಸಿಕೊಳ್ಳಬೇಕು’ ಎಂದು ಪಕ್ಷಿವೀಕ್ಷಕ ಪ್ರಸಾದ್ ಹೇಳಿದರು.
ಅವರು ಇಂಡಿಯಾ ಫೌಂಡೇಷನ್ ಫಾರ್ ದಿ ಆಟ್ರ್ಸ ಸಂಸ್ಥೆಯ ಆಶ್ರಯದಲ್ಲಿ ತಾಲೂಕಿನ ಆನಗೋಡ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ‘ಮಕ್ಕಳಿಗಾಗಿ ಎರಡನೇ ಹಂತದ ಪಕ್ಷಿ ವೀಕ್ಷಣೆ ವಿಶೇಷ ತರಬೇತಿ ಕಾರ್ಯಕ್ರಮ’ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
