

ಸಿದ್ದಾಪುರ
ತಾಲೂಕಿನ ತ್ಯಾಗಲಿ ಗ್ರಾಪಂ ವ್ಯಾಪ್ತಿಯ ಕಲಗದ್ದೆ ಗ್ರಾಮದ ಹನುಮನಜಡ್ಡಿಯ ಮಹಿಳೆಯೊರ್ವರಿಗೆ ಮಂಗನ ಕಾಯಿಲೆ ಇರುವದು ವೈದ್ಯಕೀಯ ಪರೀಕ್ಷೆಯಲ್ಲಿ ಧೃಡಪಟ್ಟಿರುವುದಾಗಿ ತಿಳಿದುಬಂದಿದೆ. ಸುಮಾರು 60 ವರ್ಷ ಪ್ರಾಯದ ಆಕೆಗೆ ಅನಾರೋಗ್ಯ ಕಂಡುಬಂದ ಹಿನ್ನೆಲೆಯಲ್ಲಿ ಶಿರಸಿಯ ಟಿ.ಎಸ್.ಎಸ್.ಆಸ್ಪತ್ರೆಗೆ ದಾಖಲಿಸಿ, ನಂತರದಲ್ಲಿ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆಯಲ್ಲಿ ಮಂಗನಕಾಯಿಲೆ ಲಕ್ಷಣಗಳು ಇರುವುದು ತಿಳಿದುಬಂದಿರುವುದಾಗಿ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಜಾಗೃತಿ ಸಭೆ: ಕಲ್ಗದ್ದೆ ಗ್ರಾಮದ ಮಹಿಳೆಯೊರ್ವರಿಗೆ ಮಂಗನಕಾಯಿಲೆ ಲಕ್ಷಣಗಳು ಧೃಡಪಟ್ಟಿರುವ ಹಿನ್ನೆಲೆಯಲ್ಲಿ ತ್ಯಾಗಲಿ ಗ್ರಾಪಂ ಸಭಾಭವನದಲ್ಲಿ ಸೋಮವಾರ ಸಭೆ ನಡೆಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಕಾಯಿಲೆಯ ನಿಯಂತ್ರಣದ ಕುರಿತು ಚರ್ಚೆ ನಡೆಸಲಾಯಿತು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಮಂಗಳವಾರದಿಂದಲೇ ಆ ಭಾಗದ ಜನರಿಗೆ ಕಾಯಿಲೆ ನಿರೋಧಕ ಲಸಿಕೆ ನೀಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಗ್ರಾಪಂ ಉಪಾಧ್ಯಕ್ಷ ವಸಂತ ಹೆಗಡೆ, ಗ್ರಾಪಂ ಸದಸ್ಯರಾದ ಜ್ಯೋತಿ ಶೆಟ್ಟಿ, ಆರ್.ಆರ್.ಹೆಗಡೆ, ತಾಲೂಕ ವೈದ್ಯಾಧಿಕಾರಿ ಡಾ|ಲಕ್ಷ್ಮಿಕಾಂತ, ಕೆ.ಎಫ್.ಡಿ. ವಿಶೇಷಾಧಿಕಾರಿ ಡಾ|ಸತೀಶ ಶೆಟ್ಟಿ,ಅಭಿವೃದ್ಧಿ ಅಧಿಕಾರಿ ಈರಣ್ಣ ಇಲ್ಲಾಳ, ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮುಖ್ಯಾಧ್ಯಾಪಕರು, ಸ್ಥಳೀಯ ಸೇವಾ ಸಹಕಾರಿ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಮಂಗಳೂರಿನಲ್ಲಿ ತಪ್ಪಿಸಿಕೊಂಡ ಕೋವಿಡ್19 ರೋಗಿಗಾಗಿ ಹುಡುಕಾಟ
ಕರೋನಾ ವೈರಸ್ ಇರುವ ರೋಗಿಯೊಬ್ಬ ಇಂದು ಮಂಗಳೂರಿನ ವೆನ್‍ಲಾಕ್ ಆಸ್ಫತ್ರೆಯಿಂದ ತಪ್ಪಿಸಿಕೊಂಡು ಜನರ ಕುತೂಹಲ ತಲೆಬಿಸಿ ಹೆಚ್ಚಿಸಿದ್ದಾನೆ.
ವಿದೇಶದಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಯನ್ನು ಮಂಗಳೂರು ವಿಮಾನ ನಿಲ್ಧಾಣದಿಂದ ನೇರವಾಗಿ ನಿನ್ನೆ ಸಾಯಂಕಾಲ ವೆನ್‍ಲಾಕ್ ಆಸ್ಫತ್ರೆಗೆ ಕೊಂಡೊಯ್ದು ತಪಾಸಣೆ ನಡೆಸಲಾಯಿತು. ಈ ತಪಾಸಣೆಯಲ್ಲಿ ಈ ವ್ಯಕ್ತಿಗೆ ಕೋವಿಡ್19 ಸೋಂಕು ತಗುಲಿರುವ ಬಗ್ಗೆ ಖಾತ್ರಿಯಾಯಿತು. ರವಿವಾರ ರಾತ್ರಿಯಿಂದ ಚಿಕಿತ್ಸೆ ಪಡೆದ ಈ ವ್ಯಕ್ತಿ ಇಂದು ಬೆಳಿಗ್ಗೆ ನಾಪತ್ತೆಯಾಗಿದ್ದಾನೆ.ಹೀಗೆ ನಾಪತ್ತೆಯಾದ ಕರೋನಾ ರೋಗಿಯ ಪತ್ತೆಗಾಗಿ ಪೊಲೀಸ್ ನೆರವು ಪಡೆಯಲಾಗಿದೆ.

