

ಬೆಂಗಳೂರು,ಮಾ.30-ರಾಜ್ಯ ದೇಶದಲ್ಲಿ ವಿದೇಶದಿಂದ ಬಂದವರಿಗೆ ಹೆಬ್ಬಾಗಿಲು ತೆಗೆದು ಈಗ ಇಡೀ ಭಾರತವನ್ನು ಬಂಧಿಸಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಗತ್ಯ, ಅನಿವಾರ್ಯತೆ ಬಿಟ್ಟು ಉಳಿದದ್ದನ್ನಷ್ಟೇ ಮಾಡುತ್ತಿವೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತಿವೆ.
ಉತ್ತರಕನ್ನಡ ಜಿಲ್ಲೆಯ ಶಿರಸಿ,ದಾಂಡೇಲಿ, ಭಟ್ಕಳಗಳಲ್ಲಿ ದ್ರೋಣ್ ಕಣ್ಗಾವಲಿಟ್ಟಿರುವ ಪೊಲೀಸ್ ಇಲಾಖೆ ವೃಥಾ ಓಡಾಡುವವರನ್ನು ನಿಲ್ಲಿಸಿ ನಾವು ಲಾಕ್‍ಡೌನ್ ಉದ್ಧೇಶ ಉಲ್ಲಂಘಿಸಿದ್ದೇವೆ ಎಂದು ಫಲಕ ಹಿಡಿಸಿ ಪ್ರಾಯಶ್ಚಿತ್ತ ಮಾಡುತಿದ್ದಾರೆ. ಈ ಕ್ರಮದ ಬಗ್ಗೆ ಯಾರಿಗೂ ತಕರಾರಿರಲಿಕ್ಕಿಲ್ಲ. ಆದರೆ ಆರೋಗ್ಯ ಇಲಾಖೆಯ ಕೆಳಹಂತದ ಸಿಬ್ಬಂದಿಗಳಿಗೆ ಮಾಸ್ಕ್, ಸೆನಿಟೈಸರ್, ಪಾಸ್ ಸೇರಿದಂತೆ ಅವಶ್ಯ ಅನುಕೂಲಗಳನ್ನು ಮಾಡದೆ ಶೋಷಣೆ ಮಾಡುತ್ತಿರುವ ಬಗ್ಗೆ ವಿರೋಧ ವ್ಯಕ್ತವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರೆಯರು, ಅಂಗನವಾಡಿ ಕಾರ್ಯಕರ್ತೆಯರು ಉತ್ತಮ ಸೇವೆ ನೀಡುತಿದ್ದಾರೆ. ಆದರೆ ಇವರಿಗೆ ಅಗತ್ಯ ಸುರಕ್ಷತಾ ಸಲಕರಣೆಗಳೂ ಇಲ್ಲ, ಕೇಂದ್ರ ಪ್ರಕಟಿಸಿರುವ ವಿಮಾ ಅನುಕೂಲಗಳೂ ಇಲ್ಲ ಎನ್ನುವ ಆಕ್ಷೇಪ ವ್ಯಕ್ತವಾಗಿದೆ.
ಈ ಬಗ್ಗೆ ಸಮಾಜಮುಖಿಗೆ ಮಾಹಿತಿ ನೀಡಿರುವ ಕಾರ್ಮಿಕ ಮುಖಂಡೆ ಯಮುನಾ ಗಾಂವಕರ್. ಆರೋಗ್ಯ ಇಲಾಖೆಯ ಆಶಾಗಳು, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಮಟ್ಟದಲ್ಲಿ ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆಯ ಕೆಲಸಗಳನ್ನೂ ಮಾಡುತಿದ್ದಾರೆ ಆದರೆ ಅವರಿಗೆ ಸುರಕ್ಷತಾ ಅನುಕೂಲಗಳನ್ನು ಕೊಡದೆ, ವಿಮಾ ಅನುಕೂಲಗಳನ್ನೂ ದೊರಕಿಸದೆ ಸರ್ಕಾರವೇ ಶೋಷಣೆ, ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉಳ್ಳವರಿಗೊಂದು, ಇಲ್ಲದವರಿಗೊಂದು. ಹಿರಿಯ ಅಧಿಕಾರಿಗಳಿಗೊಂದು ಕೆಳಹಂತದ ಶ್ರಮಿಕ ಉದ್ಯೋಗಿಗಳಿಗೊಂದು ನ್ಯಾಯ ಎನ್ನುವ ತಾರತಮ್ಯ ಮಾಡುತ್ತಿವೆ. ಈ ಬಗ್ಗೆ ಯಾರೂ ಮಾತನಾಡದಿರುವುದುಆಶ್ಚರ್ಯ ಎಂದಿದ್ದಾರೆ. ಸಂಘಟನಾ ಶಕ್ತಿ, ಇತರ ಅನುಕೂಲ, ಅವಕಾಶಗಳಿಲ್ಲದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರಿಗೆ ಸರ್ಕಾರ ಮಾಡುತ್ತಿರುವ ತಾರತಮ್ಯ ಜನಸಾಮಾನ್ಯರ ವಿರೋಧಕ್ಕೂ ಕಾರಣವಾಗಿದೆ.


