

ಉತ್ತರಕನ್ನಡ ಜಿಲ್ಲೆಯಲ್ಲಿ ಲಾಕ್‍ಔಟ್ ನಿಂದ ತೊಂದರೆಯಾಗಿ ರೈತರ ಬೆಳೆ ಬೆಳೆದಲ್ಲೇ ನಾಶವಾಗುತ್ತಿದೆ. ಲಾಕ್ ಔಟ್- ನಿಶೇಧಾಜ್ಞೆ ತೊಂದರೆಯ ಲಾಭ ಪಡೆದು ಅರಣ್ಯ ಇಲಾಖೆಯ ಅಧಿಕಾರಿಗಳು ರೈತರನ್ನು ಹಿಂಸಿಸುತಿದ್ದಾರೆ. ಆದರೆ ನಮ್ಮ ಜನಪ್ರತಿನಿಧಿಗಳು ಈ ತೊಂದರೆಗಳ ಬಗ್ಗೆ ಗಮನಹರಿಸದೆ ವೈಯಕ್ತಿಯ ಹಿತಕ್ಕಾಗಿ ಬಿಲಸೇರಿದ್ದಾರೆ ಎಂದು ಕೆಲವರು ಆರೋಪಿಸಿದ್ದು ಇಂಥ ಜನಪ್ರತಿನಿಧಿಗಳಿಂದಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ದೂರಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕುಮಟಾದ ಗೋಕರ್ಣ,ಸಿದ್ದಾಪುರದ ಅಕ್ಕುಂಜಿ, ಗೋಳಗೋಡು, ಅಂಕೋಲಾ ಸೇರಿದಂತೆ ಅನೇಕ ಕಡೆ ತರಕಾರಿ,ಕಲ್ಲಂಗಡಿ ಹಣ್ಣುಗಳನ್ನು ಬೆಳೆದು ಮಾರಲಾಗದೆ ಹಾನಿ ಅನುಭವಿಸಿದ್ದಾರೆ. ಜಿಲ್ಲೆಯ ಅನಾನಸ್, ಬಾಳೆ, ಪಪ್ಪಾಯಿ, ಕಲ್ಲಂಗಡಿ ಬೆಳೆಗಾರರು ಹಾನಿ ಅನುಭವಿಸಿ ಆತ್ಮಹತ್ಯೆಯ ದಾರಿ ಹಿಡಿಯುವಂತಾಗಿದೆ. ಈ ಸಮಯದಲ್ಲಿ ಪರಿಸ್ಥಿತಿಯ ಲಾಭ ಪಡೆದು ಜಿಲ್ಲೆಯ ಪೊಲೀಸ್, ಅರಣ್ಯ ಇಲಾಖೆಯ ಅಧಿಕಾರಿಗಳು ಬಡರೈತರನ್ನು ಹಿಂಸಿಸುತಿದ್ದಾರೆ. ಈ ಸಮಯದಲ್ಲಿ ಜಿಲ್ಲೆಯ ಜನರ ನೆರವಿಗೆ ಬರಬೇಕಾದ ಸಭಾಧ್ಯಕ್ಷರು, ಸಂಸದರು, ಶಾಸಕರು ಹೇಡಿಗಳಂತೆ ಬಿಲಸೇರಿದ್ದಾರೆ.
ವೈದ್ಯಕೀಯ ತುರ್ತುಪರಿಸ್ಥಿತಿಯ ನೆಪದಲ್ಲಿ ಜಿಲ್ಲೆಯಲ್ಲಿ ಅಧಿಕಾರಿಗಳ ಅಟ್ಟಹಾಸ ನಡೆಯುತ್ತಿದೆ. ಈ ಬಗ್ಗೆ ಜನಸಾಮಾನ್ಯರ ಪರವಾಗಿ ಮಾತನಾಡಬೇಕಾದ ವಿರೋಧ ಪಕ್ಷಗಳೂ ಮೌನವೃತ ಪ್ರಾರಂಭಿಸಿವೆ ಈ ಬಗ್ಗೆ ಜನರೇ ಬಂಡೇಳುವ ಮೊದಲು ಸರ್ಕಾರ ಜನಸಾಮಾನ್ಯರ ಸಂಕಷ್ಟ ಕೇಳಬೇಕು ಎಂದು ಹೆಸರುಹೇಳಲಿಚ್ಛಿಸದ ಕೆಲವರು ಆಗ್ರಹಿಸಿದ್ದಾರೆ.
ಈ ಸಮಸ್ಯೆಗಳ ಬಗ್ಗೆ ಕೆಲವು ಮುಖಂಡರ ಪರವಾಗಿ ಮಾತನಾಡಿದ ರಾಜ್ಯ ರೈತಸಂಘದ ಸಿದ್ದಾಪುರ ತಾಲೂಕಾಧ್ಯಕ್ಷ ವೀರಭದ್ರನಾಯ್ಕ ಮಳಲವಳ್ಳಿ ಉತ್ತರಕನ್ನಡ ಜಿಲ್ಲೆಯಲ್ಲಿ ಆಡಳಿತ ಪಕ್ಷ, ಜನಪ್ರತಿನಿಧಿಗಳು, ವಿರೋಧಪಕ್ಷಗಳ ಬೇಜವಾಬ್ದಾರಿಯಿಂದ ರೈತರು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಕ್ಕಿದ್ದಾರೆ. ಈ ಪರಿಸ್ಥಿತಿಯ ಲಾಭ ಪಡೆದು ಅರಣ್ಯ ಇಲಾಖೆಯ ಅಧಿಕಾರಿಗಳು ರೈತರನ್ನು ಹಿಂಸಿಸುತಿದ್ದಾರೆ, ಜನರು ದಂಗೆ ಏಳುವ ಮೊದಲು ಸರ್ಕಾರ ಈ ಅಧಿಕಾರಿಗಳ ಅಟ್ಟಹಾಸ ನಿಲ್ಲಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಿದ್ದಾಪುರ
ಜಿಲ್ಲೆಯಲ್ಲಿ ಮಂಗನ ಕಾಯಿಲೆ ತೀವೃವಾಗಿ ಹರಡಿದ್ದು ಇದರಿಂದ ಈಗಾಗಲೇ ಸಿದ್ದಾಪುರ ತಾಲೂಕಿನ ಆರು ಜನ ಸಾವನ್ನಪ್ಪಿದ್ದು ಅವರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 2ಲಕ್ಷ ರೂ ಪರಿಹಾರ ನೀಡುವಂತೆ ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರಬರೆದಿದ್ದಾರೆ.





