

ಉತ್ತರಕನ್ನಡ,ಶಿವಮೊಗ್ಗ ಜಿಲ್ಲೆಗಳು ಮೀನಿಗಾಗಿ, ಆಸ್ಫತ್ರೆಗಳಿಗಾಗಿ ಹಾಗೂ ಇನ್ನೂ ಅನೇಕ ಅನಿವಾರ್ಯತೆಗಳಿಗಾಗಿ ಕರಾವಳಿಯನ್ನು ಅದರಲ್ಲೂ ಉಡುಪಿ, ಮಂಗಳೂರುಗಳನ್ನು ಅವಲಂಬಿಸಿವೆ.
ಮೀನು ಮತ್ತಿತರೆ ಅಗತ್ಯಗಳು ತೀರಾ ಅನಿವಾರ್ಯವೇನಲ್ಲ ಆದರೆ ಆಸ್ಫತ್ರೆಗಳಿವೆಯಲ್ಲ ಅವು ಶಿವಮೊಗ್ಗ,ಉತ್ತರಕನ್ನಡ ಜಿಲ್ಲೆಯವರಿಗೆ ಅನಿವಾರ್ಯ.
ಈಗ ಕರೋನಾ ಭಯ, ಭೀತಿ ಪ್ರಾರಂಭವಾಗಿದೆ. ಮಂಗನಕಾಯಿಲೆ ಮಲೆನಾಡಿನ ಜನರನ್ನು ಹೆದರಿಸತೊಡಗಿದೆ. ಈ ಸ್ಥಿತಿಯಲ್ಲಿ ಉಡುಪಿ, ಮಂಗಳೂರು ಜಿಲ್ಲೆಗಳ ಗಡಿಗಳನ್ನು ಸಂಪೂರ್ಣ ಬಂದ್ ಮಾಡಿ ಅಂತರ್ ಜಿಲ್ಲಾ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕರೋನಾ ಹಿನ್ನೆಲೆಯಲ್ಲಿ ಉಡುಪಿ,ಮಂಗಳೂರು ಜಿಲ್ಲೆಗಳನ್ನು ಹೊರಜಿಲ್ಲೆಗಳಿಂದ ಸಂಪರ್ಕನಿರ್ಬಂಧಿಸಿರುವುದರಿಂದ ಉತ್ತರಕನ್ನಡ, ಶಿವಮೊಗ್ಗದ ಜನರಿಗೆ ತೀವೃ ತೊಂದರೆಯಾಗಿದೆ.
ಅದೃಷ್ಟದಿಂದ ಈ ವರೆಗೆ ಘಟ್ಟದ ಮೇಲಿನ ಪ್ರದೇಶಗಳಲ್ಲಿ ಕರೋನಾ ಕಾಣಿಸಿಕೊಂಡಿಲ್ಲ ಆದರೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಂಗನ ಕಾಯಿಲೆ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಸಂಪರ್ಕ ತೊಂದರೆ ಉದ್ಭವಿಸಿದೆ. ಇದೇ ವಾರ ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಒಟ್ಟೂ 7 ಜನರಲ್ಲಿ ಮಂಗನಕಾಯಿಲೆ ಸೋಂಕು ಪತ್ತೆಯಾಗಿದೆ ಆದರೆ ಈ ರೋಗಿಗಳ ಚಿಕಿತ್ಸೆಗೆ ಮಂಗಳೂರಿಗೆ ಹೋಗುವಂತಿಲ್ಲ.
ಕರೋನಾ, ಕುಡಿಯುವ ನೀರು ಎಂದು ನಾಮಕಾವಸ್ಥೆ ಸಭೆ ನಡೆಸಿದ ರಾಜ್ಯ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ 2019-20 ರಲ್ಲಿ ಮಂಗನಕಾಯಿಲೆಯಿಂದ ಮೃತರಾದ ಕುಟುಂಬಗಳಿಗೆ ತಲಾ 2ಲಕ್ಷ ವಿತರಿಸಲಾಗಿದೆ ಎಂದಿದ್ದಾರೆ.
ವಾಸ್ತವದಲ್ಲಿ ಈ ಮೃತರ ಕುಟುಂಬಗಳಿಗೆ ಪರಿಹಾರ ದೊರೆತಿಲ್ಲ.
ಮಂಗನಕಾಯಿಲೆ ವಿಚಾರದಲ್ಲಿ ಕಳೆದ ತಿಂಗಳು ಸಾಗರ ಶಾಸಕ ಹಾಲಪ್ಪ ವಿಧಾನಸಭೆಯಲ್ಲಿ ತಮ್ಮ ಅಸಮಾಧಾನ ಸ್ಫೋಟಿಸಿದ್ದರು. ಆದರೆ ಈ ಮಂಗನಕಾಯಿಲೆ ವಿಚಾರ ಸೇರಿದಂತೆ ಅನೇಕ ವಿಚಾರಗಳಲ್ಲಿ ರಾಜ್ಯದ ಮುಖ್ಯಮಂತ್ರಿ- ವಿಧಾನಸಭೆಯ ಅಧ್ಯಕ್ಷರ ಜಿಲ್ಲೆಗಳಲ್ಲೇ ಅವಶ್ಯ ಕೆಲಸಗಳಾಗಿಲ್ಲ. ಈ ವಿದ್ಯಮಾನಗಳ ನಡುವೆ ಮಂಗಳೂರು, ಉಡುಪಿ ಜಿಲ್ಲೆಗಳ ಆಸ್ಫತ್ರೆ, ಇತರ ಅನುಕೂಲಗಳಿಗೆ ಸಂಪರ್ಕ ಸೇತುವೆಗಳಾಗಿದ್ದ ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಈ ತೊಂದರೆ ಬಗ್ಗೆ ಈ ಭಾಗದ ಜನಪ್ರತಿನಿಧಿಗಳ್ಯಾರೂ ಧ್ವನಿ ಎತ್ತಿದ ಉದಾಹರಣೆಗಳಿಲ್ಲ. ಚುನಾವಣೆ, ಇತರ ಅನಾವಶ್ಯಕ ವಿಚಾರಗಳಲ್ಲಿ ಮೂಗು ತೂರಿಸುವ ಶಿವಮೊಗ್ಗ, ಉತ್ತರಕನ್ನಡ, ಮಂಗಳೂರುಗಳ ಸಂಸದರು ಈ ಬಗ್ಗೆ ಮಾತನಾಡಬಹುದೆಂದು ನಿರೀಕ್ಷಿಸುವುದೂ ತಪ್ಪು.
ಈ ರಗಳೆಗಳ ನಡುವೆ ಭಟ್ಕಳ ಶಾಸಕ ಸುನಿಲ್ ನಾಯ್ಕ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ರ ಗಮನಕ್ಕೆ ತಂದು ಜಿಲ್ಲಾಧಿಕಾರಿಗಳ ಪತ್ರ ಪಡೆದವರು ಅನಿವಾರ್ಯತೆಯಲ್ಲಿ ಉಡುಪಿ, ಮಂಗಳೂರು ಪ್ರವೇಶಿಸಲು ಅವಕಾಶ ಮಾಡಿದ್ದಾರೆ. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಫತ್ರೆ,ಆರೋಗ್ಯ ವ್ಯವಸ್ಥೆ ಮಾಡದ ಇಲ್ಲಿಯ ಕಾಲುಶತಮಾನದ ಜನಪ್ರತಿನಿಧಿಗಳು ಮಾತ್ರ ಈಗಲೂ ಮಾಡೋಣ, ನೋಡೋಣ ಎನ್ನುತಿದ್ದಾರೆ.
ನಾಳೆಯಿಂದಲೇ ಮೀನುಗಾರಿಕೆ ಪ್ರಾರಂಭ, ಊರೂರಿಗೆ ಬರಲಿದೆ ಮೀನು!
ಬುಧವಾರದಿಂದಲೇ ಕರಾವಳಿಯಲ್ಲಿ ಮೀನುಗಾರಿಕೆ ಪ್ರಾರಂಭವಾಗಲಿದ್ದು, ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ. ಸಿದ್ಧಾಪುರದಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಲಾಕ್ ಡೌನ್ ನಿಯಮ, ಸಾಮಾಜಿ ಅಂತರದ ನಿಬಂಧನೆಗಳ ನಡುವೆ ಮೀನುಗಾರರ ಹಿತಾಸಕ್ತಿ, ಮೀನುಪ್ರೀಯರ ಅವಶ್ಯಕತೆ ಅನುಲಕ್ಷಿಸಿ ರಾಜ್ಯದ ಕರಾವಳಿಯಲ್ಲಿ ನಾಳೆಯಿಂದಲೇ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ.
