

ಓಣ್ಯಾಗ ನನ್ನಗೂಡ ಕೂಡಿ ಓದಾಕ ಸಹಪಾಠಿಗಳು ಸಿಗದಿದ್ದರೂ, ಕರ್ಕೊಂಡಾಡೊ ಸಂಗಾತಿಗಳಿಗೇನೂ ಕಮ್ಮಿ ಇರಲಿಲ್ಲ. ಸಾಲಿ ಅಂದ್ರೆ ಏನಂತಾನೆ ಗೊತ್ತಿರದ ಆ ಹನಮಂತನಿಗೆ ದನಕಾಯುವುದೊಂದೇ ಕಾಯಕವಾಗಿತ್ತು. ಸಾಲಿಸೂಟಿಬಿಟ್ರಸಾಕು, ಎಮ್ಮಿ ಬಿಟ್ಕೊಂಡು ಹನಮಂತನಗೂಡ ನಾನೂ ಹೊಂಟಬಿಡತಿದ್ಯಾ, ಸಾಲಿಗ್ಹೋಗೊ ಹುಡ್ಗಂತಾ ಹನಮಂತನಿಗೆ ಅದೆಂತಹದ್ದೊ ಒಂತರ ಪ್ರೀತಿಯಿತ್ತು ನನ್ನಮ್ಯಾಗ. ಎಂಥಾ ಪ್ರೀತಿ ಅಂದ್ರ, ದನಕಾಯಾಕ ಹೋದಾಗ, ಮುಳ್ಳಕಂಟಿಯೊಳಗಿನ ಸಿಟಿಜೇನ ಬಿಡಿಸ್ಕೊಂಡ ಬಂದವ್ನೆ ಮೊದ್ಲು ನಂಗ ತಿನಸತಿದ್ದ, ಕಲ್ಲಹೊಡೆದು ಬಾರಿಹಣ್ಣು ಕೆಡುವಿ ಕೊಡತಿದ್ದ, ಯಾರದೊ ಹೊಲ್ದಾಗ ಹಸಿಶೇಂಗಾ ಕಿತ್ಕೊಂಡು ತರ್ತಿದ್ದ ಒಟ್ಟಾರೆ ಹಣ್ಣು ಕಾಯಿ ಜೇನು ಏನೇಲ್ಲಾ ತಿಂದು ಹೊಟ್ಟಿ ತುಂಬಿಹೋಗತಿತ್ತು, ಇಬ್ರು ಕಟ್ಕೊಂಡಹೋದ ಬುತ್ತಿ ಎಷ್ಟೋ ಸಾರಿ ತಿನ್ದೆ ಹಂಗೇ ಇರತಿತ್ತು.


ಅದೊಂದದಿನ ದನಮೇಸ್ಕೊಂಡು ಮನಿಕಡೆ ಹೊಳ್ಳಸ್ಕೊಂಡು ಬರುವಾಗ, ಅಡ್ಡಹಳ್ಳದ ಹತ್ತಿರ ದನ ನೀರಕುಡ್ದು ಮಲ್ಕೊಂಡುವು. ಹಳ್ಳದ ದಂಡಿಮ್ಯಾಗ ಇಬ್ರೂ ಗುಂಡಾ ಆಡಾಕ ಸುರು ಹಚ್ಕೊಂಡಿವಿ, ಸ್ವಲ್ಪಹೊತ್ತ ಆಡಿದಮ್ಯಾಗ ದನ ಎದ್ದಹೊಂಟುವು, ನಾವೂ ಗಡಬಡಿಸಿ ಗುಂಡಾ ಬಕ್ಕನದಾಗ ಹಾಕ್ಕೊಂಡು ಹೊಂಟವಿ. ಆಮ್ಯಾಲೆ ನಾನೊಂಚೂರು ಕಾಲಮಡಿಯಾಕಂತ ದಾರಿಮಗ್ಲ ನಿಂತಕೊಂಡ್ಯಾ. ನಿಂತಕೆಲ್ಸ್ ಮುಗಸ್ಕೊಂಡು ಹೊಂಡುವಷ್ಟರಾಗ, ಹನುಮಂತ ದನಜೊತೆ ಚೂರ ಮುಂದಾಗಿದ್ದ. ಒಬ್ಬ ಅಪರಿಚಿತ ವ್ಯಕ್ತಿ ನನ್ನ ಕೈಯಾನ ಬುತ್ತಿನೋಡಿ “ಯಪ್ಪಾ ಒಂದರೊಟ್ಟಿ ಕೊಡ್ರಿ ಹಸಿವಾಗೈತಿ” ಅಂದ. ನಾನು ಅವನ ಮಾತು ಕೇಳಿಯೂ ಕೇಳದವನ್ಹಂಗ ಅವಸರಮಾಡಿ ಓಡಿ ಹನಮಂತನ ಕೂಡಿಕೊಂಡೆ.
ಯಾಕೋ ಏನೋ ಗೊತ್ತಿಲ್ಲ ರೊಟ್ಟಿ ಕೊಟ್ಟಬರಬೇಕಿತ್ತೇನೊ ಅಂತಾ ಮನಸ್ಸು ಅಳ್ಳಹುರದ್ಹಂಗ ಹುರಿಯಾಕ್ಹತ್ತು. ತಡಿಲಾರ್ದ ಹನಮಂತನ ಕೇಳಿದ್ಯಾ ‘ಅಲ್ಯಾರೋ ಒಬ್ಬವ ನಂಗ ರೊಟ್ಟಿ ಕೊಡು ಅಂತ ಕೇಳ್ದ, ನಾನು ಕೊಡ್ಲಿಲ್ಲಾ, ನೀನಾದ್ರ ಕೊಡತಿದ್ಯಾ? “ಕೊಡತಿದ್ಯಾ” ಅಂದ. ಹನಮಂತ ಕೊಡ್ತಿನಂತ ಅಂದಮ್ಯಾಗಂತೂ ಇನ್ನೂ ಹೆಚ್ಚ ತಳಮಳ ಸುರುವಾತು. ಅಲ್ಲಾ ದನಕಾಯೊ ಹುಡ್ಗನಿಗಿರುವಷ್ಟು ತಿಳುವಳಿಕಿನೂ ನಂಗ ಬರಲಿಲ್ಲಲ್ಲ ಅಂತಾ ಮನಿ ಮುಟ್ಟುವರೆಗೂ ಹೊಟ್ಯಾಗ ಸಂಕ್ಟಾತು. ದಂದಾಕ್ಯಾಗ ದನ ಕಟ್ಟಿದವನೇ, ಜೀವದ ಅಜ್ಜಿ ಮುಂದ ನಡೆದ ವಿಷ್ಯ ಅಷ್ಟೂ ಹೇಳ್ದೆ, ಅಜ್ಜಿನೂ ಕೊಟ್ಟಬರ್ಬೇಕಿಲ್ಲ ಬೇವರ್ಸಿ ಅಂತ ಬೈದ್ಲು. ಸಂಜೆ ಉಂಡಕೂಳು ರುಚಿ ಹತ್ತಲಿಲ್ಲ, ರಾತ್ರಿಯಿಡೀ ನಿದ್ದಿ ಬರಲಿಲ್ಲ. ಮರುದಿನ ಸಾಲಿಗೆ ಹೊಂಟಾಗ, ನಿನ್ನೆ ನೋಡಿದ ಆ ವ್ಯಕ್ತಿ ದಾರ್ಯಾಗೆಲ್ಲ್ಯಾರ ಕಾಣ್ತನಂತ ಕಣ್ಣಾಗ ಕಣ್ಣಿಟ್ಟು ಹುಡಕಾಕ ಹತ್ತಿದ್ಯಾ, ಅಕಸ್ಮಾತು ಕಂಡ್ರ ಮನಿಗಿ ಕರ್ಕೊಂಡ್ಹೋಗಿ, ಅವನ ಕೈಯಾಗ ನಾಕರೊಟ್ಟಿ ಇಟ್ಟು ಮನ್ಸ ಹಗರ ಮಾಡ್ಕೊಬೇಕಂತ ಎಷ್ಟ ತಡಕಾಡಿದ್ರೂ ಕೊನಿಗೂ ಅಂವ ಸಿಗಲೇ ಇಲ್ಲ.
ಇವತ್ತಿಗೂ ಹಸಿವೆಯಿಂದ ಬಳಲುವವರು ಕಂಡ್ರೆ, ಮನೆಯ ಮುಂದೆ ತುತ್ತು ಅನ್ನಕ್ಕಾಗಿ ಯಾರಾದರೂ ಅಂಗಲಾಚಿದರೆ ಅವನೇ ನೆನಪಾಗುತ್ತಾನೆ. ನನ್ನೊಳಗೆ ಹೆಪ್ಪುಗಟ್ಟಿರುವ ಆ ರೊಟ್ಟಿಕೊಡದ ತಪ್ಪು, ದನಕಾಯೊ ಹನಮಂತನೊಳಗಿನ ಅಂತಃಕರಣ, ‘ಕೊಟ್ಟಬರಬೆಕಿಲ್ಲ ಬೇವರ್ಸಿ’ ಅಂತಾ ಬೈದ ಅಜ್ಜಿಯ ಮಾತು ಹೆಜ್ಜೆಹೆಜ್ಜೆಗೂ ಕಾಡುತ್ತಿವೆ, (ಅಜ್ಜಿಯೂ ಸಹ ಅನಕ್ಷರಸ್ಥಳೆ). ಒಟ್ಟಾರೆ ಮಾಡುವ ತಪ್ಪುಗಳು, ಓದು ಬರಹ ಬರದವರ ಔದಾರ್ಯ ದಿನದಿನವೂ ಕಾಡುತ್ತಿವೆ. ಅಂದು ಒಂದರೊಟ್ಟಿ ಕೊಡದ ನಿರ್ದಯಿ ನಾನು, ಇಂದು ನಾಕಮಕ್ಕಳೆದಿರು ನಿಂತು ಅವರ ನೆತ್ತಿಯ ಹಸಿವನ್ನು ನೀಗಿಸುತ್ತಿರುವೆ. ಆದರೆ ಅಂದೇ ಎದೆಯ ತುಂಬ ಪ್ರೀತಿ ಕರುಣೆ ತುಂಬಿಕೊಂಡಿದ್ದ ಆ ಹನಮಂತ ಏನಾದ್ರೂ ನನ್ನಜಾಗಾದಾಗ ನಿಂತಿದ್ದರೆ, ನನಗಿಂತಲೂ ಹೆಚ್ಚು ಅರ್ಥಪೂರ್ಣವಾಗಿ ಮಕ್ಕಳ ಹಸಿವು ನೀಗಿಸುತ್ತಿದ್ದನಲ್ಲವೆ? ಆತ್ಮಸಾಕ್ಷಿಯ ಈ ಪ್ರಶ್ನೆಗೆ ನನ್ನೊಳಗೆ ಉತ್ತರವಿಲ್ಲ.
-ಕೆ.ಬಿ.ವೀರಲಿಂಗನಗೌಡ್ರ.
(ಪ್ರಾಯಶಃ ಮೂರು ಅಥವಾ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ನಡೆದ ಘಟನೆಯಿದು)
