

ಪಾಚಿಗಳು ಸೃಷ್ಟಿಸುವ ನೀಲಿ
ಬೆಳಕಿನಿಂದ ನೀಲಿಯಾದ ಕಡಲು
ಕಾರವಾರ ಮಾಜಾಳಿ ಕಡಲ ತೀರದಲ್ಲಿ ರಾತ್ರಿ ವೇಳೆ ಸಮುದ್ರ ನೀಲಿಬಣ್ಣಕ್ಕೆ ತಿರುಗುತಿದ್ದು ಸ್ಥಳಿಯರ ಕುತೂಹಲಕ್ಕೆ ಕಾರಣವಾಗಿದೆ. ಸಮುದ್ರದ ನೀರು ಹಗಲು ಮತ್ತು ರಾತ್ರಿವೇಳೆ ತಿಳಿನೀಲಿಯಾಗಿ ಕಾಣುವುದು ಸಾಮಾನ್ಯ. ಆದರೆ ಮಿಂಚುಹುಳು ಸೃಷ್ಟಿಸುವ ನೀಲಿ ಬೆಳಕಿನಂಥ ಬಣ್ಣ ಸಮುದ್ರದಲ್ಲಿ ಕಾಣುವುದರಿಂದ ಸಹಜವಾಗಿ ಕುತೂಹಲ ಹೆಚ್ಚಿದೆ. ಹೀಗೆ ನೀಲಿಬಾನಿನ ರೀತಿ ರಾತ್ರಿಯಲ್ಲಿ ನೀಲಿಕಡಲಾಗಲು ಪಾಚಿಗಳು ಕಾರಣ ಎನ್ನಲಾಗುತ್ತಿದೆ. ಸಮುದ್ರದಲ್ಲಿರುವ ಪಾಚಿಗಳು ಚಲಿಸುತ್ತ ನೀಲಿ ಬಣ್ಣ ಪ್ರಜ್ವಲಿಸುವಂತೆ ಮಾಡುತ್ತವೆ. ಈ ಹಿಂದೆ ಕೂಡಾ ಕೆಲವೆಡೆ ಇಂಥ ನೀಲಿಕಡಲು, ನೀಲಿಯಾದ ಕಡಲ ನೀರಿನ ಬಗ್ಗೆ ಸಂಶೋಧನೆಗಳಾಗಿ ಪಾಚಿಗಳಿಂದಲೇ ನೀಲಿ ಬೆಳಕು ಕಾಣುವಂತಾಗಿ ಸಮುದ್ರದಲ್ಲಿ ನೀಲಿ ಬೆಳಕು ಕಾಣುತ್ತಿದೆ ಎಂದು ಕಡಲಜೀವಶಾಸ್ತ್ರ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಹಕಾರಿ ಪಠ್ಯಕ್ರಮದ ಅಗತ್ಯ ಪ್ರತಿಪಾದನೆ
ಸಿದ್ದಾಪುರ ತಾಲೂಕಿನ ಬಿದ್ರಕಾನ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಸುವರ್ಣಮಹೋತ್ಸವದ ಅಂಗವಾಗಿ ವಿಚಾರ ಗೋಷ್ಠಿ ನಡೆಯಿತು.
ಸಹಕಾರಿ ಸಂಘಗಳಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆ ಕುರಿತು ಕೆಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ ಮಾತನಾಡಿದರು.ಸಹಕಾರಿ ಸಂಘಗಳು ಬಂಡವಾಳಗಾರರ ಸಂಸ್ಥೆ ಅಲ್ಲ. ಬಳಕೆದಾರರ ಸಂಸ್ಥೆ. ಸಹಕಾರಿ ಸಂಘದಲ್ಲಿ ಸಹಕಾರಿ ತತ್ವವನ್ನು ಅರಿತವರು ಇದ್ದರೆ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ಸಂಘದಲ್ಲಿ ಸದಸ್ಯರು ಭಾಗವಹಿಸುವುದು ಮುಖ್ಯ. ಸದಸ್ಯತ್ವ ಪಡೆದವನು ಜವಾಬ್ದಾರಿಯಿಂದ ವ್ಯವಹಾರ ಮಾಡಬೇಕು. ಯಾವುದೇ ಸಹಕಾರಿ ಸಂಘ ವ್ಯಕ್ತಿ ಆಧಾರಿತವಾಗಿರಬಾರದು. ಕಾನೂನು ಚೌಕಟ್ಟಿನಲ್ಲಿ ಇರಬೇಕು. ಸಹಕಾರಿ ಸಂಘಗಳ ಕುರಿತು ಪಠ್ಯವಿಷಯದಲ್ಲಿ ಪಾಠಗಳು ಇದ್ದರೆ ಯುವಕರಿಗೆ ಹೆಚ್ಚಿನ ಜ್ಞಾನ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದರು.

