


ಉತ್ತರ ಕನ್ನಡ (ಸಿದ್ದಾಪುರ,ಏ.5)
ಜಿಲ್ಲೆಯಲ್ಲಿ ಮಂಗನ ಕಾಯಿಲೆ ತೀವೃವಾಗಿ ಹರಡಿದ್ದು ಇದರಿಂದ ಈಗಾಗಲೇ ಸಿದ್ದಾಪುರ ತಾಲೂಕಿನ ಆರು ಜನ ಸಾವನ್ನಪ್ಪಿದ್ದು ಅವರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 2ಲಕ್ಷ ರೂ ಪರಿಹಾರ ನೀಡುವಂತೆ ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರಬರೆದಿದ್ದಾರೆ.
ಮಂಗನಕಾಯಿಲೆಯಿಂದ ಮೃತಪಟ್ಟ ಹನುಮಿ ದ್ಯಾವಪ್ಪ ಹಸ್ಲರ್ ಬಾಳಗೋಡ,ಗಣಪತಿ ದ್ಯಾವ ಹಸ್ಲರ್ ವಂದಾನೆ,ಈಶ್ವರ ಮಾರ್ಯ ನಾಯ್ಕ ಐಸೂರು,ಶ್ರೀಧರ ಸಣ್ಯಾ ಹಸ್ಲರ್ ಬಾಳಗೋಡ ನಗ್ಗುಬೈಲ್,ಲಕ್ಷ್ಮೀ ಲಿಂಗಾ ನಾಯ್ಕ ಕಾನಳ್ಳಿ ಹಾಗೂ ಭಾಸ್ಕರ ಗಣಪತಿ ಹೆಗಡೆ ಮಳಗುಳಿ ಇವರೆಲ್ಲರೂ ತುಂಬ ಬಡತನ ಕುಟುಂಬದಿಂದ ಬಂದಿದ್ದು ಆರ್ಥಿಕವಾಗಿ ಹಿಂದುಳಿದಿದ್ದಾರೆ.ಈ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ನೀಡಬೇಕು.
ಅಲ್ಲದೇ ಶಿವಮೊಗ್ಗ ಜಿಲ್ಲೆಯಲ್ಲಿನ ಮಂಗನ ಕಾಯಿಲೆ ಪೀಡಿತರಿಗೆ ಮಣಿಪಾಲಿನ ಕೆಎಂಸಿ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ನೀಡಿ ಆದೇಶ ಹೊರಡಿಸಿದಂತೆ ಈ ಸೌಲಭ್ಯವನ್ನು ಉತ್ತರ ಕನ್ನಡ ಜಿಲ್ಲೆಗೂ ವಿಸ್ತರಿಸಿಕೊಡಲು ಸೂಕ್ತ ಕ್ರಮಕೈಗೊಳ್ಳುವಂತೆ ಆರ್.ವಿ.ದೇಶಪಾಂಡೆ ಪತ್ರದಲ್ಲಿ ತಿಳಿಸಿದ್ದಾರೆ.
