

ಶರಾವತಿ ಅಭಯಾರಣ್ಯಕ್ಕೆ ಜನವಸತಿ ಪ್ರದೇಶ ಸೇರಿಸುವ ಅವೈಜ್ಞಾನಿಕ,ಕಾನೂನುವಿರೋಧಿ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ
ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಜನವಸತಿ ಪ್ರದೇಶಗಳನ್ನು ಹೆಚ್ಚುವರಿಯಾಗಿ ಶರಾವತಿ ಅಭಯಾರಣ್ಯ ವ್ಯಾಪ್ತಿಗೆ ಸೇರಿಸುವ ಸರ್ಕಾರದ ಅವೈಜ್ಞಾನಿಕ ಮತ್ತು ಸಂವಿಧಾನವಿರೋಧಿ ಕ್ರಮವನ್ನು ಕೈಬಿಡಲು ಉತ್ತರಕನ್ನಡ ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ರಾಜ್ಯಪಾಲರಿಗೆ ಮನವಿ ಮಾಡಿದೆ.
ರಾಜ್ಯ ಸರ್ಕಾರವು ಶರಾವತಿ ವನ್ಯಜೀವಿ ಅಭಯಾರಣ್ಯಕ್ಕೆ ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಹೆಚ್ಚುವರಿ 20ಸಾವಿರ ಹೆಕ್ಟೇರ್ ಪ್ರದೇಶವನ್ನು ಸೇರಿಸಿದೆ. ಹೀಗೆ ಜನವಸತಿ ಇರುವ ಪ್ರದೇಶವನ್ನು ನಿಷೇಧಿತ ವನ್ಯಜೀವಿ ಅಭಯಾರಣ್ಯಕ್ಕೆ ಸೇರಿಸಲು ಸಾರ್ವಜನಿಕ ಅಹವಾಲು ಕೇಳಬೇಕು. ಅಭಯಾರಣ್ಯ ವಿಸ್ತರಣೆ ಬಗ್ಗೆ ಜನಜಾಗೃತಿ ಮೂಡಿಸಬೇಕು.ಈ ನಿಯಮಗಳನ್ನು ಪಾಲಿಸದೆ. ಅರಣ್ಯ ಅತಿಕ್ರಮಣದಾರರ ಹಕ್ಕುಗಳನ್ನು ಮನ್ನಿಸದೆ. ಭಾರತೀಯ ನಾಗರಿಕರು ಸ್ವತಂತ್ರವಾಗಿ ಭಯಮುಕ್ತರಾಗಿ ಬದುಕುವ ಸ್ವಾತಂತ್ರ್ಯವನ್ನು ಹರಣ ಮಾಡಿ ಈ ಪ್ರಕ್ರಿಯೆ ನಡೆಸಲಾಗಿದೆ.
ಅಧಿಸೂಚನೆಯಂತೆ ಸಿದ್ಧಾಪುರ ತಾಲೂಕಿನ ನಿಲ್ಕುಂದ, ಮುಳಗುಂದ. ಹಳ್ಳಿಬೈಲ್ ಹುಕ್ಕಳಿ, ಶಿವಳಮನೆ, ಉಂಚಳ್ಳಿ, ನೇರಗೋಡ, ಗಿಜಗುಳಿ, ನೈಗಾರ ಕಡವಾಡ, ಹೊನ್ನೆಕೊಪ್ಪ, ಸೂರಗಾಲ, ಹೇಮಗಾರ್ ಹೆಜ್ಜನಿ, ಕುಡಗುಂದ, ಮಲೆಮನೆ ಸುತ್ತಲಮನೆ, ವಾಜಗೋಡ್, ದಾನಮಾಂವ್, ತೇಳಿಕೇರಿ, ಸೇರಿದ ಅನೇಕ ಗ್ರಾಮಗಳೊಂದಿಗೆ ಉತ್ತರಕನ್ನಡ ಜಿಲ್ಲೆಯ ಇತರ ತಾಲೂಕುಗಳು ಮತ್ತು ಶಿವಮೊಗ್ಗ ಜಿಲ್ಲೆಯ ಕೆಲವು ಪ್ರದೇಶಗಳನ್ನು ಸೇರಿಸಲಾಗಿದೆ.
ಈ ಅವೈಜ್ಞಾನಿಕ, ಕಾನೂನುಬಾಹೀರ ಯೋಜನೆಯಿಂದ ರಾಜ್ಯದ ಜನರು, ಜನಜೀವನಕ್ಕೆ ಅಪಾಯವಿದ್ದು, ಜನವಿರೋಧಿಯಾಗಿರುವ ಈ ಪ್ರಸ್ತಾಪ ಮತ್ತು ಆದೇಶದ ಒಟ್ಟಾರೆ ಪ್ರಕ್ರೀಯೆಯನ್ನು ರದ್ದು ಪಡಿಸಿ ಜನಸಾಮಾನ್ಯರಿಗೆ ನ್ಯಾಯ ದೊರಕಿಸುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನಿರ್ಧೇಶನ ನೀಡಲು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದೇ ಹಿನ್ನೆಲೆಯಲ್ಲಿ ಮಂಗಳವಾರ ತಂಡಾಗುಂಡಿ ಕುಳ್ಳೆಯಲ್ಲಿ ಪ್ರತಿಭಟನಾರ್ಯಾಲಿ ಮತ್ತು ಸಭೆಗಳು ನಡೆದಿವೆ.ಈ ಸಭೆಯಲ್ಲಿ ಶರಾವತಿ ವನ್ಯಜೀವಿ ಅಭಯಾರಣ್ಯದಿಂದ ಉತ್ತರಕನ್ನಡ ಜಿಲ್ಲೆಯ ಜನವಸತಿ ಪ್ರದೇಶಗಳನ್ನು ಹೊರಗಿಡಬೇಕೆಂದು ಒತ್ತಾಯಿಸಲಾಗಿದ್ದು ಇದಕ್ಕಾಗಿ ಜನಾಂದೋಲನ ಮತ್ತು ಕಾನೂನು ಹೋರಾಟಕ್ಕೆ ಅಣಿಯಾಗುವ ಮೊದಲು ಒಂದು ತಿಂಗಳ ಕಾಲಮಿತಿಯಲ್ಲಿ ಈ ಹೆಚ್ಚುವರಿ ಜನವಸತಿ ಪ್ರದೇಶ ಸೇರ್ಪಡೆಯ ಸರ್ಕಾರದ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಲಾಗಿದೆ.




ನ್ಯಾಯಕ್ಕೆ ಜಯ ಸಿಗಲಿ.