ಆಧುನಿಕ ಆವಿಷ್ಕಾರಗಳು,ಯಾಂತ್ರಿಕತೆ ಇಲ್ಲದೆ ವ್ಯವಸಾಯ ಸುಲಭವಲ್ಲ ಎನ್ನುವ ವೇದನೆ ನಡುವೆ ರೈತರೇ ತಮ್ಮ ಅಗತ್ಯದ ಸಲಕರಣೆಗಳನ್ನು ತಯಾರಿಸಿಕೊಳ್ಳುತಿದ್ದಾರೆ. ಅಡಿಕೆ ತೆಗೆಯುವ, ಸುಲಿಯುವ, ಒಣಗಿಸುವ ಉಪಕರಣಗಳೊಂದಿಗೆ ಅಡಿಕೆಗೊನೆ ಇಳಿಸುವ ಉಪಕರಣವೊಂದು ಈಗ ಮಲೆನಾಡಿನ ತೋಟಗಳಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿದೆ.
ಹಿಂದೆ ಅಡಿಕೆ ತೆಗೆಯುವ ಕೊನೆಗೌಡ ಗೊನೆ ಕೊಯ್ದು ತನ್ನ ಬಾಲದಂಥ ಹಗ್ಗದ ಮೂಲಕ ನೇರ ಕೊನೆ ಇಳಿಸುತಿದ್ದ ಈಗ ಈ ಕಷ್ಟ ಕಡಿಮೆ ಮಾಡಲು ಮಲೆನಾಡಿನ ರೈತರು ಕೊನೆಗೌಡನ ಅಂಡಿನ ಕಟಕಮಣೆಗೆ ಗಡಗಡೆ ಅಳವಡಿಸಿ ಸುಲಭವಾಗಿ ಕೊನೆ ಇಳಿಸುವ ಸರಳ ತಂತ್ರಜ್ಞಾನಕ್ಕೆ ಮೊರೆಹೋಗಿದ್ದಾರೆ.
ವಾರದ ಓಡಾಟದಲ್ಲಿದ್ದ
ನಮಗೆ ಕಾನಗೋಡಿನ ಪ್ರಭಾಕರ ಡೋಂಗ್ರೆಯವರ ತೋಟದಲ್ಲಿ ಈ ಗಡಗಡಿಯ ಕೊನೆ ಇಳಿಸುವ ಸಾಧನ ಗಮನ ಸೆಳೆಯಿತು. ಅಡಿಕೆ ಕೊನೆ ಹಿಡಿಯುವ ಕಷ್ಟ ಕಡಿಮೆಮಾಡಲು ಮತ್ತು ತೆರೆ ಅಡಿಕೆ ಕಡಿಮೆ ಮಾಡಲು ಈ ಗಡಗಡೆಯ ಸಾಧನ ಬಳಸುತ್ತೇವೆ ಎಂದ ಅವರು.
ಈ ಯಂತ್ರವನ್ನು ಪರಿಚಯಿಸಿದವರು ಕುಶಾಲ್ ಹೆಗಡೆ ಎಂಬುದನ್ನು ಸೇರಿಸುವುದನ್ನು ಮರೆಯಲಿಲ್ಲ.
ಮಲೆನಾಡಿನಂತೆ ಬಯಲು ಸೀಮೆಯಲ್ಲೂ ಈಗ ಅಡಿಕೆ ಬೆಳೆಯುತ್ತಿದೆ. ಆದರೆ ಮಲೆನಾಡು-ಬಯಲುಸೀಮೆ ಸೇರಿ ಎಲ್ಲಾ ಕಡೆ ಅಡಿಕೆ ಸಂಸ್ಕರಿಸುವ ಕುಶಲಕರ್ಮಿಗಳ ಅಭಾವವಿದೆ. ಈ ಅಭಾವವನ್ನು ಎದುರಿಸುವ ಹಿನ್ನೆಲೆಯಲ್ಲಿ ತಯಾರಿಸಿಕೊಂಡ ಈ ಸುಲಭ ಸಾಧನದಿಂದ ಅಡಿಕೆ ಇಳಿಸಲು, ನೆಲದಲ್ಲಿ ಹಿಡಿಯಲು ಸುಲಭ ಎಂದು ಕೃಷಿ ಕಾರ್ಮಿಕರು ತಮ್ಮ ಅನುಭವ ಹಂಚಿಕೊಂಡರು.
ಅಡಿಕೆಮರ ಏರುವ ಗೊನೆ ತೆಗೆಯುವ, ತೆಗೆದ ಕೊನೆಯನ್ನು ನೆಲಕ್ಕಿಳಿಸುವ ಅನುಕೂಲಕ್ಕೆ ರೈತರು ಇಂಥ ಸರಳ, ಸುಲಭ ಸಾಧನಗಳ ಮೊರೆಹೋಗಿದ್ದಾರೆ. ಇಂಥ ಯಂತ್ರಗಳ ಬಳಕೆ ಕೃಷಿಕಾರ್ಮಿಕರ ಶ್ರಮ-ಕಷ್ಟವನ್ನು ಕಡಿಮೆ ಮಾಡಿರುವುದಂತೂ ಸತ್ಯ.