

ವಿಶ್ವದಲ್ಲಿ ಅಜಮಾಸು 1 ಲಕ್ಷ ಜನರನ್ನು ಬಲಿ ತೆಗೆದುಕೊಂಡ ಕರೋನಾ ಇಂದಿಗೆ ನೂರು ದಿವಸಗಳನ್ನು ಪೂರೈಸಿದೆ. ಈ ಕೋವಿಡ್19 ದುಷ್ಪರಿಣಾಮಗಳಿಂದಾಗಿ ರಾಜ್ಯದಲ್ಲಿ ಲಾಕ್ಡೌನ್ ಅವಧಿ ಏ.30 ರ ವರೆಗೆ ವಿಸ್ತರಣೆಯಾಗಿದೆ. ರಾಜ್ಯದಲ್ಲಿ ಈ ವರೆಗೆ 219 ಜನರು ಕರೋನಾ ಸೋಂಕು ಪೀಡಿತರಾಗಿದ್ದರೆ, 39 ಜನರು ಗುಣಮುಖರಾಗಿದ್ದಾರೆ.
ಕೋವಿಡ್ 19 ಈ ಸಾವು-ನೋವುಗಳಿಗೆ ಕಾರಣವಾಗಿದ್ದರೆ ಈ ವರ್ಷ ಮಂಗನಕಾಯಿಲೆ ರಾಜ್ಯದಲ್ಲಿ ಈವರೆಗೆ ಮೂರು ಜನರನ್ನು ಬಲಿ ಪಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ, ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಗ್ರಾಮೀಣ ಕೃಷಿಕರನ್ನು ಸಾಯಿಸುತ್ತಿರುವ ಮಂಗನಕಾಯಿಲೆಗೆ ಸಿದ್ದಾಪುರದ ನಾಲ್ಕುವರ್ಷದ ಬಾಲಕನಲ್ಲಿ ಇಂದು ಧೃಡಪಟ್ಟಿರುವುದು ಆತಂಕವನ್ನುಂಟುಮಾಡಿದೆ.


ಈವರೆಗೆ ಸಿದ್ಧಾಪುರದ ಒಟ್ಟೂ 23 ಜನರಿಗೆ ಮಂಗನಕಾಯಿಲೆ ದೃಢಪಟ್ಟಿದ್ದು ಅವರಲ್ಲಿ 16 ಜನರು ಗುಣಮುಖರಾಗಿದ್ದಾರೆ.ವಿಶ್ವದಾದ್ಯಂತ ಕರೋನಾ ಸಾವು-ನೋವುಗಳಿಗೆ ಜನರು ಮಿಡಿಯುತಿದ್ದರೆ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಜನತೆ ಕರೋನಾ ಭಯದೊಂದಿಗೆ ಮಂಗನಕಾಯಿಲೆ ರೋಗಕ್ಕೆ ಬೇಯುವಂತಾಗಿದೆ. ಈ ನಡುವೆ ಮಲೆನಾಡಿನ ಕೆಲವು ಭಾಗದಲ್ಲಿ ಶುಕ್ರವಾರ ಸುರಿದ ಮಳೆ ಆತಂಕ ಹೆಚ್ಚಿಸಿದೆ. ಈ ಮಳೆಯ ಪರಿಣಾಮ ಸಿದ್ದಾಪುರದ ಹಾರ್ಸಿಕಟ್ಟಾದಲ್ಲಿ ಸ್ಥಳಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ಕಟ್ಟಡದ ಮೇಲ್ಛಾವಣಿ ಕಿತ್ತು ಹಾನಿಯಾಗಿದೆ. ಬಿರು ಬೇಸಿಗೆಯಲ್ಲಿ ಸುರಿದ ಮಳೆ ಏಕಕಾಲದಲ್ಲಿ ಕರೋನಾ ಮತ್ತು ಮಂಗನಕಾಯಿಲೆಗೆ ಗೊಬ್ಬರಹಾಕಿದಂತಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
