

ಕೃಷಿ-ಖುಷಿ-
ಕೃಷಿಯಲ್ಲಿ ಸಾಧನೆ ಮಾಡಬೇಕೆಂದು ಬಯಸುವ ವಿರಳ ಯುವಕರಲ್ಲಿ ತಾಲೂಕಿನ ಹೆಮಟೆಮನೆಯ ಎಚ್.ಎಲ್. ವೇಣು ಮತ್ತು ಬೇಡ್ಕಣಿಯ ಜಯಪ್ರಕಾಶ ನಾಯ್ಕ ಪ್ರಮುಖ ಯುವಕರಾಗಿದ್ದಾರೆ.
ವೇಣು ಬಿದ್ರಕಾನ ಹೆಮಟೆಮನೆಯ ಯುವಕ. ಜನಾನುರಾಗಿಯಾಗಿದ್ದ ಇವರ ತಂದೆ ಎಲ್.ಕೆ.ಹೆಗಡೆ ಅಕಾಲಿಕವಾಗಿ ಮರಣ ಹೊಂದಿದ ನಂತರ ಬಿ.ಕಾಂ. ಪದವಿ ನಂತರ ಕೃಷಿಯಲ್ಲಿ ತೊಡಗಿಕೊಂಡರು. ಆಧುನಿಕ ಕೃಷಿ, ಹೊಸಪ್ರಯೋಗ ಎನ್ನದೆ ತಮ್ಮ ತೋಟದಲ್ಲಿ ಹಿಂದಿನಿಂದ ಇದ್ದ ಕಾಫಿ,ಅಡಿಕೆ, ಕಾಳು ಮೆಣಸು ಬೆಳೆಯುತ್ತಾ,ಪಶುಸಂಗೋಪನೆಯಲ್ಲಿಯೂ ಮುಂದುವರಿದರು.
ಪದವಿನಂತರ ಮಹಾನಗರ ಸೇರದೆ ಕುಟುಂಬದ ಜವಾಬ್ಧಾರಿ ಹೊತ್ತ ವೇಣು ಸ್ಥಳಿಯ ಸೇವಾ ಸಹಕಾರಿ ಸಂಘದ ಯುವ ಸದಸ್ಯರಾಗಿ ಸಾಂಪ್ರದಾಯಿಕ ಕೃಷಿ ಮಾಡುತ್ತಾ ಕೃಷಿಯಲ್ಲೇ ಖುಷಿ ಕಂಡಿದ್ದಾರೆ.
ಇವರ ತಂದೆ ಹಿಂದೆ ಕೃಷಿಯೊಂದಿಗೆ ಸ್ಥಳಿಯ ಸಾಮಾಜಿಕ ಜವಾಬ್ಧಾರಿ ನಿರ್ವಹಿಸುತ್ತಲೇ ಧಾರವಾಡದ ಕೆ.ಎಂ.ಎಫ್. ನಿರ್ಧೇಶಕರಾಗಿದ್ದರು. ತಂದೆಯಂತೆಯೇ ಮಗ ವೇಣು ಕೂಡಾ ಕೃಷಿ, ಕೌಟುಂಬಿಕ ಜವಾಬ್ಧಾರಿ, ಸೇವಾ ಸಹಕಾರಿ ಸಂಘ ದ ಮೂಲಕ ಯುವಕರು ಹಳ್ಳಿಯಲ್ಲಿದ್ದೂ ಪೇಟೆಯಲ್ಲಿರುವವರಂತೆಯೇ ಖುಷಿಯಾಗಿ ಸಂತೃಪ್ತ ಜೀವನ ಮಾಡಬಹುದೆನ್ನುವುದಕ್ಕೆ ದೃಷ್ಟಾಂತವಾಗಿದ್ದಾರೆ.
ಜಯಪ್ರಕಾಶ ನಾಯ್ಕ-
ಬೇಡ್ಕಣಿಯ ಜಯಪ್ರಕಾಶ ನಾಯ್ಕ ತಾಲೂಕಿನ ಯುವ ರೇಷ್ಮೆ ಬೆಳೆಗಾರರಾಗಿ ತಾಲೂಕಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇರುವ ಒಂದೆರಡು ಎಕರೆ ಭೂಮಿಯಲ್ಲಿ ರೇಷ್ಮೆ,ಅಡಿಕೆ,ಭತ್ತ ಬೆಳೆಯುತ್ತಿರುವ ಜಯಪ್ರಕಾಶ ಸಾಂಪ್ರದಾಯಿಕ ರೇಷ್ಮೆ ಜೊತೆಗೆ ಹೊಸ ತಳಿ ಪರಿಚಯಿಸುತ್ತಾ ತಾಲೂಕಿನ ಯುವ ಕೃಷಿಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ರೈತ ಕುಟುಂಬದ ಜಯಪ್ರಕಾಶ ಚಿಕ್ಕ ವಯಸ್ಸಿನಲ್ಲಿಯೇ ಕೃಷಿ-ಕೌಟುಂಬಿಕ ಜವಾಬ್ಧಾರಿ ವಹಿಸಿಕೊಂಡವರು. ರೇಷ್ಮೆಯಲ್ಲಿ ಖಾಸಗಿ ಕಂಪನಿಗಳ ಸಹಭಾಗಿತ್ವದ ಯೋಜನೆಯ ಸಿದ್ಧಾಪುರ ತಾಲೂಕಿನ ಪ್ರವರ್ತಕರು. ಕೃಷಿ- ಕುಟುಂಬಗಳ ವೈಯಕ್ತಿಕ ಜವಾಬ್ಧಾರಿಯ ಜೊತೆಗೆ ಬೇಡ್ಕಣಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮೀತಿ ಅಧ್ಯಕ್ಷರಾಗಿ ಕೆಲಸಮಾಡುತ್ತಾ ಶಾಲೆಯನ್ನು ಉತ್ತಮ ಶಾಲೆಯನ್ನಾಗಿಸಲು ಅಳಿಲು ಸೇವೆ ಸಲ್ಲಿಸುತಿದ್ದಾರೆ. ಕೃಷಿ,ವ್ಯಾಪಾರ, ಗ್ರಾಮದ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮೀತಿಯ ಅಧ್ಯಕ್ಷರಾಗಿ ಆಸಕ್ತಿಯಿಂದ ಕೆಲಸಮಾಡುತ್ತಿರುವ ಇವರ ಅಭಿರುಚಿ ಆಸಕ್ತಿಗಳಿಗೆ ಅವರ ಕೃಷಿ ಸಾಧನೆ ಮತ್ತು ಶಾಲೆಯ ವಿಭಿನ್ನ ಪ್ರಯೋಗಗಳೇ ಸಾಕ್ಷಿ.
ಕೃಷಿಯನ್ನು ಆಸಕ್ತಿಯಿಂದ ಮಾಡಿದರೆ ಅದು ಬದುಕುಕೊಡಬಹುದೆಂಬುದಕ್ಕೆ ಬಿದ್ರಕಾನ ವಿ.ಎಸ್.ಎಸ್. ನಿರ್ದೇಶಕ ವೇಣು ಮತ್ತು ಬೇಡ್ಕಣಿ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮೀತಿ ಅಧ್ಯಕ್ಷ ಜಯಪ್ರಕಾಶ ಮಾದರಿ. ಇಂಥ ಯುವಕರು ಇತರರಿಗೂ ಮಾದರಿ ಎಂದರೆ ಅತಿಶಯೋಕ್ತಿಯಲ್ಲ.


