

ಕರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯ, ದೇಶದಾದ್ಯಂತ ಹೈ ಅಲರ್ಟ್ ಘೋಶಿಸಲಾಗಿದೆ. ಭಟ್ಕಳದಲ್ಲಿ ಇಂದು ದೃಢಪಟ್ಟ 2 ಕರೋನಾ ಪ್ರಕರಣಗಳು ಸೇರಿದಂತೆ ಭಟ್ಕಳ ಮೂಲದ ಮೂರು ಜನರಿಗೆ ಈ ವರೆಗೆ ಕರೋನಾ ಪತ್ತೆಯಾಗಿದೆ.
ಈ ಕರೋನಾ ಗಂಭೀರತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಶಕ್ತಿ ಮೀರಿ ಶ್ರಮಿಸುತ್ತಿರುವ ಬಗ್ಗೆ ಯಾರಿಗೂ ಅನುಮಾನಗಳಿಲ್ಲ. ಆದರೆ ಕರೋನಾ ದೃಢಪಟ್ಟ ಭಟ್ಕಳ ಉಪವಿಭಾಗ ಸೇರಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಏಕರೂಪದ ನಿಯಂತ್ರಣಾ ನಿಯಮಗಳು,ತುರ್ತು ಕ್ರಮಗಳು ನಡೆಯದಿರುವ ಪ್ರಸಂಗ ಚರ್ಚೆಯ ವಿಷಯಗಳಾಗಿವೆ.
ಶಿರಸಿಯಲ್ಲಿ ಅಗತ್ಯ ವಸ್ತುಗಳನ್ನು ಮನೆಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡಿರುವ ಮಾಹಿತಿ ಇದೆ. ಬಹುತೇಕ ಕಡೆ ತರಕಾರಿ ಮಾರುಕಟ್ಟೆ, ಮೀನು-ಮಾಂಸದ ಮಾರುಕಟ್ಟೆಗಳನ್ನು ವಿಸ್ತರಣೆ, ವಿಕೇಂದ್ರೀಕರಣ ಮಾಡಿರುವ ಮಾಹಿತಿಗಳಿವೆ. ಆದರೆ ಸಿದ್ಧಾಪುರದಲ್ಲಿ ತರಕಾರಿ ಮಾರುಕಟ್ಟೆ ಮುಚ್ಚಿಸಿರುವುದು, ಅಗತ್ಯ ವಸ್ತುಗಳ ಅಂಗಡಿ-ಮುಂಗಟ್ಟುಗಳನ್ನೂ ಮುಚ್ಚಿಸಿ ಸ್ಥಳಿಯರಿಗೆ ತೊಂದರೆ ಮಾಡಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ.
ಹೊರ ಊರುಗಳಿಂದ ಬರುವವರಿಗೆ ನಿಯಂತ್ರಣವಿಲ್ಲ-
ಭಟ್ಕಳದಲ್ಲಿ ಕರೋನಾ ಸೋಂಕು ಪತ್ತೆಯಾಗುವ ಮೊದಲು ಉತ್ತರ ಕನ್ನಡ ಜಿಲ್ಲೆ,ರಾಜ್ಯ, ದೇಶ, ಅಂತರಾಷ್ಟ್ರೀಯ ಮಟ್ಟದಲ್ಲಿ ವಿಮಾನಯಾನ ಸ್ಥಗಿತಗೊಳಿಸಲಾಗಿದೆ.
ರಾಜ್ಯದಲ್ಲಿ ಕೆಲವೆಡೆ ಲಾಕ್‍ಔಟ್ ಮಾಡಿ ಸಾರಿಗೆ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ಆದರೆ ಸಿದ್ಧಾಪುರ ತಾಲೂಕಿನಾದ್ಯಂತ ವಿದೇಶದಿಂದ ಬಂದಿರುವ ವ್ಯಕ್ತಿಗಳ ಸಂಪೂರ್ಣ ಮಾಹಿತಿ ಇಲ್ಲ. ಈವರೆಗೆ 18 ಜನ ವಿದೇಶಗಳಿಂದ ಮರಳಿರುವ ಅಧೀಕೃತ ಮಾಹಿತಿ ಬಿಟ್ಟರೆ ಉಳಿದವರ ಮಾಹಿತಿ ಲಭ್ಯವಿಲ್ಲ.
ಈ ರಗಳೆಗಳ ನಡುವೆ ಇಂದು ಬೆಳಿಗ್ಗೆ ಸಿದ್ದಾಪುರಕ್ಕೆ ಖಾಸಗಿ ವಾಹನಗಳಲ್ಲಿ ಸಾವಿರಾರು ಜನರು ಬಂದಿಳಿದು ಅವರವರ ಗ್ರಾಮ ಸೇರಿಕೊಂಡಿದ್ದಾರೆ. ಹೀಗೆ ಬಂದಿರುವ ಬಹುತೇಕರು ಕರೋನಾ ಸೋಂಕಿತ ಬೆಂಗಳೂರಿನಿಂದ ಬಂದವರು ಎನ್ನುವ ಮಾಹಿತಿ ಇದೆ.
ಇಂದು ಮುಂಜಾನೆ ಸಮಾಜಮುಖಿ ಪ್ರತಿನಿಧಿ ಸಿದ್ದಾಪುರ ಬಸ್ ನಿಲ್ದಾಣದ ಬಳಿ ತೆರಳಿದಾಗ ಮುಂಜಾನೆ 4-5 ಗಂಟೆಗಳಿಂದ ಹತ್ತಾರು ಖಾಸಗಿ ವಾಹನಗಳಲ್ಲಿ ಸಾವಿರಾರು ಜನರು ಸಿದ್ದಾಪುರಕ್ಕೆ ಬಂದಳಿದ ಮಾಹಿತಿಯನ್ನು ಸ್ಥಳೀಯರು ನೀಡಿದರು.
ಈ ಸಮಯದಲ್ಲಿ ಹೀಗೆ ದೂರದ ಊರುಗಳಿಂದ ಬಂದವರನ್ನು ಪರೀಕ್ಷಿಸುವ ವ್ಯವಸ್ಥೆಯಾಗಲಿ, ಅವರ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕರೋನಾ ಭೀತಿ-ಹಬ್ಬದ ಸಮಯಗಳ ಹಿನ್ನೆಲೆಯಲ್ಲಿ ಪರ ಊರುಗಳಲ್ಲಿದ್ದ ಸಾವಿರಾರು ಜನರು ಪ್ರತಿದಿನ ಈಗ ಸ್ವಗ್ರಾಮ, ಮನೆ ಸೇರಿಕೊಳ್ಳುತ್ತಿರುವ ವಿದ್ಯಮಾನ ಇಲ್ಲಿಯ ಪ್ರತಿದಿನದ ವರ್ತಮಾನ.
ಇವುಗಳ ಬಗ್ಗೆ ನಿಗಾ ವಹಿಸದ ಆಡಳಿತ ಯಂತ್ರ ಜನತಾಕಫ್ರ್ಯೂ ದಿನದಿಂದ ಸ್ಥಳಿಯರ ಓಡಾಟ, ಅಂಗಡಿ ಮುಂಗಟ್ಟುಗಳ ವ್ಯಾಪಾರ, ವಹಿವಾಟಿಗೆ ತಡೆ ಒಡ್ಡುತ್ತಿರುವ ಬಗ್ಗೆ ಸ್ಥಳೀಯರ ವಿರೋಧ ವ್ಯಕ್ತವಾಗಿದೆ.
ಜಿಲ್ಲಾಡಳಿತ ನೀಡುವ ಪ್ರಕಟಣೆ, ವಿಧಿಸುವ ನಿಯಮ ಬೇರೆ ಇಲ್ಲಿಯ ವಾಸ್ತವ, ಅವ್ಯವಸ್ಥೆ ಬೇರೆಯಾಗಿದೆ. ಈ ಬಗ್ಗೆ ಕೇಳುವುದೇ ಅಪರಾಧವಾದರೆ ಮುಂದಿನ ದಿನಗಳಲ್ಲಿ ಎದುರಾಗುವ ಕಷ್ಟ, ಆತಂಕ, ಭೀತಿ- ಭೀಕರತೆ ನಿಭಾಯಿಸುವುದು ಹ್ಯಾಗೆ? ಎನ್ನುವ ಪ್ರಶ್ನೆ ಎಲ್ಲರದ್ದಾಗಿದೆ.
ಉತ್ತರಕನ್ನಡ ಜಿಲ್ಲಾಡಳಿತ ಬಲು ಪ್ರಯಾಸದಿಂದ ಈಗಿನ ಸ್ಥಿತಿ ನಿಭಾಯಿಸುತ್ತಿರುವ ಬಗ್ಗೆ ಎಲ್ಲರಿಗೂ ಮೆಚ್ಚುಗೆ ಇದೆ. ಆದರೆ ಈ ಒತ್ತಡಗಳ ನಡುವೆ ಜನರಿಗಾಗುವ ತೊಂದರೆ, ವೈಜ್ಞಾನಿಕ, ಅಗತ್ಯ ತುರ್ತು ಕ್ರಮಗಳ ಬಗ್ಗೆ ಈವರೆಗೆ ಜನಪ್ರತಿನಿಧಿಗಳು ಸಾರ್ವಜನಿಕರ ನೆರವಿಗೆ ಬಂದಿದ್ದು, ಸ್ಥಳಿಯ ಆಡಳಿತ, ಜಿಲ್ಲಾಡಳಿತಗಳ ನಡುವೆ ಕೊಂಡಿಯಾಗಿ ಕೆಲಸ ಮಾಡಿದ್ದು ಕಂಡುಬರುವುದಿಲ್ಲ. ಮನೆಯಿಂದ ಹೊರಗೆ ಬಂದರೆ ಕರೋನಾ ಭೀತಿ, ಒಳಗಿದ್ದರೆ ಹೊಟ್ಟೆಯ ತಾಪ ಇವುಗಳ ನಡುವೆ ಅಪಾಯರಹಿತ ಸಾರ್ವಜನಿಕ ಜನಜೀವನದ ಬಗ್ಗೆ ಯೋಚಿಸದಿದ್ದರೆ ದಿನದ ದುಡಿಮೆ ಅವಲಂಬಿಸಿ ಬದುಕುವ ಬಡವರನ್ನು ಕೇಳುವವರ್ಯಾರು? ಸರ್ಕಾರ, ಜನಪ್ರತಿನಿಧಿಗಳು ಈ ಬಗ್ಗೆ ಯೋಚಿಸಿ, ಕಾರ್ಯಪ್ರವೃತ್ತರಾಗದಿದ್ದರೆ ಅಪಾಯದ ಅಂಚಿನಲ್ಲಿ ಉಪಾಯ ಹೊಳೆಯುವುದು ದುಸ್ಥರ. ಅಷ್ಟಕ್ಕೂ ಜನಪ್ರತಿನಿಧಿಗಳೂ ಜನಸಾಮಾನ್ಯರಂತೆ ತಮ್ಮ ಮನೆಗಳನ್ನು ಸೇರಿಕೊಂಡರೆ ಆಡಳಿತದ ಸರಿ-ತಪ್ಪು ಕೇಳುವವರ್ಯಾರು? ಚಪ್ಪಾಳೆಯಿಂದ ಕರೋನಾ ಹೋಗುವುದೆಂಬ ಮೂರ್ಖ ನಂಬಿಕೆ, ನಾಟಕಗಳಿಂದ ಜನ ಜೀವಕಳೆದುಕೊಳ್ಳುವ ಅಪಾಯದ ಬಗ್ಗೆ ಜನ ಜಾಗೃತರಾಗಬೇಕಾಗಿದೆ.
ಉತ್ತರ ಕನ್ನಡಕ್ಕೂ ಬಂದ ಕರೋನಾ
ಕರೋನಾ ಭಯ ಹುಟ್ಟಿಸುತ್ತಿರುವಂತೆ ಒಂದರ ಹಿಂದೊಂದು ಪ್ರಕರಣಗಳು ವರದಿಯಾಗುತ್ತಿವೆ. ಉತ್ತರಕನ್ನಡ ಜಿಲ್ಲೆ ಭಟ್ಳಳದ ಇಬ್ಬರಿಗೆ ಕರೋನಾ ಇರುವ ಬಗ್ಗೆ ಉತ್ತರಕನ್ನಡ ಜಿಲ್ಲಾಧಿಕಾರಿಗಳು ಖಚಿತಪಡಿಸಿದ್ದಾರೆ.
ದುಬೈನಿಂದ ಮಾ.21 ರಂದು ಬಂದಿದ್ದ ಈ ವ್ಯಕ್ತಿಗಳಲ್ಲಿ ಒಬ್ಬರು ಮಂಗಳೂರಿನಿಂದ ಬಂದಿದ್ದರೆ, ಇನ್ನೊಬ್ಬರು ರೈಲಿನ ಮೂಲಕ ಭಟ್ಖಳಕ್ಕೆ ಆಗಮಿಸಿದ್ದರು. ಇವರಲ್ಲಿ ಒಬ್ಬರು ಸ್ವಯಂ ಆಸ್ಫತ್ರೆಗೆ ದಾಖಲಾಗಿ ಪರೀಕ್ಷೆಗೆ ಒಳಪಟ್ಟಿದ್ದರೆ,ಇನ್ನೊಬ್ಬರನ್ನು ಆಸ್ಫತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು, ಮುನ್ನೆಚ್ಚರಿಕೆ,ಸೂಕ್ತ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರು ಆತಂಕಿತರಾಗುವ ಅನಿವಾರ್ಯತೆ ಇಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.





