

ಸಾಮಾಜಿಕ, ಆರ್ಥಿಕ ಸಂಕಷ್ಟದ ಕಾಲದಲ್ಲಿ ಸರಳ ಭಾಷೆಯಲ್ಲಿ ಸಾಹಿತ್ಯ ರಚಿಸಿ ಸಮಾಜ ಸುಧಾರಣೆಗೆ ಶ್ರಮಿಸಿದ ಶರಣರ ವಚನಗಳು, ವಚನಗಳ ಆಶಯ ಈಗಲೂ ಪ್ರಸ್ತುತ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‍ರಾವ್ ಹೇಳಿದ್ದಾರೆ.
ಇಲ್ಲಿನ ತಾ.ಪಂ. ಸಭಾಭವನದಲ್ಲಿ ನಡೆದ ಶಿವಯೋಗಿ ಸಿದ್ಧರಾಮೇಶ್ವರ, ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯ ಜಯಂತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯಕವಾಗಿ ಮಹತ್ವದ ದಾಖಲೆಗಳಾದ ವಚನ ಸಂರಕ್ಷಿಸುವ ಕೆಲಸದಲ್ಲಿ ಶರಣರ ಪಾತ್ರ ಮಹತ್ವ ಎಂದು ಈ ಕಾರ್ಯಕ್ರಮದ ಅಧ್ಯಕ್ಷೆ ತಹಸಿಲ್ದಾರ ಮಂಜುಳಾ ಭಜಂತ್ರಿ ಹೇಳಿದರು.
ಅತಿಥಿಗಳಾಗಿದ್ದ ಹೊನ್ನಪ್ಪ ಭೋವಿ ಶುಭಹಾರೈಸಿದರೆ, ಪ.ಪಂ. ಸದಸ್ಯ ನಂದನ್ ಬೋರ್ಕರ್ ಶರಣರ ತತ್ವ ಸಿದ್ಧಾಂತಗಳು ಯುವ ಜನರಿಗೆ ತಿಳಿಯಬೇಕು ಈ ಉದ್ದೇಶದಿಂದ ಆಚರಿಸುವ ಬಸವಾದಿಪ್ರಮಥರ ಜಯಂತಿಗಳಿಗೆ ಮಹತ್ವವಿದೆ ಎಂದರು. ಈ ಮೂವರು ಶರಣರ ಬಗ್ಗೆ ಉಪನ್ಯಾಸ ನೀಡಿದ ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ಆರುನೂರರಿಂದ ಒಂಬೈನೂರು ವರ್ಷಗಳ ಹಿಂದೆ ಜನಪರವಾಗಿ ಕೆಲಸ ಮಾಡಿದ, ವಚನ ರಚಿಸಿದ ಶರಣರ ಮಹತ್ವ ಈ ಕಾಲದಲ್ಲಿ ಹೆಚ್ಚು ಪ್ರಸ್ತುತ ಎಂದರು.
