

ಪ್ರಜಾವಾಣಿಯ ಇಂದಿನ ಸಂಚಿಕೆಯಲ್ಲಿ ‘ದ್ವೇಷದ ಉರಿ ನಂಜಿನ ಮಾತು ಆಡುವವರನ್ನು’ ಎಚ್ಚರಿಸುವ, ಖಂಡಿಸುವ ಒಂದು ವಿವೇಕಪೂರ್ಣ ಸಂಪಾದಕೀಯ ಇದೆ. ಆದರೆ ಪತ್ರಿಕೆಯ ವೆಬ್ ಸೈಟ್ ನಲ್ಲಿ ಸದಾ ಕೋಮುದ್ವೇಷದ ನಂಜನ್ನೇ ಕಾರುತ್ತಿರುವ ಸಂಸದ ಅನಂತಕುಮಾರ ಹೆಗಡೆಯವರು ಬರೆದಿರುವ ಲೇಖನವನ್ನು ಪ್ರಕಟಿಸಲಾಗಿದೆ.

ಇದು ಕೋಮುದ್ವೇಷವನ್ನು ಪ್ರಚೋದಿಸುವ ನೇರವಾಗಿ ಇಸ್ಲಾಮ್ ಧರ್ಮಕ್ಕೂ ಕೊರೊನಾ ವೈರಸ್ ಮತ್ತು ಭಯೋತ್ಪಾದನೆಗೂ ಸಂಬಂಧ ಕಲ್ಪಿಸುವ ಸುದೀರ್ಘ ಲೇಖನ.ಅದರ ಒಂದು ಸಾಲು ಹೀಗಿದೆ: ‘’..ಒಂದರ್ಥದಲ್ಲಿ ವೇಗವಾಗಿ ವೃದ್ಧಿಗೊಳ್ಳುವ ಜಗತ್ತಿನಾದ್ಯಂತ ತನ್ನ ಕರಾಳ ಹಸ್ತವನ್ನು ಪಸರಿಸುತ್ತಾ ಮಾರಣಹೋಮ ಎಸಗುತ್ತಿರುವ ಕೊರೊನಾ ವೈರಸ್ ಮತ್ತು ಜಗತ್ತಿನಾದ್ಯಂತ ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳ ಮೂಲಕ ಮನುಕುಲಕ್ಕೆ ಗಂಡಾಂತರ ತಂದೊಡ್ಡುತ್ತಿರುವ ಇಸ್ಲಾಮ್ ಧರ್ಮ- ಈ ಎರಡಕ್ಕೂ ಒಂದು ರೀತಿಯ ಹೋಲಿಕೆ ಇದೆ…’’
ಇದು ಯತ್ನಾಳ್, ಶೋಭಾ ಕರಂದ್ಲಾಜೆ ಮತ್ತು ರೇಣುಕಾಚಾರ್ಯ ಅವರ ಹೇಳಿಕೆಗಿಂತಲೂ ಗಂಭೀರ ಸ್ವರೂಪದ ಕೋಮುದ್ವೇಷ ಪ್ರಚೋದನೆಯ ಲೇಖನ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನುಡಿದಂತೆ ನಡೆಯುವವರಾಗಿದ್ದರೆ ಮೊದಲು ಈ ಲೇಖಕನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು. (ಕನಿಷ್ಠ ಇದರಿಂದ ಅವರಿಗೆ ಹುಟ್ಟಿಕೊಂಡಿರುವ ಹೊಸ ಅಭಿಮಾನಿಗಳು ಅನುಭವಿಸುತ್ತಿರುವ ಮುಜುಗರ ಸ್ವಲ್ಪ ಕಡಿಮೆಯಾದೀತು)ಆಶ್ಚರ್ಯವೆಂದರೆ, ನಂಜು ಕಾರುವ ಹೇಳಿಕೆಗಳನ್ನು ಖಂಡಿಸಿ ಸಂಪಾದಕೀಯ ಬರೆದ ಪತ್ರಿಕೆಯ ವೆಬ್ ಮುಖ್ಯಸ್ಥರೇ ಆಸಕ್ತಿ ವಹಿಸಿ ಹೆಗಡೆ ತನ್ನ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ಲೇಖನವನ್ನು ಪ್ರಕಟಿಸಿರುವುದು. ಪತ್ರಿಕೆಯ ಸಂಪಾದಕೀಯ ನೀತಿಗೆ ಈ ಮಹಾಶಯ ಅತೀತನೇ?
ಇಂತಹವರ ಮೇಲೆ ಮುಖ್ಯಮಂತ್ರಿಗಳು ಏನು ಕ್ರಮಕೈಗೊಳ್ಳುತ್ತಾರೋ ಗೊತ್ತಿಲ್ಲ, ಆದರೆ ದಿಟ್ಟತನದ ಸಂಪಾದಕೀಯ ಬರೆದ ಸಂಪಾದಕರಾದರೂ ಕ್ರಮಕೈಗೊಳ್ಳಬೇಕು.(ಇದನ್ನು ಖಾಸಗಿಯಾಗಿ ಪ್ರಜಾವಾಣಿ ಪತ್ರಿಕೆಯ ಸಂಪಾದಕರಿಗೆ ಪತ್ರ ಬರೆದು ತಿಳಿಸುವ ಅಂತಿದ್ದೆ. ಆದರೆ ಇದು ಉಳಿದ ಪತ್ರಿಕೆ-ಚಾನೆಲ್ ನವರೂ ಜಾಗೃತಗೊಳ್ಳಲು ನೆರವಾಗಲಿ ಎಂದು ಬಹಿರಂಗವಾಗಿಯೇ ಬರೆದಿದ್ದೇನೆ)
-ದಿನೇಶ್ ಅಮ್ಮಿನಮಟ್ಟು
