ಕೋಳಿಸಾರು ಬಲುರುಚಿ ಎನ್ನುವ ಸತ್ಯ ಎಷ್ಟು ಜನರಿಗೆ ತಿಳಿದಿದೆಯೋ ನಾನರಿಯೆ. ಆದರೆ ಅರ್ಥಶಾಸ್ತ್ರದ ಕೊರತೆಗೆ ಬೇಡಿಕೆ ಜಾಸ್ತಿ ಎನ್ನುವ ಯುಟಿಲಿಟಿ ನಿಯಮ ಕರೋನಾ ಕಾಲದಲ್ಲಿ ಕೊರತೆಗೆ ರುಚಿ ಜಾಸ್ತಿ ಎನ್ನುವುದನ್ನು ಸಾಬೀತು ಮಾಡಿದೆ.
ಅದೇನಾಯ್ತೆಂದರೆ…..
ಜನತಾಕಫ್ರ್ಯೂ ನಂತರ ದಿಢೀರನೆ ಆದ ಲಾಕ್‍ಔಟ್ ನಿಂದ ಎಲ್ಲರೂ ಬಾಗಿಲುಹಾಕಿಕೊಂಡ ನಂತರ ಅವಶ್ಯಕತೆ, ಅನಿವಾರ್ಯತೆಯೆಂದು ದಿನಸಿ, ತರಕಾರಿ, ಕೆಲವೆಡೆ ಮೊಟ್ಟೆ, ಒಣಮೀನುಗಳೂ ಬೇಡಿಕೆ ಹೆಚ್ಚಿಸಿಕೊಂಡವು. ಈ ಕರೋನಾ ಲಾಕ್‍ಔಟ್ ಮೊದಲು ಹಕ್ಕಿಜ್ವರ, ಕರೋನಾ ಭಯ ಎಂದು ಕೋಳಿಮಾಂಸದ ಬೆಲೆ 180-200ರಿಂದ ಗಕ್ಕನೆ 70-80 ರೂಪಾಯಿಗಳಿಗೆ ಕುಸಿದಿತ್ತು. ಕಡಿಮೆ ಬೆಲೆ ಎಂದು ತಾತ್ಸಾರ ಮಾಡಿ ಕೋಳಿ ತಿನ್ನದ ನಮಗೆ ಲಾಕ್ ಔಟ್ ಕೋಳಿ-ಮೀನಿನ ಮಹತ್ವ ತಿಳಿಸಿತ್ತು.
ಗ್ರಾಮ-ಹಳ್ಳಿ-ವಾರ್ಡ್‍ಗಳಿಗೆ ದಿನಸಿ-ತರಕಾರಿ ಪೂರೈಸುವ ಮೊದಲೆ ವ್ಯಾಪಾರಿಗಳು ‘ಸಿಕ್ಕರೆ,ಸಿಕ್ತು ಇಲ್ಲಾದ್ರ ಇಲ್ಲ, ಯಾವುದಕ್ಕೂ ಒಂದ್‍ಸ್ವಲ್ಫ ಸ್ಟಾಕ್ ಇಟ್ಕೊಳ್ಳಿ’ ಅನ್ನೋ ಕಿವಿಮಾತಿನ ನಡುವೆ ಕೂಡಾ ನಮಗೆ ಮಾಂಸ-ಮದ್ಯ,ಮೀನು ಸಂಗ್ರಹಿಸಿಕೊಳ್ಳಲು ಸಮಯವೇ ಸಾಕಾಗಲಿಲ್ಲ. ಫಜೀತಿಗೆ ಇಷ್ಟೇ ಸಾಕಲ್ಲ. ಕರೋನಾ ವಿಶ್ರಾಂತಿ ನಡುವೆ ಕೋಳಿಗೆಂದು ತಿರುಗದ ಊರುಗಳಿಲ್ಲ, ಜೂರಿಮನೆಯ ಕೋಳಿಗಳಿಗೆ ಔಷಧಿ ರಗಳೆ, ಕೋಳಿ ಮೋಹನ ಕೋಳಿಮಾರಿಕೊಂಡು ಸಾಲಗಾರರ ಕಣ್ ತಪ್ಪಿಸಿ ಓಡಾಡುತಿದ್ದಾನೆಂಬ ಸುದ್ದಿ ತಿಳಿದು ಹೋದರೆ ಅಲ್ಲೂ ಎಳೆಪಿಳ್ಳೆಗಳನ್ನು ಬಿಟ್ಟು ತಿನ್ನಬಹುದಾದ ಕೋಳಿ-ಕುರಿ ಖಾಲಿ. ಊರೆಲ್ಲಾ ಸುತ್ತಾಡಿದರೂ ಎಲ್ಲೂ ಕೋಳಿ ಸಿಗಲಿಲ್ಲ.
ಇಂಥ ಯಾಂತ್ರಿಕ-ತಾಂತ್ರಿಕ ಕರೋನದ ಸತ್ಯೋತ್ತರಕಾಲದಲ್ಲಿ ನಿಂತು ಕೋಳಿಮಾಂಸದ ಪುರಾತನ ನೆನಪು ಒತ್ತರಿಸಿಬಂದಾಗ ಕೋಳಿಪುರಾಣ ನೆನಪಾಗಬೇಕೆ?
ನಾವಾಗ ಪ್ರಾಥಮಿಕಶಾಲೆಗೆ ಹೋಗುತಿದ್ದ ಕಾಲದಲ್ಲಿ ಭೂತ-ದೆವ್ವ ಓಡಿಸುವ ಪೂಜಾರಿಗಳು, ಗಾಡಿಗರು ದೆವ್ವಕ್ಕೆ ಬಲಿಕೊಡಲೆಂದು ಎರಡುಕಾಲು, ನಾಲ್ಕು ಕಾಲು ಎಂದು ಗಾಳಿ(ದೆವ್ವ)ಯ ಪ್ರಭಾವಕ್ಕೆ ತಕ್ಕಂತೆ ಕೋಳಿ-ಕುರಿ ಬಿಡುತಿದ್ದರು.
ನಮ್ಮ ನೆರೆಹೊರೆಯಲ್ಲೇ ಅಂಥ ಪೂಜೆ, ಬಲಿಗಳ ದೇವತಾಕಾರ್ಯ ನಡೆಯುತಿದ್ದಾಗಲೂ ಕುರಿಪೂಜೆಗೆಂದು ನಾನು ಅಂಥವರೊಂದಿಗೆ ಸೇರಿದ್ದು ನೆನಪಿಲ್ಲ, ಆದರೆ ನಮ್ಮ ಅಜ್ಜಿ ಗೌರಮ್ಮ ಅವರ ಮನೆಯ ಗಾಡಿಗರ ಪಾಲಿನಲ್ಲಿ ನಮಗೂ ಕೊಟ್ಟು ಕುರಿ-ಕೋಳಿ ಪೂಜೆಯ ರುಚಿ ತೋರಿಸುತಿದ್ದರು.
ಈ ಕೋಳಿಪೂಜೆಯ ಮಾಂಸದ ತಯಾರಿಯದ್ದೇ ಒಂದು ವಿಶಿಷ್ಟ ಶೈಲಿ. ಅಕ್ಕಿ ಹಿಟ್ಟು, ಒಣಮೆಣಸಿನ ಕಾಯಿ, ಹೆಚ್ಚಿನ ತೆಂಗಿನಕಾಯಿಯ ಅರೆಯದ ಮಸಾಲೆಯೊಂದಿಗೆ ಕೊತಕೊತನೆ ಕುದಿಯುವ ಮಾಂಸಕ್ಕೆ ಅದು ಬೆಂದು ತಯಾರಾಗುವ ಮೊದಲು ವಿಶಿಷ್ಟ ಕುಚಿ-ವಾಸನೆ ಆವಾಹನೆಯಾಗುತ್ತದೆ. ಈ ರುಚಿಯಾದ ಮಾಂಸದ ಸಾರಿನ ರುಚಿಯ ಆವಾಹನೆಗೂ ಪೂಜಾರಿ, ಗಾಡಿಗ, ಮಾಂತ್ರಿಕರ ದೇವರ ಆವಾಹನೆಗೂ ಎಂಥ ಸಂಬಂಧವಿದೆಯೋ ಅರಿತವರು ಕಡಿಮೆ. ಆದರೆ ಒಮ್ಮೆ ಈ ಕುರಿ-ಕೋಳಿಪೂಜೆಯ ಸಾರು ಊಟಮಾಡಿದವರು ರುಚಿ-ದೇವರ ಆವಾಹನೆಯನ್ನೂ ಕೊಂಡಾಡಿದರೆ ಆಶ್ಚರ್ಯಪಡುವಂತಂಥದ್ದೇನಿಲ್ಲ!.
ಇಂಥದ್ದೇ ಒಂದು ಕೋಳಿ ಪೂಜೆ ನಮ್ಮೂರಿಗೆ ಸಮೀಪದ ಗುಂಟ್ಕಸರದಲ್ಲಿ ನಡೆದಿತ್ತು. ಆ ಕೋಳಿಪೂಜೆಯ ಪ್ರಾಯೋಜಕರು, ಆಯೋಜಕರಾದ ದೆವ್ವ ಹೊಡೆಸಿಕೊಂಡ ಬಾಧಿತರು, ದೆವ್ವಬಿಡಿಸುವ ಗಾಡಿಗರೂ ನಮ್ಮವರೇ ಅಂದರೆ ನಮ್ಮ ಪರಿವಾರದವರೇ ಎನ್ನುವ ಅಸ್ಫಸ್ಟ ನೆನಪು!
ಅದು ಶಾಲೆಯ ರಜಾ ಅವಧಿಯೋ? ವಾರದ ರಜೆಯ ದಿನವೋ ಇರಬೇಕು. ನಮ್ಮ ಸರೀಕರೆಲ್ಲಾ ಕೋಳಿಪೂಜೆಗೆ ಹೊರಟ ಕಂಬಳಿ-ಕತ್ತಿ ಹಿಡಿದಿದ್ದ ಹಿರಿಯರನ್ನು ಹಿಂಬಾಲಿಸಿದೆವು. ನಮಗಿಂತ ಮೊದಲು ಇನ್ನೊಂದು ತಂಡ ಮೊದಲೇ ನಿಗದಿತ ಸ್ಥಳದಲ್ಲಿ ಬೀಡು ಬಿಟ್ಟಿತ್ತು. ಅನಿರೀಕ್ಷಿತವಾಗಿ ಹೋದ ನಮ್ಮ ಪಿಳ್ಳೆತಂಡವನ್ನು ನೋಡಿ ಚಕಿತರಾಗದ ಹಿರಿಯರು ನಮಗೆ ತಮಾಸೆ ಮಾಡಿ ‘ಹುಡ್ರಲ ಪೂಜೆ,ಗೀಜೆ ಅಂತ ಬರಬಾರದ್ರ’ ಎಂದು ಜೋಕು ಹಾರಿಸಿದರು.
ಕೋಳಿಪೂಜೆ ರುಚಿಯ ಅನುಭವಿಗಳಾದ ನಮಗೆ ಈ ಕೀಟಲೆ-ತಮಾಸೆ ತಟ್ಟುವಂತಿರಲಿಲ್ಲ. ಗಾಡಿಗರುನ್ವಾಟಾ ಹೊಡೆಯುತ್ತಾ ರಾಂ..ರೀಂ ಎಂದು ದೆವರನ್ನು ಕರೆದು ‘ಬಾಲಮಗನೆ ಆ ಆಹಾರ ಕೊಡು ಎಂದು’ ಬಲಿಯಾಗಬೇಕಿದ್ದ ಕೋಳಿಯನ್ನು ಕೊಡಲು ಆಜ್ಞೆ ಮಾಡಿತು. ದಷ್ಟ-ಪುಷ್ಟ ಬೆಳೆದಿದ್ದ ಕೋಳಿಹುಂಜವನ್ನು ಎತ್ತಿತಂದ ನಮ್ಮ ಪರಿಚಿತನೊಬ್ಬ ದೇವರನ್ನು ಆಹ್ವಾಹಿಸಿಕೊಂಡ ಗಾಡಿಗರ ಎದುರು ಕೋಳಿ ಹಿಡಿಯುತ್ತಲೇ. ಈ ಆಹಾರದಿಂದ ತೃಪ್ತಿಯಾಗಿ ಜೀವ ಬಿಟ್ಟು ತೆರಳಬೇಕು ಇಲ್ಲಾಂದ್ರೆ……
ಎಂದು ಅರಚಿದ ಗಾಡಿಗರ ರೋಷಕ್ಕೆ ಗಾಳಿಯೆಂಬ ದೆವ್ವ ಬೆದರಿತೋ? ಇಲ್ಲ, ಯಾರಿಗೊತ್ತು.
ನಮಗಂತೂ ತುಸು ಹೆದರಿಕೆಯ ನಡುಕ ಆಹ್ವಾನವಾಗಿತ್ತು!
ಈ ಪೂಜೆ, ಭಯ, ನಂಬಿಕೆ ದೆವ್ವ, ಭೂತ ಓಡಿಸುವ ವಿಧಿವಿಧಾನ ನಮಗೆ ಅಂಥಾ ಆಕರ್ಷಕ ಎನಿಸಲಿಲ್ಲ ಯಾಕೆಂದರೆ ನಮ್ಮ ಚಿತ್ತದಲ್ಲಿ ಆ ವೇಳೆಗಾಗಲೇ ಕೋಳಿ ಪೂಜೆಯ ರುಚಿಯ ಕಲ್ಪನೆಯ ಹುತ್ತಗಟ್ಟಿಯಾಗತೊಡಗಿತ್ತು. ಏಳೆಂಟು ಜನರಿದ್ದ ನಮ್ಮ ತಂಡದವರು ಕೊಡದಲ್ಲಿ ನೀರುತಂದು, ಕೋಳಿಕುಯ್ದು, ತಂದಿದ್ದ ಒಂದೆರಡು ದೊಡ್ಡ ಪಾತ್ರೆಗಳಿಗೆ ಮಣ್ಣಿನಅಡಿ ಕಟ್ಟಿ, ಮರದ ಚಮಚೆಗಳನ್ನು ತಯಾರಿಸಿ, ಕೆಲವು ತೆಂಗಿನ ಕಾಯಿ ಗರಟೆಗಳಿಗೆ ಕತ್ತಿಯಿಂದ ಪಾಲಿಶ್ ಹಿಡಿದು ಸೌಟು ತಯಾರಿಸುವ ವೇಳೆಗೆ ಎಲ್ಲರ ಹೊಟ್ಟೆ ಚುರುಗುಟ್ಟತೊಡಗಿತ್ತು. ಅಷ್ಟೊತ್ತಿಗೆ ನಮ್ಮನ್ನು ಸೇರಿಕೊಂಡ ಮತ್ತೊಂದು ಅರ್ಧಡಜನ್ ಜನರು ಎಲ್ಲರೂ ಸೇರಿ ಕೋಳಿಮಾಂಸದ ಸಾರು ತಯಾರಿಸಿ ಬಾಳೆಎಲೆಯ ಮೇಲೆ ಬಡಿಸುವ ಸಮಯಕ್ಕೆ ಊಟದ ಸಮಯ ಮೀರಿ ಹೋಗಿತ್ತು. ಆ ಹಸಿವೆಯ ಸಮಯದಲ್ಲೂ ನಮ್ಮ ಹಿರಿಯರು “ಈ ಕೋಳಿಸಂತಿಗೆ ಒಂದುತಟಕ್ ಇದ್ದಿದ್ದರೆ ಅದ್ರ ಮಜಾ ನೆ ಬೇರೆʼ ಎಂದು ಗುನುಗಿಕೊಳ್ಳುತಿದ್ದರು!
ಊಟದ ಸಮಯಮೀರಿ ಆಹಾರ ಸೇವಿಸಿದ ನಿರೀಕ್ಷೆಯ ಊಟದ ಕಾರಣಕ್ಕೋ ಅಥವಾ ವಾಸ್ತವದಲ್ಲಿ ಆ ಕೋಳಿಪೂಜೆಯ ಊಟ ಅಷ್ಟು ಅದ್ಭುತವಾಗಿತ್ತೋ ಏನೋ ಅಂದಿನ ಕೋಳಿಪೂಜೆಯ ಊಟ, ಸಾರು ಈಗಲೂ ನೆನಪಾದರೆ ಮೂಗು, ಬಾಯಿ ಬಿಚ್ಚಿಕೊಳ್ಳುತ್ತವೆ. ಇಂಥ ಕೋಳಿ-ಕುರಿ ಪೂಜೆಗಳು ಈಗಲೂ ಮಲೆನಾಡಿನಲ್ಲಿ ಇಲ್ಲಿಯ ಮೂಲನಿವಾಸಿಗಳಲ್ಲಿ ತೀರಾ ಸಾಮಾನ್ಯ. ಇದು ಕೋಳಿಸಾರಿನ ಕತೆಯಾದರೆ ಇದರ ಮುಂದುವರಿದ ಭಾಗವಾಗಿ ನಮ್ಮ ಕೋಳಿ ಸಾಕಾಣಿಕೆಯ ಪ್ರಯತ್ನದ ನೆನಪೂ ಮನಸ್ಸಿಗೆ ಇಷ್ಟೇ ರುಚಿಕಟ್ಟಿನ ಅನುಭವ ನೀಡಬಹುದು.
ಅದೊಂಥರಾ ಕಾಲವದು ನಮ್ಮ ಓರಿಗೆಯ ಹುಡುಗರಿಗೆಲ್ಲಾ ಕೋಳಿ,ದನ,ಸಾಕಿ ಕೃಷಿಮಾಡುವ ಹುಕಿ. ವಿದ್ಯಾರ್ಥಿಗಳಾದ ನಾವೂ ಮುಂಜಾನೆ ನಸುಕಿನಲ್ಲಿ ಎದ್ದು ಸೊಪ್ಪು, ದರಕು(ಉರವಲು) ಹುಲ್ಲು,ಸದೆ ತರುವುದೇನು, ಅವನ್ನು ಜಾನುವಾರುಗಳ ಮುಖಕ್ಕೇ ಒಯ್ದು ತಿನ್ನಿಸುವುದೇನು. ಎಮ್ಮೆ ಎತ್ತುಗಳ ಜೊತೆಗೆ ಒಂದೆರಡು ಸಾಥಿಯಾಗಿ ಕುರಿಗಳಿರಲಿ ಎಂದು ಶಿರಾಳಕೊಪ್ಪ, ಶಿಕಾರಿಪುರದಿಂದ ಹಿರಿಯರು ತಂದ ಕುರಿಗಳನ್ನು ಜತನದಿಂದ ಸಾಕುವುದೇನು. ಅವುಗಳ ಮೈ ನೇವರಿಸಿ ಸಂಬ್ರಮಿಸುವುದೇನು. ಇಂಥ ಸಂಬ್ರಮಗಳೇ ನಮ್ಮ ಬದುಕಿನ ಸೊಗಸು, ಸೌಂದರ್ಯ ಹೆಚ್ಚಿಸಿದ್ದವು ಎನ್ನಿ.
ನಮ್ಮ ಮನೆಯ ದೊಡ್ಡ ಎತ್ತಿನ ಜೋಡಿಯ ಗುಡಾಣದಂಥ ಹೊಟ್ಟೆಯ ಎತ್ತಿನ ಜೋಡಿ ದುಡಿಯುತಿದ್ದಾಗ ಆ ಎತ್ತಿನ ಸಭ್ಯತೆಯ ಬಗ್ಗೆ ಅನುಮಾನ ಪಡದ ಊರಿನ ಕೋಳಿಗಳೆಲ್ಲಾ ಎತ್ತಿನ ಸಕಲಂಗಗಳನ್ನೂ ಕುಕ್ಕಿ ಉಣುಗುತಿಂದು ಖುಷಿಪಡುತಿದ್ದವು. ಆ ಸಮಯದಲ್ಲಿ ನಮ್ಮ ಕೇರಿಯಲ್ಲೇ ನೂರಾರು ಕೋಳಿಗಳು ಮುಂಜಾನೆ ಸಂಜೆ ಎನ್ನದೆ ಕೂಗುತಿದ್ದವು ಎಂದು ನೆನಪಿಸಿಕೊಂಡರೆ ಕೋಳಿಯ ಸುವರ್ಣಯುಗ ನೆನಪಿಸಿಕೊಂಡಂತೆ.
ಇದೇ ಸಮಯದಲ್ಲಿ ನಮ್ಮ ಮನೆಯಲ್ಲೂ ಕಾಲುಶತಕ ಕೋಳಿಗಳಿದ್ದುದು ನಮ್ಮ ಅಂತಸ್ತಿನ ಧ್ಯೋತಕವೂ ಆಗಿತ್ತು.
ಇಂಥ ಕೋಳಿಗಳಕಲರವದ ಊರಿನಲ್ಲಿ ಒಮ್ಮೆ ಕೋಳಿಜ್ವರ ನುಸುಳಿತು ನೋಡಿ, ಗ್ರಾಮಸ್ಥರೆಲ್ಲಾ ತಮ್ಮ ಕೋಳಿಗಳನ್ನು ಉಳಿಸಿಕೊಳ್ಳುವ ಬಗ್ಗೆ ತಲೆಕೆಡಿಕೊಳ್ಳತೊಡಗಿದ್ದರು. ಅಸೀಮ ಕೃಷಿಶೃದ್ಧೆಯ ನಮ್ಮಪ್ಪ ಕೂಡಾ ತನ್ನ ಸಕಲೆಂಟು ರಗಳೆಗಳ ನಡುವೆ ಮನೆಯ ಕೋಳಿಗಳ ಬಗ್ಗೆಯೂ ತಲೆಕೆಡಿಸಿಕೊಂಡು ಒಂದು ಮುಂಜಾನೆ ಈ ಕೋಳಿಸಂಸಾರವನ್ನು ಕುಣಜಿಯ ನಮ್ಮ ಭತ್ತದ ಕಣಕ್ಕೆ ಸ್ಥಳಾಂತರಿಸುವುದೆಂದು ನಿರ್ಣಯ ಪ್ರಕಟಿಸಿಯೇ ಬಿಟ್ಟ.
ಬಹಳವರ್ಷಗಳಿಂದ ನಮ್ಮ ಮನೆಯಲ್ಲಿ ಆಳಾಗಿದ್ದರೂ ಅರಸನಂತೆ ನಮ್ಮ ಮನೆಯವನೇ ಆಗಿದ್ದ ಧರ್ಮಣ್ಣ ಆ ವೇಳೆಯಲ್ಲಿ ನಮ್ಮ ಮನೆ ಕೆಲಸ ಬಿಟ್ಟದ್ದ ಎನ್ನುವುದು ನನ್ನ ಅಂದಾಜು.
ಅಪ್ಪ ಆಗತಾನೆ ಕನ್ನಡ ಶಾಲೆಗೆ ಹೋಗುತಿದ್ದ ನನ್ನಣ್ಣ ಮತ್ತು ನನ್ನನ್ನು ಜೊತೆಗಿಟ್ಟುಕೊಂಡು ಕಣಕ್ಕೆ ಎತ್ತಿನ ಗಾಡಿ ಕಟ್ಟೇ ಬಿಟ್ಟ. ಊರವರು, ಸಹಪಾಠಿಗಳು, ನೆರೆಹೊರೆಯ ಜನರಿಂದ ಭಯಂಕರ ದೆವ್ವಭೂತಗಳ ಕತೆ ಕೇಳಿದ್ದ ನಮಗಿಬ್ಬರಿಗೂ ಹೆದರಿಕೆ. ಅಪ್ಪನಿಗೂ ನಮಗಿಂತ ಹೆಚ್ಚು ಧೈರ್ಯವಿದೆ ಎಂದು ನಂಬುವಂತಿರಲಿಲ್ಲ! ಆದರೂ ಅಂಧರು ಪ್ರವಾಸ ಹೊರಟಂತೆ ಪರಮ ಪುಕ್ಕರಾದ ಅಪ್ಪ-ಮಕ್ಕಳು ಎತ್ತಿನ ಗಾಡಿಯಲ್ಲಿ ಲಾಟೀನು ಬೆಳಕಿನಲ್ಲಿ ಸಾಗುತಿದ್ದರೆ ನಮ್ಮೂರಿನ ಅಂದಿನ ಮಿಣುಕು ದೀಪಗಳು ಊರಿನೊಂದಿಗೆ ನಿಧಾನಕ್ಕೆ ದೂರವಾಗುತಿದ್ದವು.
ಅಪ್ಪ ಕರಿಯೆತ್ತು ಕಾಳಿಂಗ, ಬಿಳಿಎತ್ತು ಮಾಲಿಂಗ ಎಂದು ಗಾಡಿಹೊಡೆಯುತಿದ್ದರೆ ನಾವಿಬ್ಬರೂ ಕೋಳಿಗಳೊಂದಿಗೆ ಅನೇಕ ಸಾಮಾನು ಸರಂಜಾಮುಗಳಿದ್ದ ಗಾಡಿಯ ಹಿಂದೆ ಕೂತು ಸಾಗುತಿದ್ದೆವು. ಅಪ್ಪ ಆಗಾಗ ನಮ್ಮನ್ನು ಮಾತನಾಡಿಸುತ್ತಾ ನಾವಿರುವುದು, ಮತ್ತು ಎಚ್ಚರದಿಂದಿರುವುದನ್ನು ಖಾತ್ರಿಪಡಿಸಿಕೊಳ್ಳುತಿದ್ದ. ನಮ್ಮೂರ ದೇವರಕೆರೆ, ನಂತರದ ಕೆಂದಾಳಮರದ ಹಕ್ಕಲಿನ ಸ್ಮಶಾನ, ಆ ನಂತರದ ಗದ್ದೆಬಯಲಿನ ಭೂತಪ್ಪನ ಮನೆ ಕಳೆದು ಎರಡ್ಮೂರು ಕಿ.ಮಿ. ನಮ್ಮ ಪ್ರಯಾಣ ಬಹುದೀರ್ಘ ಎನಿಸುವಂತಿತ್ತು. ರಾತ್ರಿ ಕುಣಜಿ ಭತ್ತದ ಕಣದಲ್ಲಿ ಮಲಗುವುದು ಮಾರನೆ ಬೆಳಿಗ್ಗೆ ಶಾಲೆ, ಅದುಇದು ಕೆಲಸಗಳೊಂದಿಗೆ ಕುಣಜಿಯಲ್ಲೇ ಒಂದೆರಡುವಾರಗಳ ಕಣದ ವಾಸ ಎಂದು ಪೂರ್ವ ನಿರ್ಧರಿತವಾಗಿದ್ದ ಈ ತಾತ್ಕಾಲಿಕ ವಲಸೆಯ ಹಿಂದೆ ನಮ್ಮ ಕೋಳಿಗಳನ್ನು ಊರಿನ ಕೋಳಿಜ್ವರದಿಂದ ಬಚಾವುಮಾಡುವುದೇ ನಮ್ಮ ಧ್ಯೇಯ-ಉದ್ದೇಶಗಳಾಗಿದ್ದವು.
ಅಪ್ಪ ಮೊದಲೇ ನಿರ್ಮಿಸಿದ್ದ ಮಾಳದಂಥ ಹುಲ್ಲಿನ ಶೆಡ್ ಬಳಿ ಗಾಡಿನಿಲ್ಲಿಸಿ ನಮ್ಮನ್ನೂ ಮಾತನಾಡಿಸಿ ಇಳಿಯಿರಿ ಎಂದು ಆಜ್ಞೆಮಾಡಿದ. ಗಾಡಿ ಇಳಿದು ಕೋಳಿಗಳನ್ನು ತುಂಬಿತಂದಿದ್ದ ಹೆಡಿಗೆಯಲ್ಲಿ ಮುಚ್ಚಿ ಮೇಲೆರಡು ಹುಲ್ಲಿನ ಸೂಡಿಟ್ಟು ಬಚಾವು ಮಾಡಬೇಕು. ನೋಡಿದರೆ ನಾವು ಊರಿಂದ ಹೊತ್ತುತರುತಿದ್ದ ಕೋಳಿಗಳಲ್ಲಿ ಅರ್ಧಕ್ಕರ್ಧ ಗಾಯಬ್!
ಈಗ ಕೊರೆಯುವ ಚಳಿಯಲ್ಲೂ ಬೆವರುವ ಸ್ಥಿತಿ ನಮ್ಮದು. ಅಪ್ಪನಿಗೂ ಸಿಟ್ಟು ನೆತ್ತಿಗೇರಿತ್ತು ಅಲ್ಲಿಂದ ಹಿಂದೇ ಕುಂತು ಬಂದಿರಿ ಕೋಳಿ ಬಿದ್ದದ್ದೂ ಗೊತ್ತಾಗನಿಲ್ಲನ್ರ ಎಂದು ಗದರಿದ. ನಮಗೇನು ಗೊತ್ತಿತ್ತು ಹಾರುಗೋಳಿ ಕತೆ! ದಾರಿಯುದ್ದಕ್ಕೂ ಕಾಡಿದ್ದು ನಮ್ಮೂರಿನ ಸ್ಮಶಾನ ಅಲ್ಲಿ ಇರಬಹುದೆಂದು ನಾವು ಬಲವಾಗಿ ನಂಬಿದ್ದ ದೆವ್ವ-ಭೂತಗಳು. ಅಪ್ಪ ಸಿಡಿಮಿಡಿಗೊಂಡಿದ್ದ ಇದ್ದ ಮೂವರಲ್ಲಿ ಯಾರೊಬ್ಬರೂ ಒಬ್ಬರೇ ಇರಲು ಧೈರ್ಯವಿಲ್ಲದ ಪುಕ್ಕಲತನ, ನಡುರಾತ್ರಿಯಲ್ಲಿ ಕೋಳಿ ಕಳೆದ ಸಂಕಟ ನೂರಾರುಬಾರಿ ಯೋಚಿಸಿ, ಮತ್ತಷ್ಟು ವ್ಯಗ್ರನಾದ ಅಪ್ಪ ಒಬ್ಬ ಇಲ್ಲೇ ಕಣದಲ್ಲಿ ಉಳಿಬೇಕು. ಇನ್ನೊಬ್ಬ ನನ್ನೊಂದಿಗೆ ಬರಬೇಕೆಂದು ಆಜ್ಞೆಮಾಡಿದ.
ಅಲ್ಲಿಗೆ ಹೋಗಲಾರೆ ಒಬ್ಬನೇ ಇಲ್ಲಿರಲಾರೆ ಎನ್ನುವ ಸಂಕಟದ ಸಂದರ್ಭದಲ್ಲಿ ಬಹುಧೈರ್ಯಮಾಡಿ ಅಣ್ಣ ತಾನು ಕಣದಲ್ಲುಳಿಯುತ್ತೇನೆಂದು ಭಯ, ಆತಂಕದಿಂದಲೇ ಉಸುರಿದ.
ಎತ್ತಿನ ಗಾಡಿಯಲ್ಲಿ ಬಂದಿದ್ದ ನನಗೆ ಕುಣಜಿಯಿಂದ ಕಾರ್ಗತ್ತಲ, ಸ್ಮಸಾನದ ದಾರಿ ಗುಂಟ ಸಾಗಬೇಕಾದ ಅನಿವಾರ್ಯತೆ! ನಮ್ಮ ದುರಾದೃಷ್ಟವನ್ನೂ ನಾವೇ ಹಳಿದುಕೊಂಡೆವು. ಪ್ರಾರಬ್ಧ ಮೂರ್ನಾಲ್ಕು ಕಿ.ಮೀ ಕಾಡಿನ ಮಾರ್ಗಮಧ್ಯೆ ದಾರಿಗುಂಟ ಕೋಳಿಹುಡುಕುವ ಸಾಹಸ. ಕತ್ತಲೆಯ ಕ್ರಿಮಿಕೀಟಗಳ ಚೀರಾಟದ ಗದ್ದಲದ ನಡುವೆ ಕಾಡಿನಲ್ಲಿ ನಾಡಕೋಳಿಗಳ ಸದ್ದಿಗಾಗಿ ಕಿವಿನಿಮಿರಿಸಿ ಶೋಧನೆ ನಡೆಸಿದ್ದೇ ಬಂತು. ನಮ್ಮ ಗಾಡಿಯಿಂದ ಬಿದ್ದು ಕಾಣೆಯಾಗಿದ್ದ ಒಂದುಡಜನ್ ಕೋಳಿಗಳಲ್ಲಿ ನಾಲ್ಕೈದೂ ಮರಳಿ ದೊರೆಯಲಿಲ್ಲ. ಕೋಳಿ ಕಳೆದ ಸಂಕಟ, ರಾತ್ರಿಯಿಡೀ ದೆವ್ವಗಳಂತೆ ಅಲೆದ ಸುಸ್ತು, ನಾನು ಆಯಾಸದಿಂದ ಬೆವರುತಿದ್ದರೆ ಅಪ್ಪ ಕೋಪ,ಸುಸ್ತು,ಅಸಹನೆಗಳಿಂದ ಕಪ್ಪನೆಯ ರಾತ್ರಿಯಲ್ಲೂ ಕೆಂಪಗೆ ಉರಿಯುತಿದ್ದ.
ಆ ನಿಶ್ಯಬ್ಧ ರಾತ್ರಿಯಲ್ಲಿ ನಮ್ಮ ಬ್ಯಾಟರಿ ಬೆಳಕಿಗೂ ಕಾಣದ ಕೋಳಿಗಳು ಮಾರನೆಯ ದಿವಸ ಅಲ್ಲಲ್ಲಿ ಕೂಗಿ ಎಲ್ಲೆಲ್ಲೋ ಕಂಡ ಸುದ್ದಿಗಳು ನಮ್ಮ ಕಿವಿಗೆ ಬಿದ್ದವು. ಕೆಲವರು ತಮಗೆ ಸಿಕ್ಕ ಕೋಳಿ ಕೊಟ್ಟರು.ಕೋಳಿಜ್ವರದಿಂದ ಬಚಾವಾಗುವ ಮುಂಜಾಗೃತೆಯ ನಮ್ಮಪ್ಪನ ಪ್ರಯತ್ನ ವಿಫಲಪ್ರಯತ್ನವಾಗಿ ಎರಡೂವರೆ ಡಜನ್ ಕೋಳಿಗಳಲ್ಲಿ ಎರಡು ಡಜನ್ ಮಾತ್ರ ಉಳಿದಿದ್ದವು, ನಂತರ ಆಕೋಳಿಗಳಲ್ಲಿ ಎಷ್ಟು ಕೋಳಿಗಳು ಮರಳಿ ನಮ್ಮ ಊರು, ಮನೆ ಸೇರಿಕೊಂಡವೋ ಈಗ ನೆನಪಾಗುತ್ತಿಲ್ಲ.
ಇಂಥ ನೆನಪಿನ ಗೊಂಚಲಿನ ನಾಟಿಕೋಳಿ ಮಲೆನಾಡಿನ ಹೊಸಗೆರೆ ಕಜ್ಜಾಯ ಎಂಬ ಕೋಡುಬಳೆಯಂಥ ಪದಾರ್ಥದೊಂದಿಗೆ ಹಾಗೆಯೇ ಒಡೆ, ಪೂರಿಗಳೊಂದಿಗೆ ಉತ್ತಮ ಕಾಂಬಿನೇಷನ್. ಕರೋನಾ ಲಾಕೌಟ್ ನಿಯಂತ್ರಿಸಿರುವ ಅನೇಕ ಅಂಶಗಳಲ್ಲಿ ಈ ನಾಟಿಕೋಳಿ ಮತ್ತು ಕಜ್ಜಾಯಗಳೂ ಸೇರಿವೆ. ಅಂದಹಾಗೆ ಈ ನಾಟಿಕೋಳಿಕಜ್ಜಾಯಕ್ಕೆ ಮಲೆನಾಡಿನ ರಾಜಕಾರಣಿಗಳಾದ ದಿ.ಎಸ್. ಬಂಗಾರಪ್ಪ ಮತ್ತು ಕಾಗೋಡು ತಿಮ್ಮಪ್ಪ ರಾಯಭಾರಿಗಳು ಎನ್ನುವ ಮಾತು ನಮ್ಮ ಭಾಗದಲ್ಲಿ ಬಹು ಪ್ರಚಲಿತ.
ಕರೋನಾ ಸಮಯದಲ್ಲಿ ಕಾಶಿಂ ಸಾಬರ ನೆನಪು
ಕಾಶಿಂ ಮತ್ತು ನನ್ನ ರೋಲ್ ನಂಬರ್ ಹಿಂದೆ-ಮುಂದೆ ಇದ್ದುದರಿಂದ ಕಾಶಿಂ ತನಗೆ ನಾನು ಪರೀಕ್ಷೆಯಲ್ಲಿ (ಕಾಪಿ) ನನ್ನ ಉತ್ತರಪತ್ರಿಕೆ ನೋಡಿ ಬರೆಯಲು ಬಿಟ್ಟರೆ ಮಾತ್ರ ಉರ್ದು ಕಲಿಸುವುದಾಗಿ ಭರವಸೆ ನೀಡಿದ್ದ!
ಈ ಉರ್ದು ಕಲಿಯುವ ಆಸಕ್ತಿ ಹಿಂದೆ ಆಗತಾನೆ ಕಾರವಾರಕ್ಕೆ ತೆರಳಿದ್ದ ನನಗೆ ಹಿಂದಿ,ಇಂಗ್ಲೀಷ್, ಮರಾಠಿ,ಕೊಂಕಣಿ ಬಾರದ ಬಾಷಾವೈಕಲ್ಯವೇ ಪ್ರಬಲಕಾರಣವಾಗಿತ್ತು. ಕಾಶಿಂ ಕಾರವಾರದ ಒಬ್ಬ ಮೆಕ್ಯಾನಿಕ್‍ರ ಮಗ ಅವನಿಗೆ ಉರ್ದು,ಕೊಂಕಣಿ, ಮರಾಠಿ ನೀರುಕುಡಿದಷ್ಟು ಸುಲಭವಿತ್ತು. ಈ ಕಾಶಿಂ ಮತ್ತು ರೋಹಿದಾಸ, ನಾಗೇಶ್ ರೆಲ್ಲಾ ನನಗೆ ಬಹುಶೃದ್ಧೆ ಯಿಂದಲೇ ಕೊಂಕಣಿ, ಮರಾಠಿ,ಹಿಂದಿಗಳ ಅವಾಚ್ಯ(ವಾಕ್ಯ)ಭಾಷೆ ಕಲಿಸಿದ್ದರು!
ನಾನೋ ಸಿದ್ಧಾಪುರದ ಪಕ್ಕಾ ಹಳ್ಳಿಯ ಕನ್ನಡಪ್ಪ. ಕಾರವಾರದಲ್ಲಿ ನಾನು ಉಳಿಯಬೇಕೆಂದರೆ…ನನಗೆ ಈ ಹಿಂದಿ,ಉರ್ದು,ಮರಾಠಿ,ಕೊಂಕಣಿ ಕಲಿಕೆ ಅನಿವಾರ್ಯವಾಗಿತ್ತು. ಕ್ರೀಡೆಗಳ ಬಗ್ಗೆ ಅಷ್ಟೆನೂ ಆಸಕ್ತಿಇಲ್ಲದ ನನಗೆ ವಾರದ ಪಿ.ಇ. ಪೀರಿಯಡ್ ಗಳು ಮರಳಿನಲ್ಲಿ ಕನ್ನಡ ಅಕ್ಷರ ಬರೆಯುತ್ತಾ ಅವರ ಭಾಷೆ ಕಲಿಯುವ ಅವಕಾಶದಂತಾಗಿತ್ತು.
ಅಂತೂ ಇಂತೂ ಭಾಷೆ ಮೊಳಕೆಯೊಡೆಯಲು ಪ್ರಾರಂಭಿಸಿರಬೇಕು ಆಗಲೇ ಒಂದು ಕಿರು ಪರೀಕ್ಷೆ ವಕ್ಕರಿಸಿಬಿಟ್ಟಿತ್ತು. ಎಂದಿನಂತೆ ನಾನು ಉತ್ಸಾಹದಿಂದ ಬರೆದೆ. ಕಾಶಿಂ ನನ್ನ ಉತ್ತರಗಳನ್ನು ಕಾಪಿ ಮಾಡಲು ಪ್ರಯತ್ನಿಸಿ ವಿಫಲನಾದ ಅಲ್ಲಿಂದ ಕಾಶಿಂನ ಉಚಿತ ಉರ್ದು ಪಾಠ ನಿಂತೇ ಬಿಟ್ಟಿತು.
ಕಾಪಿ ಹೊಡೆಯಲು ಅವಕಾಶವಾಗದ ಕಾರಣಕ್ಕೆ ನನ್ನಂಥ ಹಳ್ಳಿಹುಡುಗನಿಗೆ ಉರ್ದು ಕಲಿಸಲು ಬೆನ್ನತೋರಿದ ಕಾಶಿಂ ನನ್ನ ಪಾಲಿಗೆ ಒಂಥರಾ ಭಯೋತ್ಪಾದಕ! ಎನಿಸಿಬಿಟ್ಟಿದ್ದ, ಇದರೊಂದಿಗೆ ಶಾಲೆಯಲ್ಲಿ ನಮಗೆಲ್ಲಾ ಹಸಿವು ಕಾಡಿಸಲು ಪ್ರಾರಂಭಿಸುತಿದ್ದ ಸಮಯದಲ್ಲೇ ಮಧ್ಯಾಹ್ನ 12-30 ಗಂಟೆಯ ವೇಳೆಗೆ ಪಕ್ಕದ ಮುಸ್ಲಿಂರ ಮನೆಯಿಂದ ಹೊರಡುತಿದ್ದ ಬಿರ್ಯಾನಿ ಮಸಾಲೆವಾಸನೆ ನಮ್ಮ ಮೂಗಿಗೆ ಇರಿದು ಕಾಶಿಂ ಬಗ್ಗೆ ಇದ್ದ ನಮ್ಮ ವಿರೋಧ, ಉಪೇಕ್ಷೆ ಮತ್ತಷ್ಟು ಹೆಚ್ಚುತಿತ್ತು.
ಹೀಗೆ ಶಾಲೆಯಲ್ಲಿ ವಿನಾಕಾರಣ ನಮಗೆ ವಿರೋಧಿಯಾದ ಕಾಶಿಂ.
ಈ ಅನುಭವಕ್ಕಿಂತ ಮೊದಲೇ ನಮ್ಮಪ್ಪ ಮನೆಯಲ್ಲಿ ಆಗೀಗ ಹೇಳುತಿದ್ದ ಮುಸ್ಲಿಂರು ಸತ್ತಾಗ ನಗುತ್ತಾರೆ, ಹುಟ್ಟಿದಾಗ ಅಳುತ್ತಾರೆ, ಉಲ್ಟಾಪುಲ್ಟಾ ಓದುತ್ತಾರೆ,ಎನ್ನುವ ತಪ್ಪುಗೃಹಿಕೆಯ ಮಾತು ಮುಸ್ಲಿಂರಲ್ಲಿ ನಮಗೆ ನಮಗರಿವಿಲ್ಲದೆ ವಿರೋಧದ ಭಾವನೆ ಹುರಿಗಟ್ಟುವಂತೆ ಮಾಡಿತ್ತು.
ಇಂಥ ಅನಾವಶ್ಯಕ ವಿಚಾರಗಳು ನಮ್ಮ ಮನಸ್ಸು ಕಲುಷಿತಗೊಳಿಸಲು ಕಾರಣ. ಬಾಲ್ಯದಲ್ಲಿ ನಮ್ಮೂರಲ್ಲಿಲ್ಲದ ಮುಸ್ಲಿಂ ರ ಬಗ್ಗೆ ನಮಗೆ ಯಾವುದೇ ಹಿತ-ಅಹಿತಗಳ ಅನುಭವವೇ ಇರಲಿಲ್ಲ. ಆದರೆ ಕೆಲವರ ತಪ್ಪು ಗೃಹಿಕೆ, ಉದ್ದೇಶಿತ ಮುಸ್ಲಿಂ ಆಪಾದನೆಗಳೇ ಸತ್ಯ ಎಂದು ಹುಬೇ ಹುಬೇ ಎಂದು ನಂಬಿ ನಡೆಯುತಿದ್ದ ದಿನಗಳವು. ಕಾರವಾರದಲ್ಲಿ ನನ್ನ ಹತ್ತು ವರ್ಷಗಳ ಅನುಭವದಲ್ಲಿ ಎಲ್ಲಿಯೂ ಜಾತಿ-ಧರ್ಮಗಳ ವ್ಯತ್ಯಾಸ, ಕಹಿಅನುಭವಗಳೇ ತಟ್ಟಲಿಲ್ಲ. ಆದರೆ ಶಿರಸಿಯಲ್ಲಿ ಮುಸ್ಲಿಂಗಲ್ಲಿ ಡೇಂಜರ್, ಭಟ್ಕಳದಲ್ಲಿ ಚಿನ್ನದ ಪಳ್ಳಿ ಏರಿಯಾ ಭಯಾನಕ,ಹುಬ್ಬಳ್ಳಿಯಲ್ಲಿ ಕಮರಿಪೇಟೆ, ಬೆಂಗಳೂರಿನ ಶಿವಾಜಿನಗರ,ಆಜಾದ್ ನಗರ ಡೇಂಜರ್ ಎನ್ನುವ ನಮ್ಮವರ ಆರೋಪದ ಮಾತುಗಳಿದ್ದವಲ್ಲ ಅವು ಈ ಪ್ರದೇಶಗಳಲ್ಲೆಲ್ಲಾ ಭಯದಿಂದಲೇ ಓಡಾಡಿದ ನಮ್ಮ ಅನುಭವಕ್ಕೇ ತಟ್ಟಲಿಲ್ಲ.
ಅಲ್ಲಿಂದ ಶಿರಸಿಗೆ ಬಂದ ದಿನಗಳಲ್ಲಿ ಅಲ್ಲಿಯ ಜಾತೀಯತೆ,ಮುಸ್ಲಿಂ ವಿರೋಧ ನನ್ನನ್ನು ಕಾಡದೆ ಇರಲಿಲ್ಲ. ಇಂಥ ಪೂರ್ವಾಗ್ರಹಗಳಿಂದ ವಾಹಿನಿಯೊಂದರ ಜಿಲ್ಲಾ ವರದಿಗಾರನಾದ ನನಗೆ ಎಲ್ಲರಂತೆ ಮುಸ್ಲಿಂ, ಕ್ರೈಸ್ತರ ಸ್ನೇಹ-ಸಂಪರ್ಕಗಳೂ ಆದವು.
ಕಾರವಾರದ ಕಾಶಿಂ ನಿಂದ ಪ್ರಾರಂಭಿಸಿ ಸಿದ್ದಾಪುರದ ಮುನಾವರ್, ಕುಮಟಾದ ಬೋಟ್ ಮೀನು ತರುತ್ತಿದ್ದ ದಾಹೂದ್,ಇಲಿಯಾಸ್,ನಾಶಿರ್,ಹಮೀದ್,ರಹಮತ್, ವರೆಗೆ ಅನೇಕ ಮುಸ್ಲೀಂರ ಸ್ನೇಹ-ಸಂಪರ್ಕಗಳಾಗಿವೆ. ಆದರೆ ಅವರ ಬಗ್ಗೆ ಸಾರ್ವಜನಿಕರು ಹೊಂದಿರುವ ಕಹಿಧೋರಣೆಗಳು, ತಪ್ಪುಗೃಹಿಕೆಗಳು ಯಾವುದೇ ಸಂದರ್ಭದಲ್ಲಿ ನನ್ನನ್ನು ಬಾಧಿಸಿಲ್ಲ.
ಇಂಥ ಕಹಿಸಮಾಜದೆದುರು ಹಾಸ್ಟೆಲ್ ವಿದ್ಯಾರ್ಥಿಗಳಾಗಿದ್ದ ನಮಗೆ ತಮ್ಮ ಹಬ್ಬಗಳಲ್ಲಿ ಮನೆಯಿಂದ ಕಟ್ಟಿತಂದು ಕೊಡುತಿದ್ದ ಸಿಹಿಪಾಯಸ, ಬಿರ್ಯಾನಿ ರುಚಿ ನೋಡಲು ಉದಾರವಾಗಿ ದಾನಮಾಡಿ ಸಂಬ್ರಮಿಸುತಿದ್ದ ನಮ್ಮ ಸಹಪಾಠಿಗಳಾದ ಮೊಬಿನಾ,ಪರ್ಜಾನರ ಮಾನವೀಯ ಅಂತ:ಕರಣ ನೆನಪಾಗುತ್ತದೆ.
ಹಬ್ಬದ ದಿವಸ ಕರೆದು ಊಟಹಾಕಿ ಖುಷಿಪಡುವ ಇಲಿಯಾಸ್, ಮುಜೀಬ್, ಅಜೀಜ್,ಸಲ್ಮಾನ್, ರಿಜ್ವಾನ್ ಎಲ್ಲಾ ನೆನಪಗುತ್ತಾರೆ. ಮುಸ್ಲಿಂ ವಿಚಾರದಲ್ಲಿ ನಮಗೆ ಕೆಟ್ಟ ಅನುಭವಗಳು ಕಡಿಮೆ ಆದರೆ ನಮ್ಮ ಜೊತೆಯವರು, ನೆರೆ-ಹೊರೆಯವರು ಸಕಾರಣವೋ? ಅಕಾರಣವೋ? ವಿನಾಕಾರಣವೋ ಬೆಳೆಸಿಕೊಂಡ ಧಾರ್ಮಿಕದ್ವೇಶ ನಮ್ಮನ್ನು ಕಾಡುತ್ತದೆ.
ಬದುಕಿನಲ್ಲಿ,ಸಂದಿಗ್ಧ,ತೊಂದರೆ,ಅಪಾಯದ ಸಂದರ್ಭಗಳಲ್ಲೆಲ್ಲೂ ನಮಗೆ ದ್ರೋಹ ಬಗೆಯದ ಮುಸ್ಲಿಂ ರ ಬಗ್ಗೆ ವಿನಾಕಾರಣ ಕಹಿಭಾವನೆ ಹುಟ್ಟಿಹಾಕುವ ವ್ಯವಸ್ಥೆ ಎದುರು ಅಪಾರ ಪೂರ್ವಗ್ರಹಗಳನ್ನಿಟ್ಟುಕೊಂಡೇ ಕಾರವಾರದ ಕೆಲವು ಸ್ನೇಹಿತರು, ಭಟ್ಕಳದ ಇನಾಯತ್, ಸೈಯದ್ ಬರ್ಮಾವರ, ಅಂಕೋಲಾದ ಅಬ್ದುಲ್ ಖರೀಮ್ ಸೇರದಂತೆ ಅನೇಕ ಸಹೃದಯಿಗಳ ಮನೆಯ ಉಪ್ಪು ಉಂಡು, ಅವರಲ್ಲಿಲ್ಲದ ದೋಷ ಹುಡುಕುವುದುಹ್ಯಾಗೆ?
ಹುಬ್ಬಳ್ಳಿ-ಭಟ್ಕಳ,ಶಿವಮೊಗ್ಗ ಸೇರಿದ ಕರ್ನಾಟಕ, ಭಾರತದ ಅನೇಕ ಕಡೆ ಧಾರ್ಮಿಕ ಸಹಿಷ್ಣುಗಳಾದ ನಮ್ಮ ಮೂಲನಿವಾಸಿ ಮತಾಂತರಿ ಮುಸ್ಲಿಂರ ಬಗ್ಗೆ ಯಾರದೋ ಕಾರಣಕ್ಕೆ, ತಬ್ಲಘಿ ಅಥವಾ ಮತ್ಯ್ಯಾವುದೋ ಪಾದರಾಯಣಪುರದ ಕೆಲವು ಪುಂಡರ ಕಾರಣಕ್ಕೆ, ಅವರನ್ನು ವಿರೋಧಿಸುವ ಕೆಲವು ರಾಜಕೀಯ ಹಿತಾಸಕ್ತ, ಲಾಭಕೋರ ವಂಚಕ ಮತಾಂಧರ ದುರ್ಭೋದೆಗೆ ಸಿಕ್ಕು ಚಿನ್ನದಂಥ ಮನಸ್ಸಿನ ನಮ್ಮದೇ ಊರು,ಸರೀಕರ ಸ್ನೇಹ, ವಿಶ್ವಾಸ ಕಳೆದುಕೊಳ್ಳಬೇಕೆ?
ಮುಸ್ಲಿಂರು ನಮ್ಮ ದಲಿತರಂತೆ, ಅನೇಕ ಹಿಂದುಳಿದ ವರ್ಗಗಳ ಅವಿದ್ಯಾವಂತರಂತೆ ವಿಚಿತ್ರ ಹುಂಬರಿರಬಹುದು ಆದರೆ ಎದುರು ನಯವಾಗಿ ಮಾತನಾಡಿ ಹಿಂದಿನಿಂದ ಇರಿಯುವ,ಆಡುವ ಸೋಕಾಲ್ಡ್ ಸಂಪನ್ನರಂತೆ ನಮ್ಮವರಾಗಿ ನಮ್ಮವರಾಗದ ನಮ್ಮವರ ನಡುವೆ ನಮ್ಮವರು, ಪರರು, ಅವರಿವರೆನ್ನದ ಅನೇಕ ಮುಸ್ಲಿಂ ಸಹೋದರರೇ ನಮ್ಮವರಲ್ಲ ಎಂದು ನಾನ್ಹ್ಯಾಗೆ ದೂರಲಿ. ಇಂಥ ತಲ್ಲಣಗಳ ನಡುವೆ ನನ್ನದೊಂದು ಕವಿತೆಯನ್ನೂ ಓದಿ ಬಿಡಿ.
ಅಪೇಕ್ಷೆ
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ
ಕರೋನಾ ಎನ್ನುವ ಖಾಯಿಲೆಗೆ ಸಿಕ್ಕು ಒದ್ದಾಡುತ್ತಿರುವ ಜನರನ್ನು ವಾಮಾಚಾರದಿಂದಾದರೂ
ವಾಸಿ ಮಾಡುವ ಮಾಂತ್ರಿಕರು ಬೇಕಾಗಿದ್ದಾರೆ.
ಹಸುಗೂಸು,ಎಳೆಶಿಸು, ಸಾಯುವ ಮುದುಕ, ಕಾಯುವ ವಾಚ್ಮನ್
ಎಲ್ಲರನ್ನೂ ಕಾಪಾಡುವ ದೇವರು ಬೇಕಾಗಿದ್ದಾರೆ.
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ
ಕೋಟ್ಯಾಂತರ ಮುಖಗವಸು,ವೆಂಟಿಲೇಟರ್, ಔಷಧಿ,ತಯಾರಿಸಿ ಆರೈಕೆ ಮಾಡಿ
ವಿಶ್ವಗುರುವಾಗುವ ಒಬ್ಬನೇ ಒಬ್ಬ ಪ್ರಧಾನಿ ಬೇಕಾಗಿದ್ದಾರೆ.
ಎಲ್ಲರನ್ನೂ ನಡುಗಿಸಿ, ಎಲ್ಲರನ್ನೂ ಕರೋನಾದಿಂದ ರಕ್ಷಿಸುವ ಜಗತ್ತಿನ ದೊಡ್ಡಣ್ಣ ಒಬ್ಬ ಬೇಕಾಗಿದ್ದಾರೆ.
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ.
ಹೋಮ,ಹವನ, ಜಪ,ತಪ, ಸಹಸ್ರನಾಮ, ಕೋಟಿ,ಕೋಟಿ ಮಂತ್ರ-ತಂತ್ರ,ಸಹಸ್ರನಾಮಾರ್ಚನೆ
ಎಲ್ಲವನ್ನೂ ಮಾಡಿ ಕರೋನಾದಿಂದ ಜಗತ್ತನ್ನು ಬಚಾವುಮಾಡುವ ಶುದ್ಧ ಧಾರ್ಮಿಕ ಪುರೋಹಿತರು ಬೇಕಾಗಿದ್ದಾರೆ.
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ
ಉಚ್ಚೆಬೆಚ್ಚಗಾದರೆ, ಕನಸುಒಡೆದು ನಿದ್ದೆ ಹೋದರೆ..
ಭಸ್ಮ ಕೊಟ್ಟು ಎಲ್ಲವನ್ನೂ ಸರಿಮಾಡುವ ಗಾಡಿಗರೊಬ್ಬರು ಬೇಕಾಗಿದ್ದಾರೆ.
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ.
ಸ್ನೇಹಕ್ಕೆ ಬದ್ಧ,ಸಮರಕ್ಕೆ ಸಿದ್ಧ ಎನ್ನುವ ಧಾರ್ಮಿಕ ಕಟ್ಟಾಳುಗಳು,ದೇವರು,ಧರ್ಮವೇ ನಿಜ ಎನ್ನುವ ನಿಜ ಧಾರ್ಮಿಕರು ಕರೋನಾ ವಿರುದ್ಧದ ಸಮರಕ್ಕೆ ಬೇಕಾಗಿದ್ದಾರೆ.
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ.
ಮನೆ.ಮಠ,ಆಹಾರ,ವಿಹಾರ ಬಿಟ್ಟು ವೈದ್ಯೋ ನಾರಾಯಣ ಹರಿ ಎನಿಸಿಕೊಂಡವರಿಗೆ
ಸುಖ,ನೆಮ್ಮದಿ,ಸಂತೋಷಕ್ಕೆ ಒದ್ದು ರೋಗಿಗಳ ಕಣ್ಣಿರು ಒರೆಸುತಿದ್ದವರಿಗೆ ಕರ್ತವ್ಯವೇ ದೇವರು ಎಂದು ಬಗೆದು ಲಾಠಿಹಿಡಿದು, ಬೂಟು ತೊಟ್ಟು ಸಮಾಜಸಂತೈಸುತ್ತಿರುವವರಿಗೆ
ಶಕ್ತ ಕೊಡುವ ದೇವರು ಬೇಕಾಗಿದ್ದಾರೆ.
ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ.
ದಾನಧರ್ಮ ಮಾಡಿ ಪೋಟೋ ಹೊಡೆಸಿಕೊಳ್ಳದವರು, ಬಡವರು, ದುರ್ಬಲರಿಗೆ ನೆರವು ನೀಡಿ ಮಾಧ್ಯಮಪ್ರಚಾರ ಬಯಸದವರು ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ.
-ಸಮಾಜಮುಖಿ ಕನ್ನೇಶ್, ಕೋಲಶಿರ್ಸಿ,
8277517164
1 Comment