
ನಿಮ್ಮ ಆತ್ಮಗೌರವಕ್ಕೊಂದು ಪ್ರಶ್ನೆ..
ದೃಶ್ಯ ಮಾದ್ಯಮದ ಮಿತ್ರರೆ,
ಈಗ 9 ಗಂಟೆ, 9 ನಿಮಿಷ ಆಗಿದೆ, ನಿಮ್ಮ ಅವರ್ಣನೀಯ ಸಂಭ್ರಮ ನೋಡುತಿದ್ದೇನೆ!
ಇದೇ ಸಂಧರ್ಭದಲ್ಲಿ ಕರೋನಾದ ಈಗಿನ ಸ್ಥಿತಿ ಯನ್ನೂ ನೋಡುತಿದ್ದೇನೆ. ನೀವು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲೇ ಇಂದು ಕರೋನಾ ಸೋಂಕಿತರ ಸಂಖ್ಯೆ ಹಿಂದೆಂದಿಗಿಂತಲೂ 440 ಏರಿಕೆಯಾಗಿದೆ. ಸತ್ತವರ ಸಂಖ್ಯೆ ಹಿಂದೆಲ್ಲಾ ದಿನಗಳಿಗಿಂತಲೂ ಹೆಚ್ಚಾಗಿ 18ಕ್ಕೆ ಏರಿದೆ!! ಈ ವಾಸ್ತವವನ್ನು ಕಂಡ ಮೇಲೆ ಯಾವ ಪುರುಶಾರ್ಥಕ್ಕಾಗಿ ಈ ನಿಮ್ಮ ಸಂಭ್ರಮ?
ನಿಮಗೆ ಕೇಂದ್ರ ಸರ್ಕಾರದಿಂದ ಒಂದಷ್ಟು ಪ್ಯಾಕೇಜ್ ಸಿಕ್ಕಿರಬಹುದು, ಅಂದ ಮಾತ್ರಕ್ಕೆ ನಿಮ್ಮ ನಿಮ್ಮ ಆತ್ಮಗೌರವಗಳನ್ನು ಮಾರಿಕೊಳ್ಳುತಿದ್ದೀರಲ್ಲ!?
“ಈವರೆಗೂ ಕೊರೋನಾ ನಿಯಂತ್ರಿಸಲು ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದ್ದೀರ..?” ಎಂದು ಒಂದೇ ಒಂದು ಪ್ರಶ್ನೆಯನ್ನು ಸರ್ಕಾರಕ್ಕೆ ಕೇಳಿದ್ದೀರ..?
ಮಕ್ಕಳನ್ನು ಭುಜದ ಮೇಲೆ ಕೂರಿಸಿಕೊಂಡು, ಬೆಂಕಿಯಂತ ಸುಡು ಬಿಸಿಲಲ್ಲಿ ಅನ್ನ ನೀರಿಲ್ಲದೆ ನೂರಾರು ಮೈಲಿ ದೂರದಿಂದ ನಡೆಯುತ್ತಿರುವ ನಮ್ಮ ಕೂಲಿಕಾರರಿಗೆ ಸರ್ಕಾರ ಏನು ಮಾಡಿದೆ..? ಎಂಬ ಸಣ್ಣ ಪ್ರಶ್ನೆಯನ್ನು ಸರ್ಕಾರಕ್ಕೆ ಕೇಳಿದ್ದೀರ. ಅನ್ನವಿಲ್ಲದೆ ಸಾಯುತ್ತಿರುವ ಆದಿವಾಸಿ, ಅಲೆಮಾರಿ, ದಲಿತರಿಗೆ ಅನ್ನ ಏಕೆ ಕೊಡಲಿಲ್ಲ? ಎಂಬ ಪ್ರಶ್ನೆಯನ್ನು ಇದುವರೆಗೂ ಸರ್ಕಾರವನ್ನು ಕೇಳಿದ್ದೀರ? ಈ ಎಲ್ಲಾ ಸಮಸ್ಯೆಗಳನ್ನಿಟ್ಟುಕೊಂಡು ಪ್ರಧಾನಮಂತ್ರಿ ಯಾಕೆ ಜನರೊಂದಿಗೆ ಮಾತಾಡುತ್ತಿಲ್ಲ? ಎಂಬ ಸಣ್ಣ ಪ್ರಶ್ನೆಯೊಂದನ್ನು ಈ ದೇಶದ ಆಡಳಿತಾರೂಡ ನಾಯಕರನ್ನು ಕೇಳಿದ್ದೀರ?
ಈ ಎಲ್ಲಾ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಸರ್ಕಾರದಲ್ಲಿರುವವರು ಈ ದೇಶದ ಮುಗ್ದಜನರಿಗೆ ಭಾವನಾತ್ಮಕವಾದ ಒಂದು ಕರೆಯನ್ನು ಕೊಟ್ಟರೆ, ಏನನ್ನೂ ಪ್ರಶ್ನಿಸದಂತೆ ಸರ್ಕಾರದ ಪರ ನಿಂತು ನಿಮ್ಮ ಸ್ವಾರ್ಥಕ್ಕಾಗಿ ಸರ್ಕಾರದ ಪರ ಡಂಗುರ ಹೊಡೆಯುವ ಈ ಹೇಯ ಕೆಲಸಕ್ಕಿಳಿದಿದ್ದೀರಲ್ಲ! ಪತ್ರಿಕೋದ್ಯಮದ ಕನಿಷ್ಟ ಎಥಿಕ್ಸ್ ಅಥವಾ ನೈತಿಕತೆ ನಿಮಗಿದೆಯೇ?
ನನ್ನ ದೇಶದ ಪತ್ರಿಕೋದ್ಯಮ ಇಷ್ಟು ಕೆಳಮಟ್ಟಕ್ಕಿಳಿಯುತ್ತದೆಂದು ನಾನು ಕನಸುಮನಸಿನಲ್ಲೂ ಭಾವಿಸಿರಲಿಲ್ಲ..
ಖಂಡಿತ ದೀಪ ಹಚ್ಚೋಣ.. ಈ ದೇಶದಲ್ಲಿ ಕರೋನಾದಿಂದಾಗಿ ಒಂದೇ ಒಂದು ಸಾವು ಇಲ್ಲದಾದಾಗ, ಒಬ್ಬೇ ಒಬ್ಬ ಕರೋನ ಸೋಂಕಿತನೂ ಇಲ್ಲವಾದಾಗ, ಈ ದೇಶದ ಕಡುಬಡವರಿಗೆ ಅನ್ನ ಸಿಕ್ಕಾಗ… ಇಡೀ ದೇಶವೇ ಬೆಳಗುವಂತೆ ದೀಪಗಳನ್ನು ಹಚ್ಚೋಣ, ಈ ನಮ್ಮ ಪ್ರೀತಿಯ ದೇಶವನ್ನು ಬೆಳಕಿನ ಭಾರತವಾಗಿ ನೋಡಿ ಕಣ್ಣು ತುಂಬಿಸಿಕೊಳ್ಳೋಣ..
-ಸಿ.ಎಸ್.ದ್ವಾರಕಾನಾಥ್
